ಆಕ್ರೋಶ ಹೊರ ಹಾಕಿದ ಸಚಿವ ಸುಧಾಕರ್, ಶಾಸಕ ಎಂ.ಚಂದ್ರಪ್ಪ। ಚಿತ್ರದುರ್ಗದ ಪ್ರಮುಖ ರಸ್ತೆ ಅಗಲೀಕರಣಕ್ಕೆ ಅಸ್ತುಕನ್ನಡಪ್ರಭ ವಾರ್ತೆ ಚಿತ್ರದುರ್ಗಚಿತ್ರದುರ್ಗದಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಡಿವೈಡರ್ ಗಳು ಬುಧವಾರ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಜನಪ್ರತಿನಿಧಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಶಾಸಕ ಎಂ.ಚಂದ್ರಪ್ಪ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಆಕ್ರೋಶ ವ್ಯಕ್ತಪಡಿಸಿ ತಕ್ಷಣ ರಸ್ತೆ ಡಿವೈಡರ್ ತೆರವುಗೊಳಿಸುವಂತೆ ತಾಕೀತು ಮಾಡಿದರು.ಇಲ್ಲಿನ ಜಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ, ಹೊರಗಿನವರು ಚಿತ್ರದುರ್ಗಕ್ಕೆ ಬಂದು ಹೋಗಲು ಅಸಹ್ಯ ಪಡುತ್ತಿದ್ದಾರೆ. ಪ್ರಮುಖ ರಸ್ತೆಯಲ್ಲಿ ಒಂದು ವಾಹನ ಹೋದರೆ ಪಕ್ಕ ಮತ್ತೊಂದು ಚಲಿಸಲು ಸಾಧ್ಯವಿಲ್ಲ. ನಗರದ ಮೂಲಕ ಹೊಳಲ್ಕೆರೆಗೆ ಹೋಗಲು ಸಾಹಸ ಪಡುವಂತಾಗಿದೆ. ಡಿವೈಡರ್ ನಿರ್ಮಿಸುವಾಗ ಒಂದಿಷ್ಟು ವಿವೇಚನೆ ಬೇಡವೇ. ವಿಶಾಲವಾದ ರಸ್ತೆಗಳು ಹೇಗಿರಬೇಕೆಂಬುದಕ್ಕೆ ಹೊಳಲ್ಕೆರೆಗೆ ಹೋಗಿ ನೋಡಿಕೊಂಡು ಬನ್ನಿ ಎಂದು ಗುಡುಗಿದರು.ಚಳ್ಳಕೆರೆ ರಸ್ತೆಯಿಂದ ಪ್ರವಾಸಿ ಮಂದಿರದವರೆಗೆ ವಿಶಾಲವಾದ ರಸ್ತೆ ಇದ್ದು ಮುರುಘಾಮಠದವರೆಗೆ ಅಗಲವಾಗಿತ್ತು. ನಂತರ ರಸ್ತೆ ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ಆದ್ದರಿಂದ ಯಾವುದೆ ಮುಲಾಜಿಲ್ಲದೆ ಕಟ್ಟಡ ತೆರವುಗೊಳಿಸಿ ರಸ್ತೆ ಅಗಲೀಕರಣ ಮಾಡಿ. ಜಿಲ್ಲಾ ಕೇಂದ್ರದಲ್ಲಿರುವ ರಸ್ತೆಗಳು ಸುಂದರವಾಗಿರಬೇಕು, ಇದು ಮರ್ಯಾದೆಯ ಪ್ರಶ್ನೆ ಎಂದು ಶಾಸಕ ಎಂ.ಚಂದ್ರಪ್ಪ ಹೇಳಿದರು.
ಈ ಮಾತಿಗೆ ಧ್ವನಿಗೂಡಿಸಿದ ಶಾಸಕ ವೀರೇಂದ್ರ ಪಪ್ಪಿ, ಸುಗಮ ಸಂಚಾರಕ್ಕೆ ಅಡ್ಡಿಯಾಗಿರುವ ಡಿವೈಡರ್ ತೆರವುಗೊಳಿಸಲು ಸೂಚಿಸಲಾಗಿತ್ತು. ಹಲವು ಕಡೆ ರಸ್ತೆಗಳೇ ಇಲ್ಲದಂತೆ ಡಿವೈಡರ್‌ಗಳು ಆವರಿಸಿಕೊಂಡಿದ್ದು, ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದರು.ಪೌರಾಯುಕ್ತ ರೇಣುಕಾ ಪ್ರತಿಕ್ರಿಯಿಸಿ ಗಾಂಧಿ ವೃತ್ತದಲ್ಲಿ ಕೆಲವರು ನ್ಯಾಯಾಲಯದ ಮೆಟ್ಟಿಲು ಏರಿ ತಡೆಯಾಜ್ಞೆ ತಂದಿದ್ದಾರೆ. ಹಾಗಾಗಿ ರಸ್ತೆ ಅಗಲೀಕರಣಕ್ಕೆ ತೊಂದರೆಯಾಗಿದೆ ಎಂದು ತಿಳಿಸಿದರು.
ಹಿಂದೆ ಬಿ.ಬಸವರಾಜ್ ಎಂಬುವರು ಜಿಲ್ಲಾಧಿಕಾರಿಯಾಗಿದ್ದಾಗ 1995 ರಲ್ಲಿ ಕೆಲವು ವ್ಯಾಪಾರಿಗಳು ಕೋರ್ಟ್ ಗೆ ಹೋಗಿ ತಡೆಯಾಜ್ಞೆ ತಂದಿದ್ದರು. 29 ವರ್ಷಗಳಾದರೂ ತಡೆಯಾಜ್ಞೆ ತೆರವು ಗೊಳಿಸಲು ಯಾರೂ ಪ್ರಯತ್ನಿಸಿಲ್ಲ ಎಂದರು.ಜಿಲ್ಲಾ ಸಚಿವ ಡಿ.ಸುಧಾಕರ್ ಮಾತನಾಡಿ, ಕೋರ್ಟ್ ನಲ್ಲಿರುವ ರಸ್ತೆ ಪ್ರಕರಣ ಕುರಿತು ಮಾಹಿತಿ ಪಡೆದು, ತಡೆಯಾಜ್ಞೆ ತೆರವುಗೊಳಿಸಲು ತುರ್ತು ಕ್ರಮದ ಕಡೆ ಗಮನ ಹರಿಸಬೇಕು ಹಾಗೂ ರಸ್ತೆ ಅಗಲೀಕರಣಕ್ಕೆ ಒತ್ತು ನೀಡಬೇಕು ಇದರಲ್ಲಿ ಉದಾಸೀನ ತೋರುವಂತಿಲ್ಲ ಎಂದರು.
ಮಧ್ಯ ಪ್ರವೇಶಿಸಿ ಮಾತನಾಡಿದ ಜಿಲ್ಲಾಧಿಕಾರಿ ಟಿ.ವೆಂಕಟೇಶ್, ಜು.3 ರಂದು ರಸ್ತೆ ಸುರಕ್ಷತಾ ಸಮಿತಿ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ವಿವರವಾಗಿ ಚರ್ಚಿಸಿ ಡಿವೈಡರ್ ತೆರವಿಗೆ ಕ್ರಮ ಕೈಗೊಳ್ಳಲಾಗುವುದು ಹಾಗೂ ರಸ್ತೆ ಅಗಲೀಕರಣದ ಬಗ್ಗೆಯೂ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.ಸಭೆಯಲ್ಲಿ ಶಾಸಕರಾದ ಬಿ.ಜಿ.ಗೋವಿಂದಪ್ಪ, ಟಿ.ರಘುಮೂರ್ತಿ, ವಿಪ ಸದಸ್ಯರಾದ ಶ್ರೀನಿವಾಸ್, ನವೀನ್, ಪ್ರಾದೇಶಿಕ ಆಯುಕ್ತ ಅಮ್ಲಾನ್ ಆದಿತ್ಯ ಬಿಸ್ವಾಸ್ ಸೇರಿ ಹಲವರು ಸಭೆಯಲ್ಲಿ ಭಾಗವಹಿಸಿದ್ದರು.