ಮರಾಠರು ಹಿಂದುಗಳೇ ವಿನಃ ಹಿಂದುತ್ವವಾದಿಗಳಲ್ಲ: ಸಚಿವ ಲಾಡ್‌

KannadaprabhaNewsNetwork |  
Published : Mar 03, 2024, 01:33 AM IST
2ಡಿಡಬ್ಲೂಡಿ5ಮರಾಠಾ ವಿದ್ಯಾ ಪ್ರಸಾರಕ ಮಂಡಳದಲ್ಲಿ ನಡೆದ ಮರಾಠಾ ಜಾಗೃತಿ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. | Kannada Prabha

ಸಾರಾಂಶ

ಇಡೀ ದೇಶಕ್ಕೆ ಮೀಸಲಾತಿ ಕೊಟ್ಟ ಸಮಾಜ ನಮ್ಮದಾಗಿದೆ. ಆದರೆ, ಇಂದು ನಾವು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ ಎಂದು ಸಚಿವ ಸಂತೋಷ ಲಾಡ್ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಮರಾಠರು ಹಿಂದೂಗಳೇ ವಿನಃ ಹಿಂದುತ್ವವಾದಿಗಳಲ್ಲ. ಆದರೆ, ಇಂದು ಸಮಾಜದಲ್ಲಿ ವ್ಯವಸ್ಥಿತವಾಗಿ ಮರಾಠರು ಮುಸ್ಲಿಂ ವಿರೋಧಿಗಳು ಎಂದು ಬಿಂಬಿಸಲಾಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ವಿಷಾಧಿಸಿದರು.

ಇಲ್ಲಿಯ ಮರಾಠಾ ವಿದ್ಯಾಪ್ರಸಾರಕ ಮಂಡಳದಲ್ಲಿ ಸಂತೋಷ ಲಾಡ್ ಫೌಂಡೇಶನ್ ವತಿಯಿಂದ ನಡೆದ ಮರಾಠಾ ಜಾಗೃತಿ ಸಮಾವೇಶ ಮತ್ತು ಸಾಧಕರಿಗೆ ಸನ್ಮಾನ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ದೇಶಕ್ಕೆ ಮೀಸಲಾತಿ ಕೊಟ್ಟ ಸಮಾಜ ನಮ್ಮದಾಗಿದೆ. ಆದರೆ, ಇಂದು ನಾವು ಮೀಸಲಾತಿಗಾಗಿ ಹೋರಾಟ ಮಾಡುತ್ತಿದ್ದೇವೆ. ಅಲ್ಲದೇ ಊಳುವವರಿಗೆ ಭೂಮಿ ನೀಡಿದ ಸಮಾಜ ನಮ್ಮದು. ಆದರೆ, ನಮಗೆ ಇಂದು ಜಾಗೆ ನೀಡುವಂತೆ ಸರ್ಕಾರವನ್ನು ಕೇಳುವ ಪರಿಸ್ಥಿತಿ ಸಮಾಜಕ್ಕೆ ಬಂದೊದಗಿದೆ ಎಂದರು.

ಶಿವಾಜಿ ಜಯಂತಿ ಸಂದರ್ಭದಲ್ಲಿ ಹಿಂದುತ್ವದ ಬಗೆಗೆ ಸಾಕಷ್ಟು ಜನರು ಭಾಷಣ ಮಾಡುತ್ತಾರೆ. ಆದರೆ, ಅವರ ಮನೆಯಲ್ಲಿಯೇ ಶಿವಾಜಿ ಮಹಾರಾಜರ ಭಾವಚಿತ್ರವಿರುವುದಿಲ್ಲ. ಅದಕ್ಕಾಗಿ ಇತಿಹಾಸವನ್ನು ತಿರುಚಿ ಹೇಳುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದ್ದು, ಪ್ರತಿಯೊಬ್ಬ ಮರಾಠರು ಶಿವಾಜಿ ಮಹಾರಾಜರ ಇತಿಹಾಸವನ್ನು ತಿಳಿದುಕೊಳ್ಳಬೇಕು. ಬಡವರಿಗೆ, ತೊಂದರೆಯಲ್ಲಿ ಇರುವವರಿಗೆ ಸಹಾಯ ಮಾಡುವವರೇ ಛತ್ರಪತಿ. ಆ ಕೆಲಸವನ್ನು ಶಿವಾಜಿ ಮಹಾರಾಜರು ಮಾಡಿದರು. ಅದಕ್ಕಾಗಿಯೇ ಅವರನ್ನು ಛತ್ರಪತಿ ಎಂದು ಕರೆಯಲಾಗುತ್ತದೆ. ಶಿವಾಜಿ ಮಹಾರಾಜರು ಅಷ್ಟೊಂದು ಬೆಳೆಯಲು ತಾಯಿ ಜೀಜಾಮಾತಾ ಕಾರಣ. ಆದ್ದರಿಂದ ಪ್ರತಿಯೊಂದು ಕಾರ್ಯಕ್ರಮದಲ್ಲಿ ನಾವು ಮಹಿಳೆಯರಿಗೆ ವಿಶೇಷ ಗೌರವ ನೀಡುತ್ತೇವೆ ಎನ್ನುವುದನ್ನು ಸಮಾಜದ ಬಾಂಧವರು ಅರಿತುಕೊಳ್ಳಬೇಕು ಎಂದರು.

ಬೆಂಗಳೂರಿನ ಗೋಸಾವಿ ಮಠದ ಮಂಜುನಾಥ ಭಾರತಿ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಅವುಗಳನ್ನು ಪರಿಹರಿಸಲು ಎಲ್ಲರೂ ಒಂದಾಗಿ ಶ್ರಮಿಸಬೇಕು. ಉತ್ತಮ ಸಮಾಜವನ್ನು ಎಲ್ಲರೂ ಸೇರಿ ಕಟ್ಟೋಣ ಎಂದರು. ಇದೇ ಸಂದರ್ಭದಲ್ಲಿ ಸುಮಾರು 150ಕ್ಕೂ ಹೆಚ್ಚು ಸಮಾಜದ ಸಾಧಕರನ್ನು ಸನ್ಮಾನಿಸಲಾಯಿತು. ಮರಾಠಾ ವಿದ್ಯಾಪ್ರಸಾರಕ ಮಂಡಳದ ಅಧ್ಯಕ್ಷ ಮನೋಹರ ಮೋರೆ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಾನಂದ ಸ್ವಾಮೀಜಿ, ಅನೀಲ ಪಾಟೀಲ, ಡಾ. ಮಯೂರ ಮೋರೆ, ಶಂಕರ ಶೇಳಕೆ, ನಾರಾಯಣ ವೈದ್ಯ, ಗಣೇಶ ಕದಂ, ಸುನೀಲ ದಳವಿ, ಸಂಭಾಜಿ ಘೋಡಸೆ, ಭೀಮಪ್ಪ ಕಸಾಯಿ, ರಾಜು ಬಿರಜನ್ನವರ, ಬಸವಂತ ಮಾಲನವರ, ಬಸವರಾಜ ಜಾಧವ ಇದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ