ಮರಕುಂಬಿ ಪ್ರಕರಣ, ಅಪರಾಧಿ ಸಾವು

KannadaprabhaNewsNetwork |  
Published : Oct 26, 2024, 12:50 AM IST
25ಕೆಪಿಎಲ್21 ರಾಮಣ್ಣ ಭೋವಿ 25ಕೆಪಿಎಲ್22 ಕೊಪ್ಪಳ  ಜಿಲ್ಲಾಸ್ಪತ್ರೆ ಎದುರು ಬೋರಾಡಿ ಅಳುತ್ತಿರುವ ಮೃತ ರಾಮಣ್ಣ ಭೋವಿ  ಪತ್ನಿ | Kannada Prabha

ಸಾರಾಂಶ

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಮರಕುಂಬಿ ಅಸ್ಪೃಶ್ಯತೆ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಪಾಲಾಗಿದ್ದ ರಾಮಣ್ಣ ಭೋವಿ (40) ಗುರುವಾರ ತಡರಾತ್ರಿ ಮರಣ ಹೊಂದಿದ್ದಾನೆ. ಪೊಲೀಸ್ ಕಸ್ಟಡಿಯಲ್ಲಿಯೇ ಇರುವಾಗಲೇ ರಾಮಣ್ಣ ಅಸ್ವಸ್ಥಗೊಂಡಿದ್ದಾನೆ. ಬಳಿಕ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುವಾಗ ಅಸು ನೀಗಿದ್ದಾನೆ.

ಕೊಪ್ಪಳ: ಮರಕುಂಬಿ ಅಸ್ಪೃಶ್ಯತೆ ಪ್ರಕರಣದಲ್ಲಿ ಅಪರಾಧಿಯಾಗಿ ಜೈಲು ಪಾಲಾಗಿದ್ದ ರಾಮಣ್ಣ ಭೋವಿ (40) ಗುರುವಾರ ತಡರಾತ್ರಿ ಮರಣ ಹೊಂದಿದ್ದಾನೆ.

ಪೊಲೀಸ್ ಕಸ್ಟಡಿಯಲ್ಲಿಯೇ ಇರುವಾಗಲೇ ರಾಮಣ್ಣ ಅಸ್ವಸ್ಥಗೊಂಡಿದ್ದಾನೆ. ಬಳಿಕ ಕೊಪ್ಪಳ ಜಿಲ್ಲಾಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡುವಾಗ ಅಸು ನೀಗಿದ್ದಾನೆ.

ಜೀವಾವಧಿ ಶಿಕ್ಷೆ ಘೋಷಣೆಯಾಗಿದ್ದರಿಂದ ನೊಂದುಕೊಂಡಿದ್ದ ರಾಮಣ್ಣ ಭೋವಿ ತೀವ್ರ ಅಸ್ವಸ್ಥನಾಗಿದ್ದಾನೆ. ತಕ್ಷಣ ಕೊಪ್ಪಳ ಜಿಲ್ಲಾಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.

ಮರಕುಂಬಿ ಪ್ರಕರಣದಲ್ಲಿ 117 ಜನರು ಆರೋಪಿಗಳು ಇದ್ದರು. ಅದರಲ್ಲಿ ಆರು ಜನರ ಹೆಸರು ಎರಡು ಬಾರಿ ದಾಖಲಾಗಿದ್ದವು. ಹೀಗಾಗಿ, ವಾಸ್ತವವಾಗಿ ಆರೋಪಿಗಳ ಸಂಖ್ಯೆ 111 ಮಾತ್ರ. ಈ 111 ಆರೋಪಿಗಳ ಪೈಕಿ 10 ಜನರು ಕಳೆದ 9 ವರ್ಷಗಳಲ್ಲಿ ಬೇರೆ ಬೇರೆ ಕಾರಣದಿಂದ ಮೃತಪಟ್ಟಿದ್ದಾರೆ.

ಆರೋಪ ಸಾಬೀತಾಗಿ, ಶಿಕ್ಷೆಯ ಪ್ರಮಾಣ ಪ್ರಕಟವಾಗಿತ್ತು. 98 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ಮತ್ತು ಮೂವರಿಗೆ ಐದು ವರ್ಷ ಜೈಲು ಶಿಕ್ಷೆ ಪ್ರಕಟವಾದ ಮೇಲೆ 101 ಜನರನ್ನು ಬಂಧಿಸಲಾಗಿತ್ತು.

ಬಂಧನದಲ್ಲಿರುವಾಗಲೇ ರಾಮಣ್ಣ ಭೋವಿ ಜೀವಾವಧಿ ಶಿಕ್ಷೆಯ ಮಾಹಿತಿ ಪಡೆದ ಮೇಲೆ ತೀವ್ರ ಅಸ್ವಸ್ಥಗೊಂಡಿದ್ದನು.

ಬಿಕ್ಕಿ ಬಿಕ್ಕಿ ಅತ್ತ ಪತ್ನಿ: ರಾಮಣ್ಣ ಭೋವಿ ಅವರ ಪತ್ನಿ ಆಸ್ಪತ್ರೆಯ ಬಳಿ ಬೋರಾಡಿ ಅತ್ತಿದ್ದಾರೆ. ಪತಿಯ ಸಾವಿನ ಸುದ್ದಿಯಿಂದ ಗರಬಡಿದಂತೆ ಆಗಿ, ಜಿಲ್ಲಾಸ್ಪತ್ರೆಯ ಎದುರು ಬೋರಾಡಿ ಅತ್ತರು. ಅವರನ್ನು ಸಾಂತ್ವನ ಮಾಡಲು ಸಂಬಂಧಿಕರು ಹೆಣಗಾಡಬೇಕಾಯಿತು.

ಪೊಲೀಸ್ ಬಿಗಿ ಭದ್ರತೆಯಲ್ಲಿ ಅಂತ್ಯಸಂಸ್ಕಾರ: ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ನಡೆದ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿ, ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟ ರಾಮಣ್ಣ ಭೋವಿ ಅಂತ್ಯಸಂಸ್ಕಾರ ನಡೆಯಿತು.

ಜಿಲ್ಲಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ರಾಮಣ್ಣ ಭೋವಿ ಶವ ಮರಣೋತ್ತರ ಪರೀಕ್ಷೆಯ ಆನಂತರ ಆ್ಯಂಬುಲೆನ್ಸ್‌ನಲ್ಲಿ ಮರಕುಂಬಿ ಗ್ರಾಮಕ್ಕೆ ತಂದು, ಆನಂತರ ಪೊಲೀಸ್ ಬಿಗಿ ಭದ್ರತೆಯಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಯಿತು.

PREV

Recommended Stories

ವಿಶ್ವದಲ್ಲೇ ಮೊದಲ ಬಾರಿ ಬನ್ನೇರುಘಟ್ಟದಲ್ಲಿ ಕರಡಿಗೆ ಕೃತಕ ಕಾಲು ಜೋಡಣೆ
ರಾಜ್ಯದ ಸಿರಿಧಾನ್ಯ ಬೆಳೆಗಾರರಿಗೆ ರಾಜ್ಯ ಸರ್ಕಾರದ ಸಿಹಿ ಸುದ್ದಿ