ಕನ್ನಡಪ್ರಭ ವಾರ್ತೆ ಮಂಡ್ಯ
ಶ್ರೀರಂಗಪಟ್ಟಣದ ನಿಮಿಷಾಂಭ ದೇವಸ್ಥಾನದಲ್ಲಿ ಬೆಳಗ್ಗೆಯಿಂದಲೇ ದೇವಿ ದರ್ಶನಕ್ಕೆ ಭಕ್ತರ ದಂಡು ಆಗಮಿಸುತ್ತಿತ್ತು. ಗ್ರಹಣ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಗೆವರೆಗೆ ಮಾತ್ರ ದೇವಿ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಭಕ್ತರು ಆಗಮಿಸಿ ನಿಮಿಷಾಂಭ ದೇವಿ ದರ್ಶನ ಪಡೆದರು. ಮಧ್ಯಾಹ್ನದ ನಂತರ ದೇವಾಲಯದ ಬಾಗಿಲು ಬಂದ್ ಮಾಡಲಾಯಿತು. ಗ್ರಹಣ ಕಾಲದಲ್ಲಿ ನಿಮಿಷಾಂಭ ದೇವಿಗೆ ಮಂತ್ರಪಠಣದ ಮೂಲಕ ಜಲಾಭಿಶೇಕ ಮಾಡಲಾಯಿತು.ಅಲ್ಲದೇ, ಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಗ್ರಹಣದ ಹಿನ್ನೆಲೆಯಲ್ಲಿ ಸಂಜೆ 5 ಗಂಟೆವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಿ, ನಂತರ ದೇವಸ್ಥಾನ ಬಾಗಿಲು ಬಂದ್ ಮಾಡಲಾಯಿತು.
ಮೇಲುಕೋಟೆ ಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲೂ ಗ್ರಹಣದ ಹಿನ್ನೆಲೆಯಲ್ಲಿ ಸಂಜೆ 4 ಗಂಟೆ ನಂತರ ದೇವಸ್ಥಾನ ಬಂದ್ ಮಾಡಲಾಯಿತು. ಗ್ರಹಣದ ವೇಳೆ ದೇವಸ್ಥಾನ ಒಳಭಾಗದಲ್ಲಿ ಪೂಜೆ ನಡೆಯಲಿದ್ದು, ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದಿಲ್ಲ. ಸೋಮವಾರ ಬೆಳಗ್ಗೆ ದೇವಸ್ಥಾನದಲ್ಲಿ ಶುದ್ಧೀಕರಣ, ವಿಶೇಷ ಪೂಜೆ ನಂತರ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಆಡಳಿತ ಮಂಡಳಿ ತಿಳಿಸಿದೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ತಾಲೂಕಿನ ಟಿಎಂ.ಹೊಸೂರು ಗೇಟ್ ಬಳಿ ಇರುವ ಮಹಾಕಾಳಿ ದೇವಾಲಯದಲ್ಲಿ ಚಂದ್ರಗ್ರಹಣ ಸಮಯದಲ್ಲಿ ಮೌಢ್ಯಕ್ಕೆ ಸೆಡ್ಡು ಹೊಡೆದುಮಹಾಕಾಳಿ ದೇವಿಗೆ ವಿಶೇಷ ಪೂಜೆಗಳನ್ನು ನೆರವೇರಿಸಲಾಗಿದೆ.ಮಹಾಕಾಳಿ ದೇವಾಲಯದಲ್ಲಿ ಯಾವುದೇ ಗ್ರಹಣವಿದ್ದರೂ ದೇವಿಗೆ ಪ್ರತಿ ನಿತ್ಯದ ಪೂಜೆಗಳು, ಹೋಮಗಳು ನಿಲ್ಲದಂತೆ ನೋಡಿಕೊಳ್ಳಲಾಗಿದೆ. ಗ್ರಹಣ ಕಾಲದಲ್ಲೂ ದೇವಾಲಯ ಬಂದ್ ಮಾಡದೆ ಎಲ್ಲಾ ಭಕ್ತರಿಗೆ ಮುಕ್ತ ಪ್ರವೇಶ ನೀಡಿ ದೇವಿಗೆ ಪೂಜೆ ಸಲ್ಲಿಸಿದರು.
ನಮ್ಮ ಪೂರ್ವಜರಿಂದಲೂ ನಮಗೆ ಗ್ರಹಣ ಕಾಲದಲ್ಲಿ ನಮಗೆ ಏನೂ ಆಗಿಲ್ಲ. ನಾವು ನಾಳೆಯೂ ಕೂಡ ಬ್ರಾಹ್ಮಿ ಮುಹೂರ್ತದಲ್ಲಿ ದೇವಾಲಯದ ಬಾಗಿಲು ತೆರೆದು ದೇವಿಗೆ ಪೂಜೆ ಸಲ್ಲಿಸುತ್ತೇವೆ. ಅಲ್ಲದೇ, ಗ್ರಹಣದ ದಿನ ದೇವಿಗೆ ವಿಶೇಷವಾಗಿ ಪ್ರತ್ಯಂಗೀರಾ ಹೋಮ ಹಾಗೂ ಪೂಜೆ ಇರಲಿದೆ. ಜನರು ಮೌಢ್ಯದಿಂದ ಹೊರಬಂದು ದೇವರ ದರ್ಶನ ಪಡೆಯಬಹುದು ಎಂದು ತಿಳಿಸಿದರು. ವಿವಿಧ ಗ್ರಾಮಗಳಿಂದ ದೇವಾಲಯದಲ್ಲಿ ಭಕ್ತರ ದಂಡು ಹರಿದು ಬಂದಿತ್ತು.