ಶಿವಮೊಗ್ಗ: ರಾಷ್ಟ್ರಭಕ್ತರ ಬಳಗಕ್ಕೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಅಲ್ಲದೆ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಬುಧವಾರ ಹಿಂದುತ್ವದ ಪರವಾಗಿ ಬಂದು ಸೇರಿದ್ದಾರೆ. ಇದು ಕೇವಲ ಟ್ರೇಲರ್ ಅಷ್ಟೇ. ಪಿಚ್ಚರ್ ಅಬೀ ಬಾಕೀ ಹೈ ಎಂದು ರಾಷ್ಟ್ರಭಕ್ತರ ಬಳಗದ ಸಂಚಾಲಕ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಹೇಳಿದರು.
ನಾನು ಶಾಸಕನಾಗಿದ್ದಾಗ, ಪ್ರತಿಯೊಂದು ಸಮಾಜಕ್ಕೆ ಅನುದಾನ ನೀಡಿದ್ದೆ. ಯಾವುದೇ ಒಂದು ಸಮಾಜ ನಮ್ಮ ಸಮಾಜಕ್ಕೆ ಈಶ್ವರಪ್ಪನವರು ಸಹಾಯ ಮಾಡಿಲ್ಲ ಎಂದರೆ ನಾನು ರಾಜಕೀಯ ನಿವೃತ್ತಿಗೆ ಸಿದ್ಧ. ಈಗಿನ ಸರ್ಕಾರ ಒಂದೇ ಒಂದು ರು. ಅಭಿವೃದ್ಧಿಗೆ ಬಿಡುಗಡೆಮಾಡಿಲ್ಲ ಎಂದರು.ಆಶ್ರಯ ಮನೆಗಳಿಗೆ ಬಡವರು ತಮ್ಮ ತಾಳಿಮಾರಿ ಹಣಕಟ್ಟಿ 9 ವರ್ಷವಾದರೂ ಇನ್ನೂ ಅವರಿಗೆ ಮನೆಯ ಬೀಗ ನೀಡಿಲ್ಲ. ಶಾಶ್ವತ ಕುಡಿಯುವ ನೀರು ಮತ್ತು ವಿದ್ಯುತ್ ಒದಗಿಸಲು ಬೇಕಾದ 12 ಕೋಟಿ ರು. ಬಿಡುಗಡೆ ಮಾಡುವ ತಾಕತ್ತು ಈ ಸರ್ಕಾರಕ್ಕಿಲ್ಲ. ವಸತಿ ಸಚಿವ ಜಮೀರ್ ಅಹ್ಮದ್‌ಖಾನ್ ಶಿವಮೊಗ್ಗಕ್ಕೆ ಬಂದು ಭಾಷಣಬೀಗಿದ್ದು ಬಿಟ್ಟರೆ ಇದೂವರೆಗೂ ಅನುದಾನ ಬಿಡುಗಡೆಯಾಗಿಲ್ಲ. ರಾಜ್ಯದಲ್ಲಿ ಮುಸಲ್ಮಾನರ ಬೆಂಬಲಿತ ಆಡಳಿತ ನಡೆಯುತ್ತಿದೆ. ಹಿಂದುತ್ವದ ಕಾರ್ಯಕ್ರಮಕ್ಕೆ ಇಡೀ ರಾಜ್ಯದಲ್ಲಿ ನನ್ನನ್ನು ಕರೆಯುತ್ತಿದ್ದಾರೆ ಎಂದರು.ಕಾಂಗ್ರೆಸ್ ಸೇರಿದಂತೆ ಸಮಾಜವಾದಿ ಪಕ್ಷದ ಅಖಿಲೇಶ್ ಯಾದವ್ ಕೂಡ ತಮ್ಮ ಪಕ್ಷಕ್ಕೆ ನನ್ನನ್ನು ಆಹ್ವಾನಿಸಿ, ವಿವಿಧ ಹುದ್ದೆಗಳ ಆಮಿಷವೊಡ್ಡಿದ್ದರು. ಆದರೆ ನಾನು ಅವರಿಗೆ ನೀವು ಹಿಂದುತ್ವದ ಪಕ್ಷವನ್ನಾಗಿ ನಿಮ್ಮ ಪಕ್ಷವನ್ನು ಬದಲಾಯಿಸಿದರೆ ಬರುತ್ತೇನೆ ಎಂದು ತಿರಸ್ಕಾರ ಮಾಡಿದ್ದೆ. ಕುತ್ತಿಗೆ ಕೊಯ್ದರೂ ನಾನು ಬೇರೆ ಪಕ್ಷಕ್ಕೆ ಹೋಗಲ್ಲ ಎಂದರು.ಈ ಸಂದರ್ಭದಲ್ಲಿ 150ಕ್ಕೂ ಹೆಚ್ಚು ವಿವಿಧ ಪಕ್ಷಗಳ ಮುಖಂಡರು, ಮಾಜಿ ಕಾರ್ಪೋರೇಟರ್‌ಗಳಾದ ಸುನೀತಾ ನಾಗರಾಜ್, ಪ್ರಮುಖರಾದ ಸಂಧ್ಯಾ, ರಮೇಶ್, ಸತೀಶ್, ಪ್ರಕಾಶ್, ಚೇತನ್, ಲೋಕೇಶ್, ಮೂರ್ತಿ, ಜಯಮ್ಮ, ಗೀತಮ್ಮ, ಮೋಹನ್ ಶೆಟ್ಟಿ, ಗೋಪಿ, ಬಾಬು, ಶ್ರೇಯಸ್, ರೇಣುಕಮ್ಮ ಮತ್ತಿತರರು ರಾಷ್ಟ್ರಭಕ್ತರ ಬಳಗಕ್ಕೆ ಸೇರ್ಪಡೆಗೊಂಡರು.
ಬಿಎಸ್‌ವೈ ನನಗೆ ಹಿರಿಯಣ್ಣಇದ್ದ ಹಾಗೆ: ಕೇಎಸ್ಈ
ನನ್ನ ಮತ್ತು ಬಿ.ಎಸ್.ಯಡಿಯೂರಪ್ಪನವರ ಸಂಬಂಧ ಅಣ್ಣ-ತಮ್ಮಂದಿರ ಸಂಬಂಧ. ನನಗೆ ಹಿರಿಯಣ್ಣ ಇದ್ದ ಹಾಗೆ. ಹಾಗಂತ ಸ್ನೇಹ, ವಿಶ್ವಾಸ, ರಾಜಕಾರಣ ಎಲ್ಲವೂ ಬೇರೆ ಬೇರೆ. ನನಗೆ ಅನಾರೋಗ್ಯವಾದಾಗ ಅವರು ದೂರವಾಣಿ ಮೂಲಕ ಆರೋಗ್ಯ ವಿಚಾರಿಸಿದ್ದಾರೆ. ಅವರ ಮೊಮ್ಮಮಗನ ಮದುವೆಗೆ ನಾನೂ ಕೂಡ ಹೋಗಿ ಶುಭ ಹಾರೈಸಿದ್ದೆ. ಹಾಗಂದ ಮಾತ್ರಕ್ಕೆ ನಾನು ಬಿಜೆಪಿ ಸೇರಿಲ್ಲ ಎಂದು ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.