ಭಾರತರತ್ನ, ಶ್ರೇಷ್ಠ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್‌ರವರು ಈ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನ ರಕ್ಷಿಸಿ ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ಕನ್ನಡಪ್ರಭ ವಾರ್ತೆ ಭದ್ರಾವತಿ
ಭಾರತರತ್ನ, ಶ್ರೇಷ್ಠ ಮಾನವತಾವಾದಿ ಡಾ. ಬಿ.ಆರ್ ಅಂಬೇಡ್ಕರ್‌ರವರು ಈ ದೇಶಕ್ಕೆ ಕೊಡುಗೆಯಾಗಿ ನೀಡಿರುವ ಸಂವಿಧಾನ ರಕ್ಷಿಸಿ ಮುಂದಿನ ಪೀಳಿಗೆಗೂ ಕೊಂಡೊಯ್ಯುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಎಂದು ನಗರಸಭೆ ಹಿರಿಯ ಸದಸ್ಯ ಬಿ.ಕೆ ಮೋಹನ್ ಹೇಳಿದರು.
ಅವರು ನಗರದ ಹುತ್ತಾ ಕಾಲೋನಿ ಚಂದ್ರಾಲಯದಲ್ಲಿ ಬಾಪೂಜಿ ಹರಿಜನ (ಮಾದರ) ಸೇವಾ ಸಂಘದಿಂದ ಆಯೋಜಿಸಲಾಗಿದ್ದ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್‌ರವರ ೧೩೫ನೇ ಜನ್ಮದಿನೋತ್ಸವ ಮತ್ತು ಹಸಿರು ಕ್ರಾಂತಿ ಹರಿಕಾರ ಡಾ. ಬಾಬು ಜಗಜೀವನ ರಾಮ್ ೧೧೯ನೇ ಜನ್ಮದಿನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್‌ರವರು ಈ ದೇಶಕ್ಕೆ ನೀಡಿರುವ ಸಂವಿಧಾನ ವಿಶ್ವಕ್ಕೆ ಮಾದರಿಯಾಗಿದೆ. ಸಂವಿಧಾನದಿಂದಾಗಿ ನಾವೆಲ್ಲರೂ ಇಂದು ನೆಮ್ಮದಿಯಾಗಿ ಬದುಕಲು ಸಾಧ್ಯವಾಗಿದೆ. ಸಂವಿಧಾನದ ಆಶಯಗಳನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಬಾಬು ಜಗಜೀವನ್ ರಾಮ್‌ರವರ ಕೊಡುಗೆ ಸಹ ಹೆಚ್ಚಿನದ್ದಾಗಿದ್ದು, ಇವರ ಸಮಾಜಮುಖಿ ಆದರ್ಶ ಚಿಂತನೆಗಳು ನಮ್ಮೆಲ್ಲರಿಗೂ ದಾರಿ ದೀಪವಾಗಿವೆ ಎಂದರು.
ನಗರದಲ್ಲಿ ಬಾಬು ಜಗಜೀವನ್ ರಾಮ್‌ರವರ ಸಮುದಾಯ ಭವನ ನಿರ್ಮಿಸಲು ಸ್ಥಳ ನೀಡುವ ಜೊತೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಬದ್ಧರಾಗಿದ್ದು, ಈ ಹಿನ್ನಲೆಯಲ್ಲಿ ಸಮುದಾಯದವರು ಮನವಿ ಸಲ್ಲಿಸುವಂತೆ ಕೋರಿದರು.
ತರೀಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಟಿ. ಮಂಜುನಾಥ್ ಮತ್ತು ಆಕಾಶವಾಣಿ ಹಿರಿಯ ಉದ್ಘೋಷಕ ಎಂ.ಕೆ ಶಿವಕುಮಾರ್ ಅಂಬೇಡ್ಕರ್ ಮತ್ತು ಬಾಬು ಜಗಜೀವನ್ ರಾಮ್‌ರವರ ಬದುಕು, ಸಾಧನೆ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆಗಳನ್ನು ವಿವರಿಸಿದರು.
ಈ ಬಾರಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದ ಸಮಾಜದ ಒಟ್ಟು ೪೨ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಅಲ್ಲದೆ ಸಮಾಜದ ಸುಮಾರು ೩೦ ಮಂದಿ ಹಿರಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕ್ರಿಯಾಯೋಜನೆಗಳಿಗೆ ಚಾಲನೆ ನೀಡಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಬಿ.ಎ ಮಂಜುನಾಥ್ ವಹಿಸಿದ್ದರು. ಸರ್ಕಾರದ ೫ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ತಾಲೂಕು ಅಧ್ಯಕ್ಷ ಬಿ.ಎಸ್ ಗಣೇಶ್, ನಗರಸಭೆ ಸದಸ್ಯೆ ಲತಾ ಚಂದ್ರಶೇಖರ್, ದಲಿತ ಮುಖಂಡರಾದ ಶಿವಬಸವಪ್ಪ, ನ್ಯಾಯವಾದಿ ಎಂ. ಶಿವಕುಮಾರ್, ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ವಿಜಯಲಕ್ಷ್ಮೀ ಹಾಗೂ ಸಂಘದ ಪ್ರಮುಖರಾದ ನರಸಿಂಹಪ್ಪ, ಶ್ರೀನಿವಾಸ್, ಶಂಕರಪ್ಪ, ಬಸವರಾಜಪ್ಪ, ಮಾರುತಿ, ಶೋಭಾ, ಹನುಮಂತಪ್ಪ, ಅಂಜಿನಪ್ಪ, ಸತೀಶ್, ಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಸಿದ್ದಾರ್ಥ ಅಂಧರ ಕೇಂದ್ರದ ಮಕ್ಕಳಿಂದ ಭೀಮ ಗೀತೆ ನಡೆಯಿತು. ರಾಜಶೇಖರ್ ಸ್ವಾಗತಿಸಿ, ರಾಜು ನರಸಯ್ಯ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.