ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕ್ರೀಡಾ ಸಂಸ್ಕೃತಿ, ಎನ್ ಎಸ್ ಎಸ್, ಎನ್ ಸಿಸಿ, ಯುವ ರೆಡ್ ಕ್ರಾಸ್ ಚಟುವಟಿಕೆಗಳ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಕಾಲೇಜು ದಾಖಲಾತಿಯಲ್ಲಿ ನಂ.೧ ಕಾಲೇಜಾಗಿದ್ದು, ಬೇರೆ ಪದವಿ ಕಾಲೇಜುಗಳಿಗೆ ಹೋಲಿಸಿದರೆ ಇಲ್ಲಿ ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಆದ್ದರಿಂದ ಕಾಲೇಜಿಗೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಟ್ಟಿದ್ದೇನೆ. ಇಲ್ಲಿ ಪಿಜಿ ಕೋರ್ಸ್ ತೆರೆಯಬೇಕೆಂಬ ಚಿಂತನೆ ಇತ್ತು. ಆದರೆ ಜಾಗದ ಕೊರತೆ ಕಾರಣ ಸುಕ್ಷೇತ್ರ ರಂಗಾಪುರದ ಪಕ್ಕದಲ್ಲಿ 16 ಎಕರೆ ಜಾಗದಲ್ಲಿ ನೂತನವಾಗಿ ಸ್ನಾತಕೋತ್ತರ ಕೇಂದ್ರ ಶೀಘ್ರದಲ್ಲೇ ಉದ್ಘಾಟನೆಯಾಗಲಿದ್ದು, ಇದರ ಜೊತೆಗೆ ಇನ್ನೂ ಹಲವು ನೂತನ ಕೋರ್ಸ್‌ಗಳನ್ನು ತರಲಾಗುವುದು. ಶಿಕ್ಷಣ ಪ್ರತಿಯೊಬ್ಬರ ಹಕ್ಕಾಗಿದ್ದು, ಆದ್ದರಿಂದಲೇ ಸರ್ಕಾರ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಪ್ರಸ್ತುತ ದಿನಗಳಲ್ಲಿ ಖಾಸಗಿ ಶಾಲಾ- ಕಾಲೇಜುಗಳು ಹೆಚ್ಚು ಹೆಚ್ಚು ಹಣ ಸಂಗ್ರಹ ಮಾಡುತ್ತಿವೆ. ಆದರೆ ನಮ್ಮ ಸರ್ಕಾರಿ ಶಾಲಾ ಕಾಲೇಜುಗಳನ್ನು ಯಾವ ಖಾಸಗಿ ಶಾಲಾ ಕಾಲೇಜುಗಳಿಗೂ ಕಡಿಮೆ ಇಲ್ಲದಂತೆ ಅಭಿವೃದ್ಧಿಪಡಿಸುತ್ತಿದ್ದು ಮುಂದಿನ ವರ್ಷ ನೇಮಕಾತಿ ಪ್ರಕ್ರಿಯೆಗಳು ಪ್ರಾರಂಭವಾಗಿ ಶಾಲಾ, ಕಾಲೇಜುಗಳಲ್ಲಿನ ಉಪನ್ಯಾಸಕರನ್ನು ನೇಮಕಾತಿ ಮಾಡಲು ಸರ್ಕಾರ ಒಪ್ಪಿಗೆ ಕೊಟ್ಟಿದೆ ಎಂದರು.
ಡಿ.ಐ.ಜಿ ಗುಪ್ತಚಾರ ಇಲಾಖೆ ಮತ್ತು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಆಯುಕ್ತ ಆರ್.ಚೇತನ್ ಮಾತನಾಡಿ, ಪದವಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಉತ್ತಮ ವ್ಯಕ್ತಿತ್ವವುಳ್ಳವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು, ಇಲ್ಲವಾದರೆ ದಾರಿ ತಪ್ಪುವ ಸಾಧ್ಯತೆಗಳಿವೆ. ಓದಿನ ಜೊತೆಗೆ ಕ್ರೀಡೆ, ಎನ್.ಎಸ್.ಎಸ್ ಮತ್ತು ಎನ್.ಸಿ.ಸಿ ಮತ್ತಿತರರ ಚಟುವಟಿಕೆಗಳೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಸಿದ್ಧತೆ ಮಾಡಿಕೊಳ್ಳಬೇಕೆಂದರು.ಟಿ.ನರಸೀಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ವಿ ಉದಯ್ ಕುಮಾರ್ ಮಾತನಾಡಿ, ಮೊಬೈಲ್ ಬಳಕೆಯಿಂದ ಯುವಜನರು ದಾರಿತಪ್ಪುತ್ತಿದ್ದಾರೆ. ಹಿರಿಯರ ಮಾರ್ಗದರ್ಶನವಿಲ್ಲದೆ ಕಲಿಕೆಯನ್ನು ಅಪೂರ್ಣಗೊಳಿಸಿ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಉತ್ತಮ ಗುಣಗಳನ್ನು ಬೆಳೆಸಿಕೊಂಡು ವಿದ್ಯಾರ್ಥಿ ಜೀವನವನ್ನು ಸದೃಢ ಮಾಡಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಎಚ್.ಸಿ. ಶಶಿಕುಮಾರ್ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಗೆ ನಮ್ಮ ಕಾಲೇಜು ಉತ್ತಮ ವಾತಾವರಣ ಹೊಂದಿದ್ದು, ಸುಮಾರು 3 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಗ್ರಾಮೀಣ ವಿದ್ಯಾರ್ಥಿಗಳೇ ಹೆಚ್ಚಿರುವುದರಿಂದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದರು.ಕಾರ್ಯಕ್ರಮದಲ್ಲಿ ಪೋಷಕರ ಸಂಘದ ಅಧ್ಯಕ್ಷ ಬಿಲ್ಲೆಮನೆ ಚಂದ್ರಶೇಖರ್, ನಿವೃತ್ತ ಶಿಕ್ಷಕ ಮಲಿಗಪ್ಪಚಾರ್, ಉಪನ್ಯಾಸಕರಾದ ಶಿವಕುಮಾರ್, ನಾಗರಾಜು, ಸುಭದ್ರಮ್ಮ, ಸ್ಮಿತಾ, ಶಂಕರ್, ಶಶಿಕುಮಾರ್, ಸುರೇಶ್ ಸೇರಿದಂತೆ ಬೋಧಕ ಮತ್ತು ಭೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.