ಮಾದಕ ವ್ಯಸನ ಮುಕ್ತ ಭಾರತ ಕಟ್ಟಲು ಸಂಕಲ್ಪ ಅಗತ್ಯ: ಡಿವೈಎಸ್‌ಪಿ ವಿನಾಯಕ ಶೆಟಗೇರಿ

KannadaprabhaNewsNetwork |  
Published : Jun 29, 2025, 01:35 AM IST
ಮಾದಕ ಮುಕ್ತ ಭಾರತ ಕಟ್ಟುವ ಸಂಕಲ್ಪ ಯುವ ಜನತೆ ಮಾಡಬೇಕು : ವಿನಾಯಕಶೆಟಗೇ | Kannada Prabha

ಸಾರಾಂಶ

ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ಇಂತಹ ವ್ಯಸನಗಳಿಂದ ದೂರವಿದ್ದು, ತಮ್ಮ ಕುಟುಂಬ, ಪರಿಸರ ಮತ್ತು ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳಲ್ಲಿ ಮಾದಕ ವ್ಯಸನಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಬೇಕು.

ಕನ್ನಡಪ್ರಭ ವಾರ್ತೆ ತಿಪಟೂರು

ದೇಶದಲ್ಲಿ ಯುವ ಪೀಳಿಗೆಯು ಮಾದಕ ವ್ಯಸನಕ್ಕೆ ಹೆಚ್ಚು ಬಲಿಯಾಗುತ್ತಿದ್ದು, ಇಂಥ ಕೆಟ್ಟ ಹವ್ಯಾಸಗಳನ್ನು ಬಿಟ್ಟು ಮಾದಕ ವ್ಯಸನ ಮುಕ್ತ ಭಾರತ ಕಟ್ಟುವ ಸಂಕಲ್ಪವನ್ನು ಯುವಜನತೆ ಮಾಡಬೇಕೆಂದು ಡಿವೈಎಸ್‌ಪಿ ವಿನಾಯಕ ಶೆಟಗೇರಿ ತಿಳಿಸಿದರು.

ತಿಪಟೂರು ನಗರ ಪೊಲೀಸ್ ಠಾಣೆ ವತಿಯಿಂದ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಸೇವನೆ ಮತ್ತು ಸಾಗಾಣಿಕೆ ವಿರೋಧಿ ಜಾಗೃತಿ ಅಭಿಯಾನದ ಅಂಗವಾಗಿ ಆಯೋಜಿಸಿದ್ದ ಮ್ಯಾರಥಾನ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಯುವಕರು ಮಾದಕ ವ್ಯಸನಗಳಿಗೆ ಬಲಿಯಾಗಿ ತಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿಗಳು ಇಂತಹ ವ್ಯಸನಗಳಿಂದ ದೂರವಿದ್ದು, ತಮ್ಮ ಕುಟುಂಬ, ಪರಿಸರ ಮತ್ತು ತಮ್ಮ ಸುತ್ತಮುತ್ತಲಿನ ವ್ಯಕ್ತಿಗಳಲ್ಲಿ ಮಾದಕ ವ್ಯಸನಗಳಿಂದ ದೂರವಿರುವಂತೆ ಜಾಗೃತಿ ಮೂಡಿಸಬೇಕು. ಮಾದಕ ವಸ್ತುಗಳು ದೈಹಿಕ ಮತ್ತು ಮಾನಸಿಕವಾಗಿ ವ್ಯಕ್ತಿಯನ್ನು ಹಾಳು ಮಾಡುತ್ತವೆ. ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಹೆಚ್ಚು ಅರಿವು ಮೂಡಿಸುವ ಮೂಲಕ ಈ ಪಿಡುಗನ್ನು ದೂರ ಮಾಡಬೇಕಾದರೆ ಎಲ್ಲಾ ಇಲಾಖೆಗಳು, ಸಂಘ ಸಂಸ್ಥೆಗಳು, ನಾಗರಿಕರು ಕೈಜೋಡಿಸಬೇಕು. ಸಾರ್ವಜನಿಕರಿಗೆ ಆದಷ್ಟು ದುಶ್ಚಟಗಳ ಬಗ್ಗೆ ಅರಿವು ಮೂಡಿಸಬೇಕು. ಒಂದು ವರದಿ ಪ್ರಕಾರ ೨೯೨ ಮಿಲಿಯನ್ ಜನರು ಈ ಮಾದಕ ವಸ್ತುಗಳಿಗೆ ದಾಸರಾಗಿದ್ದಾರೆ, ಆದ್ದರಿಂದ ಈ ಕೆಟ್ಟ ಚಟಕ್ಕೆ ಯಾರೂ ಬಲಿಯಾಗದಿರಿ ಎಂದು ಸಲಹೆ ನೀಡಿದರು.

ತಹಸೀಲ್ದಾರ್ ಪವನ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಇಂಥ ದುಶ್ಚಟಗಳ ಬಗ್ಗೆ ಅರಿವು ಮೂಡಿಸುವುದು ನಮ್ಮ ಜವಾಬ್ದಾರಿ. ಪೋಷಕರು ಮತ್ತು ಶಿಕ್ಷಕರು ಸಹ ಮಕ್ಕಳಿಗೆ ಮಾದಕ ವಸ್ತುಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಬೇಕು. ದೇಶವನ್ನು ಮುನ್ನಡೆಸುವ ಪ್ರಜೆಗಳಾಗಿರುವ ನೀವು ಕೆಟ್ಟ ಚಟಗಳಿಂದ ದೂರವಿದ್ದು ದೇಶದ ಅಭಿವೃದ್ಧಿಗೆ ಮುಂದಾಗಬೇಕೆಂದರು.

ಕುಮಾರ್ ಆಸ್ಪತ್ರೆಯ ಡಾ. ಶ್ರೀಧರ್ ಮತ್ತು ಶ್ರೀರಂಗ ಆಸ್ಪತ್ರೆಯ ವೈದ್ಯ ಡಾ. ವಿವೇಚನ್ ಮಾತನಾಡಿ, ಮಾದಕ ವಸ್ತುಗಳ ಬಳಕೆಯಿಂದ ಇಡಿ ಜೀವನವನ್ನೇ ನರಕ ಮಾಡಿಕೊಳ್ಳಬೇಕಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಗಾಂಜಾ, ಅಫೀಮು, ಅಮಲು ಮಾತ್ರೆಗಳಂತಹ ಮಾದಕ ವ್ಯಸನಕ್ಕೆ ಯುವಪೀಳಿಗೆ ಬಲಿಯಾಗುವ ಜೊತೆಗೆ ಮೊಬೈಲ್ ಬಳಕೆಯೂ ಒಂದು ರೀತಿ ಮಾದಕ ವಸ್ತುವಾಗಿಬಿಟ್ಟಿದೆ. ಎಷ್ಟೋ ಯುವ ವಿದ್ಯಾರ್ಥಿಗಳು ಇಂತಹ ಕೆಟ್ಟ ವ್ಯಸನಗಳಿಗೆ ಬಲಿಯಾಗಿ ಜೀವನ ನರಕ ಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳು ಜಾಗೃತರಾಗಿ ವ್ಯಸನ ಮುಕ್ತ ಸಮಾಜವನ್ನಾಗಿಸಬೇಕೆಂದರು.

ನಗರಸಭೆಯಿಂದ ಪ್ರಮುಖ ರಸ್ತೆಗಳಲ್ಲಿ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳಿಂದ ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಕಾರ್ಯಕ್ರಮದಲ್ಲಿ ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ತಾಪಂ ಇಒ ಸುದರ್ಶನ್, ಬಿಇಒ ಚಂದ್ರಯ್ಯ, ಗ್ರಾಮಾಂತರ ವೃತ್ತ ನಿರೀಕ್ಷಕ ಚಂದ್ರಶೇಖರ್, ಹೊನ್ನವಳ್ಳಿ ಠಾಣೆ ಇನ್ಸ್‌ಫೆಕ್ಟರ್ ರಾಜೇಶ್, ಕೆ.ಬಿ.ಕ್ರಾಸ್ ಠಾಣೆಯ ಇನ್ಸ್‌ಫೆಕ್ಟರ್ ಮಹೇಶ್‌ಮೌಳಿ, ನಗರಠಾಣೆಯ ಕೃಷ್ಣಪ್ಪ, ಸಿಡಿಪಿಒ ದೀಪಾ ಹೆಬ್ಬಳ್ಳಿ, ಡಾ. ರಕ್ಷಿತ್‌ಗೌಡ, ತಾಲೂಕು ಆರೋಗ್ಯಾಧಿಕಾರಿ ಚನ್ನಕೇಶವ ಸೇರಿ ಅಧಿಕಾರಿಗಳು, ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ಉಪನ್ಯಾಸಕರು ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಹಕಾರದಿಂದ ಸಮೃದ್ಧಿ - ಸಹಕಾರ ಭಾರತಿಯಿಂದ ಸಹಕಾರ ಕ್ಷೇತ್ರದ ಬಲವರ್ಧನೆ
ದ್ವೇಷಭಾಷಣ ಬಿಲ್‌ಗೆ ಸಹಿ ಬೇಡ : ಗೌರ್ನರ್‌ಗೆ ಬಿಜೆಪಿ