ಉಡುಪಿ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು, ಸ್ಥಳೀಯ ಕೇಬಲ್ ಆಪರೇಟರ್ಸ್ ಮತ್ತು ನೆಟ್‌ವರ್ಕ್ ಸರ್ವೀಸ್ ಪ್ರೋವೈಡರ್ಸ್‌ಗಳಿಗೆ ಸೂಕ್ತ ನಿರ್ದೇಶನ ನೀಡಲು ಸಭೆ ನಡೆಯಿತು. ಸಭೆಯಲ್ಲಿ ಡಿಸಿ ವಿದ್ಯಾಕುಮಾರಿ ವಿವಿಧ ಮಾಹಿತಿಗಳನ್ನು ನೀಡಿದರು.
ಕನ್ನಡಪ್ರಭ ವಾರ್ತೆ ಉಡುಪಿಲೋಕಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣಗಳು, ಸ್ಥಳೀಯ ಕೇಬಲ್ ವಾಹಿನಿಗಳು ಮತ್ತು ಮಾಧ್ಯಮಗಳು ಚುನಾವಣಾ ಆಯೋಗ ಸೂಚಿಸಿರುವ ನಿಯಮಗಳ ಉಲ್ಲಂಘನೆ ಮಾಡಿದರೆ ಪ್ರಜಾ ಪ್ರತಿನಿಧಿ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಡಾ. ಕೆ.ವಿದ್ಯಾಕುಮಾರಿ ಹೇಳಿದರು.
ಅವರು ಶನಿವಾರ ನಗರದ ಮಣಿಪಾಲ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ತಡೆಯುವುದಕ್ಕಾಗಿ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥರು, ಸ್ಥಳೀಯ ಕೇಬಲ್ ಆಪರೇಟರ್ಸ್ ಮತ್ತು ನೆಟ್‌ವರ್ಕ್ ಸರ್ವೀಸ್ ಪ್ರೋವೈಡರ್ಸ್‌ಗಳಿಗೆ ಸೂಕ್ತ ನಿರ್ದೇಶನ ನೀಡಲು ಏರ್ಪಡಿಸಲಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.ಚುನಾವಣೆಗೆ ಸಂಬಂಧಿಸಿದ ಯಾವುದೇ ರೀತಿಯ ಕರಪತ್ರ ಹಾಗೂ ಜಾಹೀರಾತು ಮೂಲಕ ಚುನಾವಣೆ ಪ್ರಚಾರಪಡಿಸುವ ಮುನ್ನ ಮಿಡಿಯಾ ಸರ್ಟಿಫೈ - ಮಾನಿಟರಿಂಗ್ ಕಮಿಟಿ (ಎಂ.ಸಿ.ಎ.ಸಿ.) ಯ ಪೂರ್ವಾನುಮತಿ ಪಡೆಯುವುದು ಕಡ್ಡಾಯ. ಪ್ರಿಂಟಿಂಗ್ ಪ್ರೆಸ್ ಮಾಲೀಕರು ಯಾವುದೇ ಪಕ್ಷ, ಅಭ್ಯರ್ಥಿಯ ಕರಪತ್ರಗಳನ್ನು ಮುದ್ರಿಸುವ 3 ದಿನಗಳ ಮೊದಲು ಕರಡು ಕರಪತ್ರವನ್ನು ಮುದ್ರಿಸುವ ಮೂರು ದಿನ ಪೂರ್ವದಲ್ಲಿಯೇ ಎಂ.ಸಿ.ಎಂ.ಸಿ. ಗೆ ಸಲ್ಲಿಸಿ, ಅನುಮತಿ ಪಡೆಯಬೇಕು. ಕರಪತ್ರದಲ್ಲಿ ದ್ವೇಷಪೂರಿತ, ನಿಂದನೆ ಮತ್ತು ಮಾನಹಾನಿಕರ ಅಂಶಗಳಿದ್ದರೆ ಪೂರ್ವಾನುಮತಿ ನೀಡುವುದಿಲ್ಲ ಎಂದರು.
ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳಲ್ಲಿ ಸಮಾಜದ ಶಾಂತಿ ಕದಡುವ, ಇನ್ನೊಬ್ಬರನ್ನು ಅಪಮಾನಿಸುವ, ಯಾವುದೇ ಧರ್ಮವನ್ನು ಹೀಯಾಳಿಸುವ, ಕಾನೂನು ಉಲ್ಲಂಘನೆ ಮಾಡುವ ವಿಷಯಗಳಿರಬಾರದು. ಮಾಧ್ಯಮಗಳಲ್ಲಿ ಪಾವತಿ ಸುದ್ದಿಗಳ ಬಗ್ಗೆ ತೀವ್ರ ನಿಗಾ ವಹಿಸಲಾಗುತ್ತದೆ ಎಂದರು.
ಜಿಲ್ಲೆಯಲ್ಲಿ ನ್ಯಾಯಸಮ್ಮತ, ಶಾಂತಿಯುತ ಲೋಕಸಭಾ ಚುನಾವಣೆ ನಡೆಸಲು ಪ್ರತಿಯೊಬ್ಬರೂ ಸಹಕರಿಸಬೇಕು. ಚುನಾವಣಾ ಆಯೋಗ ನೀಡುವ ನಿರ್ದೇಶನಗಳು ಹಾಗೂ ನಿಯಮಗಳನ್ನು ಪಾಲಿಸಬೇಕು ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ., ಅಪರ ಜಿಲ್ಲಾಧಿಕಾರಿ ಮಮತಾ ದೇವಿ ಜಿ.ಎಸ್., ಜಿಲ್ಲಾ ವಾರ್ತಾಧಿಕಾರಿ ಮಂಜುನಾಥ್ ಬಿ., ಕೇಬಲ್ ನೆಟ್‌ವರ್ಕ್ ಮತ್ತು ಪ್ರಿಂಟಿಂಗ್ ಪ್ರೆಸ್ ಮಾಲೀಕರು ಮತ್ತಿತರರು ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.