ಕನ್ನಡಪ್ರಭ ವಾರ್ತೆ ನಾಗಮಂಗಲ
ದಿನಪತ್ರಿಕೆ ವಿತರಿಸುವ ಮೂಲಕ ಪ್ರಚಲಿತ ವಿದ್ಯಮಾನಗಳನ್ನು ಓದುಗರಿಗೆ ತಲುಪಿಸುವ ಕಾರ್ಯದಲ್ಲಿ ತೊಡಗಿರುವ ಪತ್ರಿಕಾ ವಿತರಕರ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆ ಜಾರಿಗೊಳಿಸಿದೆ ಎಂದು ತಾಲೂಕು ಕಾರ್ಮಿಕ ನಿರೀಕ್ಷಕ ಶಿವಕುಮಾರ್ ಹೇಳಿದರು.ಪಟ್ಟಣದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ಆಯೋಜಿಸಿದ್ದ ವಿಶ್ವ ದಿನಪತ್ರಿಕಾ ವಿತರಕರ ದಿನಾಚರಣೆಯಲ್ಲಿ ಮಾತನಾಡಿ, ಪತ್ರಿಕಾ ಕ್ಷೇತ್ರ ಅಭಿವೃದ್ಧಿಯಾದಂತೆ ವಿತರಕರ ಆರ್ಥಿಕ ಸ್ಥಿತಿಯೂ ಕೂಡ ಸುಧಾರಿಸುತ್ತದೆ ಎಂದರು.
ಕೊರೆಯುವ ಚಳಿ ಸುರಿಯುವ ಮಳೆಯಲ್ಲಿಯೂ ನಸುಕಿನಲ್ಲಿ ಎದ್ದು ದಿನಪತ್ರಿಕೆ ವಿತರಿಸುವವವರ ಆರೋಗ್ಯ ಸುರಕ್ಷತೆ ಬಗ್ಗೆ ಹೆಚ್ಚು ಗಮನಹರಿಸಬೇಕು. ಸೈಕಲ್ ಮತ್ತು ಬೈಕ್‌ಗಳಲ್ಲಿ ದಿನಪತ್ರಿಕೆ ವಿತರಿಸುವ ಸಮಯದಲ್ಲಿ ಅಪಘಾತ ಸಂಭವಿಸಿ ದುರ್ಬಲಗೊಂಡರೆ ಅಂತಹ ದಿನಪತ್ರಿಕೆ ವಿತರಿಕರಿಗೆ ಸರ್ಕಾರ 2 ಲಕ್ಷ ವಿಮೆ ಸೌಲಭ್ಯ ಸೇರಿದಂತೆ ಹಲವು ಸವಲತ್ತು ಅನುಷ್ಠಾನಗೊಳಿಸಿದೆ. ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಸಂಘದ ಮಾಜಿ ಅಧ್ಯಕ್ಷ ಪಿ.ಜೆ.ಜಯರಾಮು ಮಾತನಾಡಿ, ಪ್ರತಿನಿತ್ಯ ನಸುಕಿನ ವೇಳೆಯಲ್ಲಿ ದಿನಪತ್ರಿಕೆ ವಿತರಿಸುವ ಸಮಯದಲ್ಲಿ ಬಹಳ ಎಚ್ಚರ ವಹಿಸಬೇಕು. ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಳ್ಳುವ ಮೂಲಕ ಸರ್ಕಾರದ ಸವಲತ್ತು ಪಡೆದುಕೊಂಡು ದಿನಪತ್ರಿಕೆ ವಿತರಕರು ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಸಿ.ಎನ್.ಮಂಜುನಾಥ್ ಮಾತನಾಡಿ, ಎರಡು ದಶಕಗಳ ಹಿಂದಿನ ಮತ್ತು ಪ್ರಸ್ತುತ ಪರಿಸ್ಥಿತಿ ಅವಲೋಕಸಿದರೆ ದಿನಪತ್ರಿಕೆ ವಿತರಕರು ಕಷ್ಟದಲ್ಲಿಯೇ ಜೀವನ ನಿರ್ವಹಣೆ ಮಾಡುವಂತಾಗಿದೆ ಎಂದರು.ಪ್ರತಿಕೆ ವಿತರಕರಿಗೆ ಅಪಘಾತ ವಿಮೆ ಸೇರಿದಂತೆ ಹಲವು ಸೌಲಭ್ಯ ಕಲ್ಪಿಸುವಂತೆ ದಶಕಗಳಿಂದ ನಡೆಸುತ್ತಿದ್ದ ಹೋರಾಟಕ್ಕೆ ಸ್ಪಂದಿಸಿರುವ ಸರ್ಕಾರ ಹಲವು ಯೋಜನೆಗಳನ್ನು ಕಾರ್ಯರೂಪಕ್ಕೆ ತಂದಿರುವುದು ನಿಜಕ್ಕೂ ಶ್ಲಾಘನೀಯ. ಪತ್ರಿಕೆ ಓದುಗರಿಂದ ಮೆಚ್ಚುಗೆ ಗಳಿಸುವಂತೆ ವಿತರಕರು ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಸೀತಾರಾಮು ಮತ್ತು ಸಂಘದ ಸಹ ಕಾರ್ಯದರ್ಶಿ ಯು.ವಿ.ಉಲ್ಲಾಸ್ ಮಾತನಾಡಿದರು. ಇದೇ ವೇಳೆ ದಿನಪತ್ರಿಕೆ ಹಿರಿಯ ವಿತರಕ ರಾಮಣ್ಣ ಅವರನ್ನು ಸನ್ಮಾನಿಸಲಾಯಿತು.ಕಾರ್ಯಕ್ರಮದಲ್ಲಿ ಪತ್ರಕರ್ತರಾದ ಬಿ.ಎಚ್.ರವಿ, ಕೃಷ್ಣಾಚಾರ್, ಬಿ.ಆರ್.ಕುಮಾರ್, ಎನ್.ಡಿ.ವಸಂತಕುಮಾರ್, ಯೋಗೇಶ್, ಶ್ರೀನಿವಾಸ್, ವಿತರಕರಾದ ಮುಳಕಟ್ಟೆ ಸುರೇಶ್, ಸಿದ್ದು, ಸಂತೋಷ್, ಮಂಜುನಾಥ್, ರಘು ಸೇರಿದಂತೆ ಹಲವರು ಇದ್ದರು.