ಹೂವಿನಹಡಗಲಿ: ತಾಲೂಕಿನ ಮಾನ್ಯರ ಮಸಲವಾಡ ಗ್ರಾಮದ ವಾಂತಿ-ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪಿಡಿಒ ಮಹ್ಮದ್ ರಫಿ ಅವರನ್ನು ಅಮಾನತು ಮಾಡಿ ಜಿಪಂ ಸಿಇಒ ನೊಂಗ್ಝಾಯಿ ಅಕ್ರಮ ಅಲಿ ಷಾ ಆದೇಶ ಹೊರಡಿಸಿದ್ದಾರೆ.
ಹತೋಟಿಗೆ ಬಂದ ವಾಂತಿ-ಭೇದಿ: ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣಗಳು ಸಂಖ್ಯೆ ಕಡಿಮೆಯಾಗುತ್ತಿದೆ. ಜನರಿಗೆ ಟ್ಯಾಂಕರ್ ಮೂಲಕ ಶುದ್ಧ ಕುಡಿಯುವ ನೀರು ಒದಗಿಸಲಾಗುತ್ತಿದೆ. ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಿಬ್ಬಂದಿ ಜನರ ಮನೆ ಬಾಗಿಲಿಗೆ ಹೋಗಿ ಆರೋಗ್ಯ ಜಾಗೃತಿ ಮೂಡಿಸುತ್ತಿದ್ದಾರೆ. ಹೂವಿನಹಡಗಲಿ, ದಾವಣಗೆರೆ, ಹರಪನಹಳ್ಳಿಯ ವಿವಿಧ ಆಸ್ಪತ್ರೆಗಳು ಮತ್ತು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಎಲ್ಲ ರೋಗಿಗಳು ಚೇತರಿಸಿಕೊಂಡಿದ್ದಾರೆ ಎಂದು ತಾಲೂಕು ಆರೋಗ್ಯಾಧಿಕಾರಿ ಸಪ್ನಾ ಕಟ್ಟಿ ಹೇಳಿದರು.
ಗ್ರಾಮದಲ್ಲಿ ಕಲುಷಿತ ನೀರು ಕುಡಿದ ಪರಿಣಾಮ ಆರಂಭದಿಂದ ಈ ವರೆಗೂ, 40ಕ್ಕೂ ಹೆಚ್ಚು ವಾಂತಿ-ಭೇದಿ ಪ್ರಕರಣಗಳು ಕಂಡು ಬಂದಿದ್ದವು. ಶುಕ್ರವಾರ 5ರಿಂದ 6 ಜನರನ್ನು ಆಶಾ ಕಾರ್ಯಕರ್ತೆಯರು ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ಕೊಡಿಸಿ ಕಳುಹಿಸುತ್ತಿದ್ದಾರೆ.5 ಕೊಳವೆ ಬಾವಿ ನೀರು ಪರೀಕ್ಷೆಗೆ: ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗಾಗಿ 5 ಕೊಳವೆ ಬಾವಿಗಳ ನೀರನ್ನು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಪ್ರಯೋಗಾಲಕ್ಕೆ ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಗ್ರಾಮದ ಹರಿಜನ ಕಾಲನಿ ಮತ್ತು ಮಾಡಲಗೇರಿ ರಸ್ತೆಯಲ್ಲಿ ಕೊಳವೆಬಾವಿಯ ನೀರು ಕುಡಿಯಲು ಯೋಗ್ಯವಾಗಿಲ್ಲ ಎಂಬ ವರದಿ ಬಂದಿದೆ. ಉಳಿದ 3 ಕೊಳವೆ ಬಾವಿಗಳ ನೀರು ಯೋಗ್ಯವಾಗಿವೆ. ಕೊಳವೆ ಬಾವಿಗಳ ಸುತ್ತಮುತ್ತಲಿನ ಪ್ರದೇಶ ಸ್ವಚ್ಛತೆಯೇ ಇಲ್ಲ, ಗ್ರಾಮದ ಚರಂಡಿ ನೀರು ಕೊಳವೆಬಾವಿ ತಳಮಟ್ಟದಲ್ಲಿದ್ದು, ಮಳೆ ಮತ್ತು ಚರಂಡಿಯ ಕಲುಷಿತ ನೀರು ಸೇರಿಕೊಂಡಿದೆ. ಜತೆಗೆ ನೀರಿನ ವಾಲ್‌ಗಳಲ್ಲಿಯೂ ಕಲುಷಿತ ನೀರು ಮಿಶ್ರಣವಾಗಿ ಜನರಿಗೆ ನೀರು ಪೂರೈಕೆಯಾಗುತ್ತಿದೆ. ಈ ಕುರಿತು ಗ್ರಾಪಂ ಕ್ರಮ ಕೈಗೊಳ್ಳದ ಕಾರಣ ವಾಂತಿ-ಭೇದಿ ಪ್ರಕರಣ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಜನ ಆಕ್ರೋಶ ವ್ಯಕ್ತಪಡಿಸುತ್ತಾರೆ.
2-3 ದಿನಗಳ ಹಿಂದೆ ಸ್ಥಳಕ್ಕೆ ಭೇಟಿ ನೀಡಿದ್ದ ಶಾಸಕ ಕೃಷ್ಣ ನಾಯ್ಕ ಅವರು ಸ್ವಚ್ಛತೆ ನಿರ್ಲಕ್ಷ್ಯ ಮಾಡಿರುವ ಕುರಿತು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.ಸ್ವಚ್ಛತೆಯ ಪಾಠ ಕಲಿಸಿದ್ದ ಪ್ರಕರಣ: ಕಳೆದ 2021ರಲ್ಲಿ ತಾಲೂಕಿನ ಮಕರಬ್ಬಿ ಗ್ರಾಮದಲ್ಲಿ ವಾಂತಿ-ಭೇದಿ ಪ್ರಕರಣದಿಂದ 7 ಜನ ಮೃತಪಟ್ಟಿದ್ದರು. ಆ ಸಂದರ್ಭದಲ್ಲಿ 26 ಗ್ರಾಪಂನ ಕುಡಿಯುವ ನೀರನ್ನು ಪರೀಕ್ಷೆಗೆ ಒಳಪಡಿಸುವ ಜತೆಗೆ, ಪ್ರತಿಯೊಂದು ಊರಿನ ಕುಡಿಯುವ ನೀರಿನ ಟ್ಯಾಂಕ್‌ಗಳ ಸ್ವಚ್ಛತೆ, ಚರಂಡಿಯಲ್ಲಿ ಹೂಳು ತೆರವು ಸೇರಿದಂತೆ ಇನ್ನಿತರ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈ ವೇಳೆ ಶುದ್ಧ ಕುಡಿಯುವ ನೀರಿಗೆ ಬೇಡಿಕೆ ಹೆಚ್ಚಾಗಿತ್ತು. ಇಡೀ ತಾಲೂಕಿಗೆ ಆರೋಗ್ಯದ ಪಾಠ ಕಲಿಸಿದ್ದ ಮಕರಬ್ಬಿ ವಾಂತಿ-ಭೇದಿ ಪ್ರಕರಣವನ್ನು ಸ್ಥಳೀಯ ಆಡಳಿತ ಮರೆತಿದೆ. ತಾಲೂಕಿನ ಅನೇಕ ಹಳ್ಳಿಗಳಲ್ಲಿ ತಗ್ಗು ಗುಂಡಿ ಮತ್ತು ತಿಪ್ಪೆಗುಂಡಿಗಳ ಪಕ್ಕದಲ್ಲೇ ಕೊಳವೆ ಬಾವಿಗಳಿವೆ. ಈ ಕುರಿತು ತಾಪಂ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಗ್ರಾಮಕ್ಕೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಇಇ ದೀಪಾ, ಎಇಇ ಅಂಬೇಡ್ಕರ್, ತಾಪಂ ಇಒ ಎಂ. ಉಮೇಶ, ತಾಲೂಕು ಆರೋಗ್ಯಾಧಿಕಾರಿ ಸಪ್ನಾ ಕಟ್ಟಿ ಭೇಟಿ ನೀಡಿದ್ದಾರೆ.