ಹುಬ್ಬಳ್ಳಿ:
ಯಾವುದೇ ಕ್ಷೇತ್ರವಿರಲಿ ನಿರಂತರ ಪರಿಶ್ರಮವಿದ್ದರೆ ಸಾಧನೆ ಮಾಡಲು ಸಾಧ್ಯ ಎಂದು ಭಾರತದ ಅಂತಾರಾಷ್ಟ್ರೀಯ ಕ್ರೀಡಾಪಟು ಸಹನಾಕುಮಾರಿ ಗೊಬ್ಬರಗುಂಪಿ ಹೇಳಿದರು.ಅವರು ನಗರದ ಕೆಎಂಸಿಆರ್‌ಐ ಕ್ರೀಡಾಂಗಣದಲ್ಲಿ ಆರ್‌ಜಿಯುಎಚ್‌ಎಸ್ (ರಾಜೀವಗಾಂಧಿ ಯುನಿವರ್ಸಿಟಿ ಆಫ್ ಹೆಲ್ತ್ ಸೈನ್ಸ್) ಹಾಗೂ ನಗರದ ಕೆಎಂಸಿಆರ್‌ಐ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಅಂತರ್ ಕಾಲೇಜು ಅಥ್ಲೆಟಿಕ್ ಕೂಟ-2024ಗೆ ಚಾಲನೆ ನೀಡಿ ಮಾತನಾಡಿದರು.
ದೈಹಿಕವಾಗಿ ಸದೃಢವಾಗಿರಲು ಕ್ರೀಡೆ ಬಹಳ ಅವಶ್ಯಕವಾಗಿದೆ. ಆರೋಗ್ಯಕರವಾದ ಜೀವನಕ್ಕೆ ಇದು ಟಾನಿಕ್ ಇದ್ದಂತೆ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಪಿಟ್ ಇಂಡಿಯಾ ತಂದಿದ್ದಾರೆ. ಆದರೆ, ಅದನ್ನು ಎಷ್ಟು ಜನ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತಿದ್ದಾರೆ ಗೊತ್ತಿಲ್ಲ. ಮೋದಿ ಅವರು ಕ್ರೀಡೆಗೆ ಸಾಕಷ್ಟು ಪ್ರೋತ್ಸಾಹ ನೀಡುತ್ತಿದ್ದಾರೆ. ಅದರಂತೆ ಕ್ರೀಡಾಪಟುಗಳು ಫಿಟ್ ಇಂಡಿಯಾದ ಪ್ರಯೋಜನ ಪಡೆದುಕೊಳ್ಳುವುದರೊಂದಿಗೆ ಉತ್ತಮ ಕ್ರೀಡಾಪಟುಗಳಾಗಿ ಹೊರಹೊಮ್ಮುವಂತೆ ಕರೆ ನೀಡಿದರು.ಆರ್‌ಜಿಯುಎಚ್‌ಎಸ್ ವಿವಿ ಕುಲಪತಿ ಎಂ.ಕೆ. ರಮೇಶ ಮಾತನಾಡಿ, ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ಇತ್ತೀಚೆಗೆ ಮಾನಸಿಕ ಒತ್ತಡದಿಂದ ಬಳಲುತ್ತಿದ್ದಾರೆ. ಕ್ರೀಡೆ ಹಾಗೂ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗಹಿಸಿದರೆ ಇದರಿಂದ ಹೊರ ಬರಬಹುದಾಗಿದೆ. ಒಂದಲ್ಲ ಒಂದು ಕ್ರೀಡೆಯಲ್ಲಿ ಭಾಗವಹಿಸುವುದನ್ನು ಪ್ರತಿಯೊಬ್ಬರೂ ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ದಿವ್ಯಪ್ರಭು ಮಾತನಾಡಿ, ಮನುಷ್ಯನ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆ ಬಹಳ ಮಹತ್ವದಾಗಿದೆ. ಕ್ರೀಡೆಯಂತೆ ಜೀವನದಲ್ಲೂ ಹಲವಾರು ಅಡೆತಡೆಗಳು ಬರುತ್ತವೆ. ಅವುಗಳನ್ನು ಎದುರಿಸಿದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಕ್ರೀಡಾಪಟು ತನ್ನ ಎದುರಾಳಿ ಸ್ಪರ್ಧಿ ಎಂದು ಭಾವಿಸುವ ಬದಲು ತನ್ನನ್ನು ತಾನೇ ಸ್ಪರ್ಧಿಯಾಗಿ ನೋಡಿಕೊಳ್ಳುವ ಮನಭಾವ ಬೆಳೆಸಿಕೊಂಡಾಗ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಹೇಳಿದರು.ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಿಸಿನ್, ವೈದ್ಯಕೀಯ ಶಿಕ್ಷಣದ ನಿರ್ದೇಶಕ ಬಿ.ಎಲ್. ಸುಜಾತಾ ರಾಠೋಡ, ಪೊಲೀಸ್ ಆಯುಕ್ತ ಎನ್. ಶಶಿಕುಮಾರ, ಡಾ. ಎಸ್.ಎಫ್. ಕಮ್ಮಾರ, ಕೆ.ಎಫ್. ಕಮ್ಮಾರ, ರಾಜಶೇಖರ ಗುಂಡರೆಡ್ಡಿ, ಡಾ. ಈಶ್ವರ ಹಸಬಿ, ರಮೇಶ ಕಳಸದ, ಎಂ.ಎಸ್. ರೋಣದ, ಅರುಣ, ಗುರುಶಾಂತಪ್ಪ ಯರಗಚ್ಚಿನ ಸೇರಿದಂತೆ ಹಲವರಿದ್ದರು.
ಸ್ಟಿಪಲ್ ಚೇಸ್ ವಿಜೇತರಿಗೆ ಬಹುಮಾನಮೂರುಸಾವಿರ ಮೀಟರ್ ಸ್ಟಿಪಲ್ ಚೇಸ್‌ನಲ್ಲಿ ಪುರುಷರ ವಿಭಾಗದಲ್ಲಿ ಮೂಲ್ಕಿಯ ಸೇಂಟ್ ಅನ್ನಾಸಾ ನರ್ಸಿಂಗ್ ಕಾಲೇಜಿನ ಮೂರ್ಯ ಫುಲೆ ಪ್ರಥಮ(12:20.25 ಸೆಕೆಂಡ್), ಮೈಸೂರಿನ ಸುಯೋಗ ನರ್ಸಿಂಗ್ ಕಾಲೇಜಿನ ಇರ್ಫಾನ್‌ಖಾನ್ ಎಸ್. ದ್ವಿತೀಯ (12:37.74 ಸೆಕೆಂಡ್), ಮಂಗಳೂರಿನ ಕರ್ನಾಟಕ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಸಾಗರ ನಾಗಪ್ಪ ಎನ್. ತೃತೀಯ (12:48.31 ಸೆಕೆಂಡ್) ಸ್ಥಾನ ಪಡೆದರು. ಅದೇ ರೀತಿ ಮಹಿಳೆಯರ ವಿಭಾಗದಲ್ಲಿ ಮಂಗಳೂರಿನ ಅಥೆನಾ ನರ್ಸಿಂಗ್ ಕಾಲೇಜಿನ ಸೆಲ್ಟಿ ಮಾರಿಯಾ ಜೈಸನ್ ಪ್ರಥಮ (19:00.76 ಸೆಕೆಂಡ್), ಬಾಗಲಕೋಟೆಯ ಬಿವಿಎಸ್ ಸಜ್ಜಲಶ್ರೀ ನರ್ಸಿಂಗ್ ಸಂಸ್ಥೆಯ ಮೇಘಾ ದ್ವಿತೀಯ (19:39.57 ಸೆಕೆಂಡ್), ಮಂಗಳೂರಿನ ಅಥೇನಾ ನರ್ಸಿಂಗ್ ಕಾಲೇಜಿನ ಎಮೆಲ್ಲಾ ಥಾಮಸ್ ತೃತೀಯ (21:33.46 ಸೆಕೆಂಡ್) ಸ್ಥಾನ ಪಡೆದಿದ್ದು, ಗಣ್ಯರು ಅವರಿಗೆ ಪದಕ ನೀಡಿ ಗೌರವಿಸಿದರು.