ಕನ್ನಡಪ್ರಭ ವಾರ್ತೆ ಭದ್ರಾವತಿ
ನಗರದ ಬಿ.ಎಚ್ ರಸ್ತೆ, ಕೆಎಸ್‌ಆರ್‌ಟಿಸಿ ಮುಖ್ಯ ಬಸ್ ನಿಲ್ದಾಣದಿಂದ ಹುತ್ತಾವರೆಗೆ ರಸ್ತೆ ಮಧ್ಯೆ ಹೊಸದಾಗಿ ವಿಭಜಕ ಗೋಡೆಯನ್ನು (ಡಿವೈಡರ್ ವಾಲ್) ನಿರ್ಮಾಣ ಮಾಡಿದ್ದು, ಅದು ವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವುದಿಲ್ಲ. ಅಷ್ಟೇ ಅಲ್ಲದೇ ಇತ್ತೀಚೆಗೆ ವಿಭಜಕ ಮಾರ್ಗದಲ್ಲಿ ಬೀದಿದೀಪ ಆಳವಡಿಸಲು ಕಾಂಕ್ರೀಟ್ ಬೆಡ್ ಹಾಕಲಾಗಿದ್ದು, ಅದು ಎರಡೂ ಬದಿಯಲ್ಲಿ ಡಿವೈಡರ್ ಅಳತೆ ಮೀರಿ ಚಾಚಿರುತ್ತದೆ ಇದರಿಂದಾಗಿ ಅಪಘಾತಗಳಾಗುತ್ತಿದ್ದು, ತಕ್ಷಣ ಸರಿಪಡಿಸುವುದು. ನೀರಿನ ತೆರಿಗೆ ಮಾದರಿಯಲ್ಲಿ ಆಸ್ತಿತೆರಿಗೆ ಪಾವತಿಯನ್ನು ಸಹ ಆನ್‌ಲೈನ್‌ಗೊಳಿಸುವುದು. ಕಂದಾಯ ಪಾವತಿಗೆ ೩ನೇ ಮಹಡಿಗೆ ಹತ್ತಿ- ಇಳಿಯಲು ನಾಗರಿಕರಿಗೆ ತೊಂದರೆಯಾಗುತ್ತಿದ್ದು, ಲಿಫ್ಟ್ ಆಳವಡಿಸುವುದು. ಅಲ್ಲಿಯವರೆಗೆ ವ್ಯವಸ್ಥೆಯನ್ನು ನೆಲ ಮಹಡಿಗೆ ಸ್ಥಳಾಂತರಿಸುವಂತೆ ಮನವಿ ಮಾಡಲಾಗಿದೆ.
ಕುಡಿಯುವ ನೀರಿನ ದರ ಪರಿಷ್ಕರಣೆ ಹಿಂದಕ್ಕೆ ಪಡೆಯುವುದು. ಕೈಬಿಟ್ಟ ಖಾತೆ ಅಳತೆ ನಮೂದಿಸಲು ಚದರ ಅಡಿ ಒಂದಕ್ಕೆ ವಿಧಿಸುತ್ತಿದ್ದ ಶುಲ್ಕ ರು. ೧ ರಿಂದ ರು. ೫ಕ್ಕೆ ಹೆಚ್ಚಿಸಿರುವುದು ತುಂಬಾ ಹೊರೆಯಾಗಿದ್ದು, ಹಳೆಯ ದರವನ್ನೇ ಮುಂದುವರೆಸುವುದು. ನಗರಸಭೆ ವ್ಯಾಪ್ತಿಯ ವಿವಿಧ ವಾರ್ಡುಗಳ ವಿವಿಧ ಸಾರ್ವಜನಿಕ ಉದ್ಯಾನವನಗಳನ್ನು ಕೆಲವರು ಅಕ್ರಮವಾಗಿ ಕಬಳಿಸಿ ನಿವೇಶನಗಳಾಗಿ ಮಾರಾಟ ಮಾಡಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದ್ದು, ಕೂಡಲೇ ಉದ್ಯಾನವನ ಸೇರಿದಂತೆ ನಗರಸಭೆಯ ಆಸ್ತಿ-ಪಾಸ್ತಿ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವುದು. ಆಶ್ರಯ ಯೋಜನೆಯಡಿ ಜಿ+೩ ಮನೆ ನಿರ್ಮಿಸಿ ಹಂಚಿಕೆ ಮಾಡುವ ಸಂಬಂಧ ಕಳೆದ ಸುಮಾರು ೬ ವರ್ಷಗಳ ಹಿಂದೆ ಎರಡು ಸಾವಿರಕ್ಕೂ ಅಧಿಕ ಮಂದಿ ಅರ್ಜಿದಾರರರಿಂದ ಹತ್ತು ಸಾವಿರ ರೂಪಾಯಿ ಠೇವಣಿ ಹಣ ಕಟ್ಟಿಸಿಕೊಳ್ಳಲಾಗಿದ್ದು, ಇದೀಗ ಕೇವಲ ನಾಲ್ಕು ನೂರು ಮನೆಗಳ ನಿರ್ಮಾಣ ಕಾರ್ಯ ಮಾತ್ರ ನಡೆಯುತ್ತಿದ್ದು, ತಕ್ಷಣ ಉಳಿದವರಿಗೂ ಮನೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಲಾಯಿತು.ಜೆಡಿಎಸ್ ನಗರ ಘಟಕದ ಅಧ್ಯಕ್ಷ ಆರ್. ಕರುಣಾಮೂರ್ತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಪಕ್ಷದ ಪ್ರಮುಖರಾದ ನಗರಸಭೆ ಸದಸ್ಯೆ ಮಂಜುಳ ಸುಬ್ಬಣ್ಣ, ಮಾಜಿ ಅಧ್ಯಕ್ಷೆ ವಿಶಾಲಾಕ್ಷಿ, ಮಾಜಿ ಸದಸ್ಯ ಎಚ್.ಬಿ ರವಿಕುಮಾರ್, ಎನ್. ರಾಮಕೃಷ್ಣಪ್ಪ, ಭಾಗ್ಯಮ್ಮ, ಮಧುಸೂದನ್, ಶಶಿಧರ ಗೌಡ, ಉಮೇಶ್, ನವೀನ್ ಕುಮಾರ್ ಸೇರಿದಂತೆ ಕಾರ್ಯಕರ್ತರು ಪಾಲ್ಗೊಂಡಿದ್ದರು.