ಹೊಸ ಬೆಳಕು ಕಾರ್ಯಕ್ರಮದಲ್ಲಿ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ
ಕನ್ನಡಪ್ರಭ ವಾರ್ತೆ ಹಿರೇಕೆರೂರುಕೆಸಿಸಿ ಬ್ಯಾಂಕ್ ವತಿಯಿಂದ ಒಂದೇ ಸೂರಿನಡಿ ಹಲವು ಸೇವೆ ಪರಿಚಯಿಸಿದ್ದು, ಗ್ರಾಹಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ ಹೇಳಿದರು.
ಪಟ್ಟಣದ ಕೆಸಿಸಿ ಬ್ಯಾಂಕ್ ಶಾಖೆಯಲ್ಲಿ ನಡೆದ ಹೊಸ ಬೆಳಕು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಕೆಸಿಸಿ ಬ್ಯಾಂಕ್ ಇಂದು ಗ್ರಾಹಕರ ಅನುಕೂಲಕ್ಕಾಗಿ ಹಲವು ಯೋಜನೆಗಳನ್ನು ರೂಪಿಸಿದೆ. ಎಲ್ಲ ಯೋಜನೆಗಳ ಸದುಪಯೋಗಪಡಿಸಿಕೊಳ್ಳುವ ಮೂಲಕ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು. ಕೆಸಿಸಿ ಬ್ಯಾಂಕಿನ ಮೂಲಕ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಸಾಲ, ಠೇವಣಿ ಭದ್ರತಾ ಸಾಲ, ಶೇ.೩ ಬಡ್ಡಿ ದರದಲ್ಲಿ ಟ್ರ್ಯಾಕ್ಟರ್ ಸಾಲ, ವೈಯಕ್ತಿಕ ಸಾಲ, ಬಂಗಾರ ಅಡಮಾನ ಸಾಲ ನೀಡಲಾಗುತ್ತಿದ್ದು ಸಾಲ ಪಡೆದು ಅನಕೂಲ ಮಾಡಿಕೊಳ್ಳುವ ಜತೆಗೆ ಸಕಾಲಕ್ಕೆ ಸಾಲ ಮರು ಪಾವತಿ ಮಾಡಿ ಬ್ಯಾಂಕಿನ ಶ್ರೇಯೋಭಿವೃದ್ಧಿಗೂ ಸಹಕರಿಸಬೇಕು ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಉದ್ಯಮ ದಯಾನಂದ ಜನ್ನು, ಸುದೀರ್ಘ ಇತಿಹಾಸ ಹೊಂದಿದ ಕೆಸಿಸಿ ಬ್ಯಾಂಕ್ ಗ್ರಾಹಕರಿಗೆ ಸೇವೆ ನೀಡುವಲ್ಲಿ ಹೆಸರು ವಾಸಿಯಾಗಿದೆ. ಗ್ರಾಹಕರಿಗೆ ಹೊಸ ಹೊಸ ಸೇವೆಗಳನ್ನು ನೀಡುತ್ತಿದ್ದು ಗ್ರಾಹಕರು ಪ್ರಯೋಜನ ಪಡೆದುಕೊಳ್ಳಬೇಕು ಎಂದರು.ಇದೇ ಸಂದರ್ಭದಲ್ಲಿ ಉದ್ಯಮಿ ದಯಾನಂದ ಜನ್ನು ಹಾಗೂ ಚಿಕ್ಕೇರೂರಿನ ಅರ್ಬನ್ ಸೊಸೈಟಿ ಅಧ್ಯಕ್ಷ ನಾರಾಯಣ ಮಿರಜಕರ ಅವರನ್ನು ಸನ್ಮಾನಿಸಲಾಯಿತು. ಎರಡು ಸ್ತ್ರೀ ಶಕ್ತಿ ಮಹಿಳಾ ಸ್ವ ಸಹಾಯ ಗುಂಪುಗಳಿಗೆ ಮಂಜೂರಾದ ಸಾಲ ವಿತರಣೆ ಮಾಡಲಾಯಿತು.
ಸಭೆಯಲ್ಲಿ ಕೆಸಿಸಿ ಬ್ಯಾಂಕ್ ನಿರ್ದೇಶಕ ರವಿಶಂಕರ ಬಾಳಿಕಾಯಿ, ಪಿಎಸಿಎಸ್ ಅಧ್ಯಕ್ಷ ಮಹೇಂದ್ರ ಬಡಳ್ಳಿ, ಸೋಮಶೇಖರ ಎಣ್ಣಿ, ಬಸವರಾಜ ಮಂಗಣಿ ಸೇರಿದಂತೆ ಬ್ಯಾಂಕಿನ ಸಿಬ್ಬಂದಿ ಹಾಗೂ ಗ್ರಾಹಕರು ಇದ್ದರು.