ಭಟ್ಕಳ: ಪಟ್ಟಣದ ಮಾರಿಗುಡಿಯಲ್ಲಿ ಬುಧವಾರ ಬೆಳಗ್ಗೆ ಮಾರಿಯಮ್ಮನ ಉತ್ಸವ ಮೂರ್ತಿ ವಿರಾಜಮಾನವಾಗುವುದರ ಮೂಲಕ ಎರಡು ದಿನಗಳ ಸುಪ್ರಸಿದ್ಧ ಮಾರಿ ಜಾತ್ರೆ ಆರಂಭಗೊಂಡಿದ್ದು, ಮೊದಲ ದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿ ಹರಕೆ ಒಪ್ಪಿಸಿದರು.
ಬುಧವಾರ ಬೆಳಗ್ಗೆ 6 ಗಂಟೆಗೆ ಮಣ್ಕುಳಿಯ ಮಾರುತಿ ಆಚಾರ್ಯ ಅವರ ಮನೆಯಲ್ಲಿ ಅದ್ಧೂರಿ ಪೂಜೆ, ಪುನಸ್ಕಾರ ನಡೆದ ಬಳಿಕ ಭಾರೀ ಮಳೆಯ ಮಧ್ಯೆಯೂ ಮೆರವಣಿಗೆಯ ಮೂಲಕ ಮಾರಿ ಉತ್ಸವ ಮೂರ್ತಿಯನ್ನು ತಂದು ಮಾರಿಗುಡಿಯಲ್ಲಿ ಹಿಂದಿನ ಸಂಪ್ರದಾಯ ಮತ್ತು ಧಾರ್ಮಿಕ ವಿಧಿ ವಿಧಾನಗಳಂತೆ ಪ್ರತಿಷ್ಠಾಪಿಸಲಾಯಿತು.ಮಾರಿಮೂರ್ತಿಯನ್ನು ಮೆರವಣಿಗೆಯಲ್ಲಿ ಗದ್ದುಗೆಗೆ ತರುವ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಪರಮೇಶ್ವರ ನಾಯ್ಕ, ಸಮಿತಿಯ ಸದಸ್ಯರಾದ ಶಂಕರ ಶೆಟ್ಟಿ, ಶ್ರೀಧರ ನಾಯ್ಕ ಆಸರಕೇರಿ, ನಾರಾಯಣ ಖಾರ್ವಿ, ಶ್ರೀಪಾದ ಕಂಚುಗಾರ. ಸುರೇಂದ್ರ ಭಟ್ಕಳ, ವಾಮನ ಶಿರಸಾಟ, ಸುರೇಶ ಆಚಾರ್ಯ ಸೇರಿದಂತೆ ಹಲವು ಮುಖಂಡರು ಭಕ್ತರಿದ್ದರು.
ಮಾರಿಗುಡಿಯಲ್ಲಿ ಭಕ್ತರ ನೂಕುನುಗ್ಗಲು ಉಂಟಾಗದಂತೆ ತಡೆಯಲು ಮತ್ತು ಸುಸೂತ್ರ ಪೂಜೆ, ಹರಕೆ ಸಲ್ಲಿಸಲು ದೇವಸ್ಥಾನದ ಆಡಳಿತ ಸಮಿತಿಯಿಂದ ಉತ್ತಮ ವ್ಯವಸ್ಥೆ ಕಲ್ಪಿಸಲಾಗಿತ್ತು. ಮಾರಿಯಮ್ಮನಿಗೆ ಭಕ್ತರು ಭಕ್ತಿಪೂರ್ವಕವಾಗಿ ಪೂಜೆ ಸಲ್ಲಿಸಿ ಹೂವು, ಹಣ್ಣು, ಬೆಳ್ಳಿ ಕಣ್ಣು, ಹೂವಿನ ಟೋಪಿ ಮುಂತಾದ ಸೇವೆ ಒಪ್ಪಿಸಿದರು.ಮಾರಿಹಬ್ಬದ ಮೊದಲ ದಿನ ಗ್ರಾಮಾಂತರ ಭಾಗದವರು ತಮ್ಮ ಮನೆಗಳಲ್ಲಿ ಹಬ್ಬ ಆಚರಿಸಿದರೆ, ಎರಡನೇ ದಿನವಾದ ಗುರುವಾರ ಪಟ್ಟಣಿಗರು ಹಬ್ಬ ಆಚರಿಸುತ್ತಾರೆ. ಮಾರಿಯಮ್ಮನಿಗೆ ಪೂಜೆ, ಹರಕೆ ಒಪ್ಪಿಸುವುದರಿಂದ ಕಷ್ಟಕಾರ್ಪಣ್ಯಗಳು ದೂರವಾಗಲಿದೆ ಎನ್ನುವ ಬಲವಾದ ನಂಬಿಕೆ ಭಕ್ತರು ಹೊಂದಿದ್ದು, ಜಾತ್ರಾ ಮೊದಲ ದಿನವಾದ ಬುಧವಾರ ಬೆಳಗ್ಗೆಯಿಂದ ರಾತ್ರಿಯವರೆಗೂ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಸೇರಿ ಪೂಜೆ, ಹರಕೆ ಸಲ್ಲಿಸಿದರು.
ಜಾತ್ರೆಯ ಎರಡನೇ ದಿನವಾದ ಗುರುವಾರ ಸಂಜೆ ೪.೩೦ರ ಸುಮಾರಿಗೆ ಮಾರಿಮೂರ್ತಿಗೆ ಅಂತಿಮ ಪೂಜೆ ಸಲ್ಲಿಸಿ ಪಟ್ಟಣದಿಂದ ೮ ಕಿಮಿ ದೂರದ ಜಾಲಿಕೋಡಿ ಸಮುದ್ರಕ್ಕೆ ಮಾರಿ ಮೂರ್ತಿಯನ್ನು ಬೃಹತ್ ಮೆರವಣಿಗೆಯಲ್ಲಿ ಹೊತ್ತೊಯ್ದು ವಿಜಸರ್ಜಿಸುತ್ತಾರೆ. ವಿಸರ್ಜನಾ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಮಾರಿಜಾತ್ರೆಯ ಹಿನ್ನೆಲೆಯಲ್ಲಿ ಮಾರಿಕಟ್ಟೆ ಪ್ರದೇಶದ ಮತ್ತು ಪಟ್ಟಣದಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಎಸ್ಪಿ ಎಂ. ನಾರಾಯಣ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಭಟ್ಕಳದಲ್ಲಿ ಮೊಕ್ಕಾಂ ಹೂಡಿದ್ದಾರೆ.