ದಾಬಸ್‌ಪೇಟೆ: ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡ ಪರಿಣಾಮ ಎರಡೂ ಪಕ್ಷಗಳಿಗೂ ಆನೆಬಲ ಬಂದಂತಾಗಿದ್ದು, ನಮ್ಮ ಕ್ಷೇತ್ರದಲ್ಲಿ ಸಂಪೂರ್ಣ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಗೆಲುವು ನಿಶ್ಚಿತ ಎಂದು ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ತಿಳಿಸಿದರು.
ತ್ಯಾಮಗೊಂಡ್ಲು ಹೋಬಳಿಯ ಬೈರನಾಯ್ಕನಹಳ್ಳಿ ಗ್ರಾಮದ ಜೆಡಿಎಸ್ ಮುಖಂಡ, ಮಾಜಿ ಸಚಿವ ದಿ.ಚನ್ನಿಗಪ್ಪನವರ ಮನೆಗೆ ಭೇಟಿ ನೀಡಿ ಅವರ ಸುಪುತ್ರ ವೇಣುಗೋಪಾಲ್ ಹಾಗೂ ಕುಟುಂಬಸ್ಥರ ಜೊತೆ ಚುನಾವಣೆಯ ಬಗ್ಗೆ ಚರ್ಚೆ ನಡೆಸಿದರು.ಪ್ರಧಾನಿ ನರೇಂದ್ರ ಮೋದಿಯವರನ್ನು ಮೂರನೇ ಬಾರಿಗೆ ಪ್ರಧಾನಮಂತ್ರಿಯಾಗಿ ನೋಡಲು ದೇಶದ ಜನ ಬಯಸಿದ್ದು, ದೇಶದಲ್ಲಿ ೪೦೦ಕ್ಕೂ ಹೆಚ್ಚು ಅಧಿಕ ಕ್ಷೇತ್ರಗಳಲ್ಲಿ ಬಿಜೆಪಿ ಪಕ್ಷ ಜಯಭೇರಿ ಬಾರಿಸಲಿದೆ. ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಪ್ರತಿ ಮನೆಗೂ ತಿಳಿಸಿ ಮತಯಾಚನೆ ಮಾಡಬೇಕಿದೆ ಎಂದರು.
ನಮ್ಮ ಪಕ್ಷದ ಹಾಗೂ ಜೆಡಿಎಸ್ ಪಕ್ಷದ ಕಾರ್ಯಕರ್ತರು ಮುಂದಿನ ಮತದಾನದ ದಿನಾಂಕದವರೆಗೂ ಮೈತ್ರಿ ಅಭ್ಯರ್ಥಿ ಪರವಾಗಿ ಮತ ಕೇಳಬೇಕು. ಈಗಾಗಲೇ ಎರಡು ಪಕ್ಷಗಳ ಸಮನ್ವಯ ಸಭೆ ನಡೆಸಿದ್ದು ಎಲ್ಲರೂ ಒಮ್ಮತದಿಂದ ಸಹಕಾರ ನೀಡಿದ್ದಾರೆ ಎಂದರು.ಜಿಪಂ ಮಾಜಿ ಸದಸ್ಯ ವೇಣುಗೋಪಾಲ್ ಮಾತನಾಡಿ, ಲೋಕಸಭೆ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಅನ್ಯಪಕ್ಷಗಳತ್ತ ಮುಖ ಮಾಡದೇ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿಸಲು ಈ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದ ಡಾ.ಕೆ. ಸುಧಾಕರ್ ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ಚುನಾವಣೆ ವೇಳೆ ಪಕ್ಷಾಂತರ ಸಹಜ. ಆದರೆ, ನಮ್ಮ ತಂದೆ ಹಾಕಿಕೊಟ್ಟ ಬುನಾದಿಯಲ್ಲಿ ನಾನು ನಡೆಯುತ್ತೇನೆ. ಕ್ಷೇತ್ರದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿ ಸಂಸದರು ಅಧಿಕಾರಕ್ಕೆ ಬರಲಿದ್ದಾರೆ. ಕೇಂದ್ರ ಸರ್ಕಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಕೇಂದ್ರ ರೈಲ್ವೆ ಮಂತ್ರಿಗಳಾಗಿ ಹಾಗೂ ಡಾ.ಮಂಜುನಾಥ್ ಅವರನ್ನು ಆರೋಗ್ಯ ಮಂತ್ರಿ ಮಾಡಬೇಕು ಎಂದು ಮನವಿ ಮಾಡಿದರು.
ಪೋಟೋ 12 :ತ್ಯಾಮಗೊಂಡ್ಲು ಹೋಬಳಿಯ ಬೈರನಾಯ್ಕನಹಳ್ಳಿಯ ಜೆಡಿಎಸ್ ಮುಖಂಡ, ಮಾಜಿ ಸಚಿವ ದಿ.ಚನ್ನಿಗಪ್ಪನವರ ಮನೆಗೆ ಭೇಟಿ ನೀಡಿ ಸುಪುತ್ರ ವೇಣುಗೋಪಾಲ್ ಹಾಗೂ ಕುಟುಂಬಸ್ಥರ ಜೊತೆ ಬಿಜೆಪಿ ತಾಲೂಕು ಅಧ್ಯಕ್ಷ ಜಗದೀಶ್ ಚೌಧರಿ ಚುನಾವಣೆ ಬಗ್ಗೆ ಚರ್ಚಿಸಿದರು.