ಕಡೆಯ ಆಷಾಢ ಶುಕ್ರವಾರ- ಚಾಮುಂಡಿಬೆಟ್ಟದಲ್ಲಿ ಭಕ್ತಸಾಗರ

KannadaprabhaNewsNetwork | Published : Aug 3, 2024 12:37 AM

ಸಾರಾಂಶ

ಮುಂಜಾನೆಯಿಂದಲೇ ವಿವಿಧೆಡೆಗಳಿಂದ ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದ ಭಕ್ತರು,

ಕನ್ನಡಪ್ರಭ ವಾರ್ತೆ ಮೈಸೂರು

ಆಷಾಢ ಮಾಸದ ಕಡೆಯ ಶುಕ್ರವಾರ ಮೈಸೂರಿನ ಚಾಮುಂಡಿಬೆಟ್ಟಕ್ಕೆ ಭಕ್ತಸಾಗರವೇ ಹರಿದು ಬಂದಿತ್ತು. ಲಕ್ಷಾಂತರ ಭಕ್ತರು ಚಾಮುಂಡೇಶ್ವರಿ ದರ್ಶನ ಪಡೆದು ಪುನೀತರಾದರು. ಇದರೊಂದಿಗೆ ಚಾಮುಂಡಿಬೆಟ್ಟದಲ್ಲಿ ಸಂಭ್ರಮ, ಸಡಗರದಿಂದ ಆಷಾಢ ಶುಕ್ರವಾರ ವಿಶೇಷಗಳು ಸಂಪನ್ನವಾಯಿತು.

ಮುಂಜಾನೆಯಿಂದಲೇ ವಿವಿಧೆಡೆಗಳಿಂದ ಚಾಮುಂಡಿಬೆಟ್ಟಕ್ಕೆ ಆಗಮಿಸಿದ್ದ ಭಕ್ತರು, ನೂಕುನುಗ್ಗಲಿಲ್ಲದೆ ಸರತಿ ಸಾಲಿನಲ್ಲಿ ಗಂಟೆಗಟ್ಟಲೆ ನಿಂತು ದರ್ಶನ ಪಡೆದರು. ದೇವಸ್ಥಾನದ ಹೊರಗೆ ತುಂತುರು ಮಳೆ ಸುರಿಯುತ್ತಿದ್ದರೆ, ದೇವಸ್ಥಾನದ ಒಳಗೆ ಸರತಿ ಸಾಲಿನಲ್ಲಿ ಜಯಘೋಷಗಳು ಮೊಳಗುತ್ತಿದ್ದವು.

ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಕುಟುಂಬ, ಶಾಸಕರಾದ ಕೆ. ಹರೀಶ್‌ ಗೌಡ, ಜಿ.ಡಿ. ಹರೀಶ್‌ ಗೌಡ ಕುಟುಂಬ, ಮಾಜಿ ಶಾಸಕ ಎಲ್. ನಾಗೇಂದ್ರ ಸೇರಿದಂತೆ ಅನೇಕ ಗಣ್ಯರು ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ವಿಶೇಷ ಪೂಜೆ- ಭಕ್ತರಿಗೆ ದರ್ಶನ

ಕಡೆಯ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ನೆರವೇರಿಸಲಾಯಿತು. ಮುಂಜಾನೆ 3 ಗಂಟೆಯಿಂದಲೇ ದೇವಸ್ಥಾನದಲ್ಲಿ ಪೂಜಾ ವಿಧಿವಿಧಾನಗಳು ಆರಂಭವಾದವು. ಪ್ರಧಾನ ಅರ್ಚಕ ಶಶಿಶೇಖರ್ ದೀಕ್ಷಿತ್ ನೇತೃತ್ವದಲ್ಲಿ ಮಹಾನ್ಯಾಸ ರುದ್ರಾಭಿಷೇಕ, ಪಂಚಾಮೃತಾಭಿಷೇಕ, ಕುಂಕುಮಾರ್ಚನೆ, ಏಕದಶ ಪುಷ್ಪಾರ್ಚನೆ, ಸಹಸ್ರನಾಮಾರ್ಚನೆ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಲಾಯಿತು. ಬೆಳಗ್ಗೆ 5.30 ರಿಂದ ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಈ ಮಧ್ಯೆ ಬೆಳಗ್ಗೆ 9.30ಕ್ಕೆ ಮಹಾಮಂಗಳಾರತಿ, ಸಂಜೆ 6.30 ರಿಂದ 7 ರವರೆಗೆ ತಾಯಿಗೆ ಮತ್ತೊಮ್ಮೆ ಮಹಾಮಂಗಳಾರತಿ ನೆರವೇರಿಸಲಾಯಿತು. ರಾತ್ರಿ 10 ಗಂಟೆವರೆಗೂ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ದೇವಿಗೆ ಸಿಂಹವಾಹಿನಿ ಅಲಂಕಾರ

ಕಳೆದ ಮೂರು ವಾರಗಳಂತೆ ದೇವಸ್ಥಾನ ವಿಶೇಷ ರೀತಿಯಲ್ಲಿ ಅಲಂಕೃತಗೊಂಡಿತ್ತು. ತಾಯಿ ಚಾಮುಂಡೇಶ್ವರಿಗೆ ವಿಶೇಷ ಸಿಂಹವಾಹಿನಿ ಅಲಂಕಾರ ಮಾಡಲಾಗಿತ್ತು. ವಿವಿಧ ಬಣ್ಣಗಳ ಸೇವಂತಿಗೆ, ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ಬಗೆಯ ಹೂಗಳಿಂದ ದೇವಸ್ಥಾನದ ಆವರಣ ಅಲಂಕೃತಗೊಂಡಿತ್ತು. ದೇವಾಲಯದ ಪ್ರವೇಶದ್ವಾರ, ಹೊರಾವರಣವೂ ವಿಶೇಷವಾಗಿ ಸಿಂಗಾರಗೊಂಡಿತ್ತು. ಸಿಂಹವಾಹಿನಿ ಅಲಂಕಾರದಲ್ಲಿ ಕಂಗೊಳಿಸುತ್ತಿದ್ದ ಚಾಮುಂಡೇಶ್ವರಿಯ ದರ್ಶನ ಪಡೆದು ಹೊರ ಬರುತ್ತಿದ್ದ ಭಕ್ತರಲ್ಲಿ ದನ್ಯತಾಭಾವ ಮೂಡಿತ್ತು.

ಹರಕೆ ತೀರಿಸಿದ ಭಕ್ತರು

ಚಾಮುಂಡಿಬೆಟ್ಟಕ್ಕೆ ಮುಂಜಾನೆಯಿಂದಲೇ ಭಕ್ತರ ದಂಡು ಹರಿದು ಬಂದಿತ್ತು. ಕೆಲವರು ಸಾರಿಗೆ ಬಸ್‌ ನಲ್ಲಿ ಬಂದರೆ ಇನ್ನು ಕೆಲವರು 1001 ಮೆಟ್ಟಿಲುಗಳು ಮೂಲಕ ಬೆಟ್ಟಕ್ಕೆ ಆಗಮಿಸಿದರು. ಚಾಮುಂಡಿಬೆಟ್ಟದ ಪಾದದಿಂದ ಪ್ರತಿ ಮೆಟ್ಟಿಲಿಗೂ ಅರಿಶಿಣ ಕುಂಕುಮ ಹೂಗಳನ್ನಿಟ್ಟು, ಕರ್ಪೂರ ಹಚ್ಚಿ ಭಕ್ತಿ ಭಾವದಿಂದ ಮೆಟ್ಟಿಲು ಹತ್ತಿ ತಮ್ಮ ಹರಕೆ ತೀರಿಸಿದರು.

ಸಾವಿರಾರು ಭಕ್ತರಿಗೆ ಬಹುಮಹಡಿ ಪಾರ್ಕಿಂಗ್ ಸ್ಥಳದಲ್ಲಿ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಬೆಳಗ್ಗೆ 7 ರಿಂದ ಪ್ರಾರಂಭವಾದ ಪ್ರಸಾದ ವಿತರಣೆ ರಾತ್ರಿಯವರೆಗೂ ನಡೆಯಿತು.

----

ಬಾಕ್ಸ್...

ವಿಐಪಿಗಳ ಪ್ರಭಾವ- ಹೈರಾಣಾದ ಪೊಲೀಸರು

ಕಡೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ಚಾಮುಂಡಿಬೆಟ್ಟದಲ್ಲಿ ಭಕ್ತರಿಗಿಂತ ವಿಐಪಿಗಳ ಹಾವಳಿಯೇ ಹೆಚ್ಚಾಗಿತ್ತು. ಸಚಿವರು, ಶಾಸಕರ ಶಿಫಾರಸು ಪತ್ರ ತಂದಿದ್ದವರು ನೇರ ಪ್ರವೇಶಕ್ಕೆ ಮುಗಿ ಬಿದ್ದರು. ಕೆಲವರು ಪ್ರಭಾವ ಬಳಸಿ ಒಳ ಹೋಗಲು ಮುಂದಾದರು. ಒಂದೇ ಬಾರಿಗೆ ನೂರಾರು ಮಂದಿ ಬಂದಿದ್ದರಿಂದ ಪೊಲೀಸರು ಅವರನ್ನು ನಿಯಂತ್ರಿಸಲು ಹೈರಾಣಾದರು. ಈ ವೇಳೆ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ವಿಐಪಿಗಳ ಹಾವಳಿಯಿಂದ ಬೇಸತ್ತು ವಿ ವಾಂಟ್ ಜಸ್ಟೀಸ್ ಎಂದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ ಪ್ರಸಂಗ ಸಹ ನಡೆಯಿತು.

----

-- ಬಾಕ್ಸ್--

ನಗರದ ವಿವಿಧೆಡೆ ಪ್ರಸಾದ ವಿತರಣೆ

ಕಡೆಯ ಆಷಾಢ ಶುಕ್ರವಾರದ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಇರುವ ಚಾಮುಂಡೇಶ್ವರಿ ದೇವಸ್ಥಾನಗಳು, ರಸ್ತೆ, ವೃತ್ತಗಳಲ್ಲಿ ಚಾಮುಂಡೇಶ್ವರಿ ಭಾವಚಿತ್ರವಿರಿಸಿ, ಪೂಜೆ ಸಲ್ಲಿಸಿ, ಸಾರ್ವಜನಿಕರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಕೆ.ಜಿ. ಕೊಪ್ಪಲು, ಅಗ್ರಹಾರ, ಚಾಮುಂಡಿಪುರಂ, ವಿದ್ಯಾರಣ್ಯಪುರಂ, ಚಾಮರಾಜ ಜೋಡಿ ರಸ್ತೆ, ಎಂ.ಜಿ. ರಸ್ತೆ, ಒಂಟಿಕೊಪ್ಪಲು ಸೇರಿದಂತೆ ನಗರದ ಹಲವೆಡೆ ಪ್ರಸಾದ ವಿತರಣೆ ಮಾಡಲಾಯಿತು. ಸಾರ್ವಜನಿಕರು ಸರತಿ ಸಾಲಿನಲ್ಲಿ ಪ್ರಸಾದ ಸ್ವೀಕರಿಸಿದರು.

Share this article