ಸುಧಾರಿತ ಅರಣ್ಯ ಕೃಷಿಯಿಂದ ಹಲವು ಅನುಕೂಲ:

KannadaprabhaNewsNetwork |  
Published : Jun 29, 2025, 01:35 AM IST
ಫೋಟೊ ಶೀರ್ಷಿಕೆ: 28ಆರ್‌ಎನ್‌ಆರ್2ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಕೃಷಿ ಅರಣ್ಯದ ಮಹತ್ವ ಕುರಿತ ಕಾರ್ಯಾಗಾರವನ್ನು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಾಥ ಕಡೋಲ್ಕರ್ ಉದ್ಘಾಟಿಸಿದರು.  | Kannada Prabha

ಸಾರಾಂಶ

ರಾಣಿಬೆನ್ನೂರು ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಕೃಷಿ, ಅರಣ್ಯದ ಮಹತ್ವ ಕುರಿತು ಕಾರ್ಯಾಗಾರ ನಡೆಯಿತು.

ರಾಣಿಬೆನ್ನೂರು: ಪ್ರತಿ ವರ್ಷ ಜಾಗತಿಕ ಉಷ್ಣತೆ ಹೆಚ್ಚಾಗುತ್ತಿರುವುದರಿಂದ ಹಿಮಗಳು ಕರಗುತ್ತಿದ್ದು, ಭೂಮಿಯಲ್ಲಿ ನೀರು ಆಕ್ರಮಿಸುತ್ತಿದೆ ಎಂದು ಧಾರವಾಡ ಕೃಷಿ ವಿವಿ ಶಿಕ್ಷಣ ನಿರ್ದೇಶಕ ಡಾ. ವಿ.ಆರ್. ಕಿರೇಸೂರ ಹೇಳಿದರು.

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸ್ಥಳೀಯ ನೀಡ್ಸ್ ಸಂಸ್ಥೆ, ಅರಣ್ಯ ಇಲಾಖೆ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಬದಲಾಗುತ್ತಿರುವ ಹವಾಮಾನ ಸನ್ನಿವೇಶದಲ್ಲಿ ಕೃಷಿ, ಅರಣ್ಯದ ಮಹತ್ವ ಕುರಿತು ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಅವರು ಮಾತನಾಡಿದರು.

ಅತಿ ಹೆಚ್ಚು ರಾಸಾಯನಿಕ ಗೊಬ್ಬರಗಳ ಬಳಕೆ, ಅರಣ್ಯನಾಶದಿಂದ ರೈತರ ಬೆಳೆಯ ಇಳುವರಿ ಕುಂಠಿತವಾಗುತ್ತಿದೆ. ಸುಧಾರಿತ ಅರಣ್ಯ ಕೃಷಿಯಿಂದ ಪ್ರತಿ ಹೆಕ್ಟೇರಿಗೆ 2ರಿಂದ 9 ಟನ್ ವಾತಾವರಣದ ಇಂಗಾಲದ ಡೈಆಕ್ಸೈಡ್‌ನ್ನು ಸೆರೆಹಿಡಿಯಬಹುದು ಮತ್ತು ಸಂಗ್ರಹಿಸಬಹುದು. ಮಣ್ಣುಕೊಚ್ಚಿ ಹೋಗುವುದನ್ನು ಶೇ. 65ರಷ್ಟು ಕಡಿಮೆಗೊಳಿಸಬಹುದು. ಜೈವಿಕ ವೈವಿಧ್ಯತೆಯನ್ನು ಶೇ. 30ರಷ್ಟು ಹೆಚ್ಚಿಸಬಹುದು. ರೈತರ ಆದಾಯವನ್ನು ದೀರ್ಘಾವಧಿ ಸಮಯದಲ್ಲಿ ಶೇ. 20ರಿಂದ 50 ರಷ್ಟು ಹೆಚ್ಚಿಸಬಹುದು. ಮರಗಳನ್ನು ನೆಡುವುದು ಸಾಧ್ಯವಾಗದಿದ್ದರೆ ಗಿಡ ಮರಗಳನ್ನು ಕಡಿಯುವುದನ್ನು ನಿಲ್ಲಿಸಬೇಕು ಎಂದರು.

ಕಾರ್ಯಾಗಾರ ಉದ್ಘಾಟಿಸಿದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಾಥ ಕಡೋಲ್ಕರ್ ಮಾತನಾಡಿ, ಪರಿಸರ ಮಾಲಿನ್ಯ ತಡೆಗಟ್ಟಲು ಅರಣ್ಯ ಇಲಾಖೆ, ಸರ್ಕಾರದೊಂದಿಗೆ ರೈತರೂ ಕೈಜೋಡಿಸಬೇಕು. ವಲಯ ಮಟ್ಟದ ಅರಣ್ಯ ನರ್ಸರಿಗಳಲ್ಲಿ ರೈತರಿಗೆ ಸಸಿ ವಿತರಣೆ ಮಾಡಿ ಪ್ರೋತ್ಸಾಹಧನವನ್ನು ಸಹ ನೀಡಲಾಗುತ್ತಿದ್ದು, ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು.

ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಹಾಗೂ ಆವರಣ ಮುಖ್ಯಸ್ಥ ಡಾ. ಎ.ಜಿ. ಕೊಪ್ಪದ ಮಾತನಾಡಿ, ದೇಶದಲ್ಲಿ ಮರಗಳ ಸಂಖ್ಯೆ ಕ್ಷೀಣಿಸುತ್ತಿದ್ದು, ಒಟ್ಟಾರೆ ಅರಣ್ಯ ಪ್ರದೇಶ ಶೇ. 22ರಷ್ಟಿದೆ. ಕೃಷಿ ಅರಣ್ಯ ಶೇ. 2ರಿಂದ 3ರಷ್ಟಿದೆ. ಕುಂಠಿತಗೊಂಡಿರುವ ಅರಣ್ಯ ವಿಸ್ತೀರ್ಣದಿಂದ ಹವಾಮಾನದಲ್ಲಿ ಏರುಪೇರಾಗಿ ವಾತಾವರಣದಲ್ಲಿ ಇಂಗಾಲದ ಪ್ರಮಾಣ, ಉಷ್ಣತೆ ಹೆಚ್ಚುತ್ತಿದೆ. ಇದರ ಬಗ್ಗೆ ರೈತರಿಗೆ ಅರಿವು ಮೂಡಿಸಲು ಈ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದರು.

ಧಾರವಾಡ ಕೃಷಿ ವಿವಿ ವ್ಯವಸ್ಥಾಪನಾ ಮಂಡಳಿ ಸದಸ್ಯ ವೀರನಗೌಡ ಪೊಲೀಸ್‌ಗೌಡ್ರ, ಶಿರಸಿ ಅರಣ್ಯ ಮಹಾವಿದ್ಯಾಲಯ ವಿದ್ಯಾಧಿಕಾರಿ ಡಾ. ಆರ್. ವಾಸುದೇವ, ಹನುಮನಮಟ್ಟಿ ಕೃಷಿ ಮಹಾವಿದ್ಯಾಲಯದ ನಿಕಟಪೂರ್ವ ವಿದ್ಯಾಧಿಕಾರಿ ಡಾ. ಜೆ.ಎಸ್. ಹಿಳ್ಳಿ, ಕಾಕೋಳ ಗ್ರಾಮದ ಪ್ರಗತಿಪರ ರೈತ ಚನ್ನಬಸಪ್ಪ ಕೊಂಬಳಿ ಮಾತನಾಡಿದರು.

ನೀಡ್ಸ್ ಸಂಸ್ಥೆ ಸಿಇಒ ಎಚ್.ಎಫ್. ಅಕ್ಕಿ, ಪ್ರಗತಿಪರ ರೈತರಾದ ಶಂಕರಗೌಡ ಪಾಟೀಲ್‌, ನಿಜಲಿಂಗಪ್ಪ ಬಸೆಗಣ್ಣಿ, ಡಾ. ಗಣಪತಿ ಟಿ., ಡಾ. ಎ.ಎಚ್. ಬಿರಾದಾರ ಹಾಗೂ ಕೃಷಿ ಮಹಾವಿದ್ಯಾಲಯದ ಸಿಬ್ಬಂದಿ, ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳು, ಅರಣ್ಯ ಇಲಾಖೆಯ ಸಿಬ್ಬಂದಿ, ನೀಡ್ಸ್ ಸಂಸ್ಥೆಯ ಸಿಬ್ಬಂದಿ, ಕೃಷಿ ವಿದ್ಯಾರ್ಥಿಗಳು, 100ಕ್ಕೂ ಹೆಚ್ಚು ರೈತರು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಅಂಗವಾಗಿ 50ಕ್ಕೂ ಹೆಚ್ಚು ಜೈವಿಕ ಇಂಧನ ಸಸಿಗಳನ್ನು ನೆಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ