ಕಲುಷಿತ ನೀರು ಸೇವಿಸಿ ಹಲವರು ಅಸ್ಪಸ್ಥ

KannadaprabhaNewsNetwork | Published : Nov 7, 2024 12:01 AM

ಸಾರಾಂಶ

ಕೊಳ್ಳೇಗಾಲದ 23ನೇ ವಾರ್ಡ್‌ನಲ್ಲಿ ಕಲುಷಿತ ನೀರು ಪೂರೈಕೆಯಿಂದ ಆಸ್ಪತ್ರೆಗೆ ದಾಖಲಾಗಿರುವವರ ಆರೋಗ್ಯ, ಯೋಗಕ್ಷೇಮವನ್ನು ನಗರಸಭಾಧ್ಯಕ್ಷೆ ರೇಖಾ, ಆರೋಗ್ಯಾಧಿಕಾರಿ ಗೋಪಾಲ್ ಇನ್ನಿತರರು ವಿಚಾರಿಸಿದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಕಲುಷಿತ ನೀರು ಸೇವಿಸಿ ಹಲವರಿಗೆ ವಾಂತಿ, ಬೇಧಿ ಕಾಣಿಸಿಕೊಂಡು ಅಸ್ಪಸ್ಥರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಪಟ್ಟಣ ವ್ಯಾಪ್ತಿಯ 23ನೇ ವಾರ್ಡ್‌ನಲ್ಲಿ ಜರುಗಿದೆ.ನಗರಸಭೆ ವ್ಯಾಪ್ತಿಯ 23 ನೇ ವಾರ್ಡ್ ನೂರ್ ಮೊಹಾಲ್ಲಾ 7ನೇ ಕ್ರಾಸ್ ವಾಸಿಗಳಾದ ಆಯಾನ್ ಷರೀಪ್ (5), ರಿಜ್ವಾನ್ ಖಾನ್ (17), ಐಷಾ (15), ಸಿಮ್ರಾನ್ (22) ಸೇರಿದಂತೆ ಹಲವರಿಗೆ ವಾಂತಿ ಬೇಧಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ‌. ಕುಡಿಯುವ ನೀರಿನ ಸೇವೆನೆಯಿಂದ ಹೆಚ್ಚು ತೊಂದರೆಗೊಳಗಾದ ಅಯಾಜ್ ಷರೀಪ್, ಐಷಾ ಅವರನ್ನು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚಾ.ನಗರ ಕಳುಹಿಸಲಾಗಿದೆ. ರಿಜ್ವಾನ್ ಖಾನ್ ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಹಾಗೂ ಸಿಮ್ತಾನ್ ಜನನಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.ನಲ್ಲಿಗಳಲ್ಲಿ ಕಲುಷಿತ ನೀರು ಬರುತ್ತಿದ್ದು ಇದನ್ನು ಸೇವಿಸಿದ್ದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದ್ದು ಮೊನ್ನೆ ಇದೇ ವಾರ್ಡ್‌ನ ನಿವಾಸಿಯೊಬ್ಬರು ಬಾಟಲ್‌ನಲ್ಲಿ ಕಲುಷಿತ ನೀರು ತಂದು ನಗರಸಭೆ ಮುಂದೆ ಪ್ರದರ್ಶಿಸಿದ್ದರು. ಈ ಸಂಬಂಧ ನಗರಸಭೆ ಆಯುಕ್ತರು ಕಠಿಣ ಕ್ರಮಕೈಗೊಂಡು ಕಲುಷಿತ ನೀರು ಪೂರೈಕೆ ಸ್ಥಗಿತಕ್ಕೆ ಕ್ರಮವಹಿಸಿದ್ದರೆ ಈ ಘಟನೆ ಸಂಭವಿಸುತ್ತಿರಲಿಲ್ಲ ಎಂಬುದು ಅಲ್ಲಿನ ವಾಸಿಗಳ ಹೇಳಿಕೆಯಾಗಿದೆ.ವಿಚಾರ ತಿಳಿಯುತ್ತಿದ್ದಂತೆ ನಗರಸಭಾಧ್ಯಕ್ಷೆ ರೇಖಾ, ಸದಸ್ಯ ರಾಘವೇಂದ್ರ, ಸ್ಥಳೀಯ ವಾರ್ಡ್‌ ಸದಸ್ಯ ಜಯಮೇರಿ, ತಾಲೂಕು ಆರೋಗ್ಯಾಧಿಕಾರಿ ಡಾ. ಗೋಪಾಲ್ ಸೇರಿದಂತೆ ಇನ್ನಿತರರು ಪರಿಶೀಲಿಸಿದರು. ಈ ವೇಳೆ ಖುದ್ದು ಅಲ್ಲಿನ ನಿವಾಸಿಗಳೇ ಇಲ್ಲಿನ ನಲ್ಲಿ ಹಾಗೂ ಬೋರ್ ವೆಲ್‌ನಲ್ಲೂ ಕಲುಷಿತ ನೀರು ಪೂರೈಕೆಯಾಗುತ್ತಿದೆ ಎಂದು ದೂರಿದರು.ಈ ವೇಳೆ ತಾಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್ ಮಾತನಾಡಿ, 23ನ ವಾರ್ಡ್‌ನಲ್ಲಿ ಕೆಲ ನಿವಾಸಿಗಳಿಗೆ ವಾಂತಿ ಬೇಧಿ ಕಾಣಿಸಿಕೊಂಡಿದ್ದರಿಂದ ಆರೋಗ್ಯ ಇಲಾಖೆ ಎಚ್ಚರ ವಹಿಸಿದ್ದು, ಈ ಸಂಬಂಧ ಭೇಟಿ ನೀಡಿ ಪರಿಶೀಲಿಸಲಾಗಿದ್ದು ನಮ್ಮ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಆರೋಗ್ಯ ವಿಚಾರಿಸಲಾಗುತ್ತಿದ್ದು ಘಟನೆಗೆ ಏನು ಕಾರಣ ಎಂಬುದು ನೀರು ಪರಿಶೀಲನೆಯಿಂದ ತಿಳಿಯಬೇಕಿದೆ ಎಂದರು. ಸದಸ್ಯೆ ಜಯಮೇರಿ ಮಾತನಾಡಿ, ಈ ಸಂಬಂಧ ನನ್ನ ವಾರ್ಡ್ ನಿವಾಸಿಗಳ ಆರೋಗ್ಯ ಯೋಗಕ್ಷೇಮ ಕಾಪಾಡುವಲ್ಲಿ ನಗರಸಭಾಧಿಕಾರಿ, ಆರೋಗ್ಯ ಇಲಾಖೆ ಮುಂದಾಗಬೇಕು, ಘಟನೆಗೆ ಕಲುಷಿತ ನೀರು ಸೇವನೆ ಕಾರಣವಾಗಿದ್ದು ಇದು ಯುಜಿಡಿ ಅಧಿಕಾರಿಗಳ ಅವಾಂತರಿಂದ ಹೀಗಾಗಿದ್ದು ನೀರು ಪರಿಶೀಲನೆಗೊಳಪಡಿಸಬೇಕು, ಮುಂದೆ ಈ ರೀತಿ ಆಗದಂತೆ ಜಾಗ್ರತೆ ವಹಿಸಬೇಕು ಎಂದರು.

ಬೋರ್‌ವೆಲ್ ನೀರು ಸೇವಿಸಿದ್ದು ಈ ಘಟನೆಗೆ ಕಾರಣವಾಗಿರಬಹುದು, ನಿಜಕ್ಕೂ ನಲ್ಲಿಯಲ್ಲಿ ಕಲುಷಿತ ನೀರು ಬರುತ್ತಿದ್ದರೆ ಪರಿಶೀಲಿಸಿ ಕ್ರಮವಹಿಸಲಾಗುವುದು, ಈ ಸಂಬಂಧ ಎರಡು ನೀರನ್ನು ಪರಿಶೀಲನೆಗೊಳಪಡಿಸಲಾಗಿದೆ. ಆಸ್ಪತ್ರೆಗೆ ದಾಖಲಾದವರಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸಂಬಂಧಪಟ್ಟ ವೈದ್ಯಾಧಿಕಾರಿಗಳಲ್ಲಿ ಮನವಿ ಮಾಡಲಾಗಿದೆ. ಸಂಬಂಧಪಟ್ಟವರ ಜೊತೆ ಚರ್ಚಿಸಿದ್ದು ಆಸ್ಪತ್ರೆಗೆ ಬೇಟಿ ನೀಡಿ ದಾಖಲಾದವರ ಆರೋಗ್ಯ ವಿಚಾರಿಸಿದ್ದೇನೆ.-ರೇಖಾ ರಮೇಶ್, ನಗರಸಭಾಧ್ಯಕ್ಷೆ

Share this article