ಕನ್ನಡಪ್ರಭ ವಾರ್ತೆ ಮೈಸೂರು
ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಅವರ ಗೆಲುವು ಖಚಿತವಾಗಿದ್ದು, ಶಿಕ್ಷಕರು ಹೆಚ್ಚು ಮತಗಳ ಅಂತರದಿಂದ ಆಯ್ಕೆ ಮಾಡಬೇಕು ಎಂದು ಎಂಡಿಎ ಅಧ್ಯಕ್ಷ ಕೆ.ಮರೀಗೌಡ ಮನವಿ ಮಾಡಿದರು.ಮೈಸೂರಿನ ವಿಶ್ವಮಾನವ ಶಾಲೆ, ಸುಪ್ರಿಂ ಕಾನ್ವೆಂಟ್, ಕೌಟಿಲ್ಯ ವಿದ್ಯಾಶಾಲೆ, ಇಂದಿರಾ ಸ್ಕೂಲ್, ದಿ ಆಕ್ಮಿ ಸ್ಕೂಲ್, ಪ್ರಗತಿ ಪ್ರೌಢಾಶಾಲೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮರಿತಿಬ್ಬೇಗೌಡ ಪರವಾಗಿ ಮತಯಾಚಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಒತ್ತನ್ನು ನೀಡುತ್ತಿದ್ದು, ಮೈಸೂರಿನಲ್ಲಿ ಮಹಾರಾಣಿ ಕಾಲೇಜು ಹಾಸ್ಟೆಲ್ ಗಳನ್ನು ನಿರ್ಮಾಣ ಮಾಡಿದೆ ಹೆಣ್ಣು ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಎಂದರು.
6 ರಿಂದ 14 ವರ್ಷದ ಮಕ್ಕಳಿಗೆ ಕಡ್ಡಾಯ ಶಿಕ್ಷಣ ಮಾಡಿದೆ. ವಿದೇಶದಲ್ಲಿ ಓದುವ ಮಕ್ಕಳಿಗೆ ಪ್ರೋತ್ಸಾಹ ಧನಸಹಾಯ, ರಾಜ್ಯಾದ್ಯಂತ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಗಳ ನಿರ್ಮಾಣ ಮಾಡಿದೆ. ಮರಿತಿಬ್ಬೇಗೌಡರು ಕಳೆದ 24 ವರ್ಷಗಳಿಂದ ವಿಧಾನಪರಿಷತ್ ಸದಸ್ಯರಾಗಿ ದಕ್ಷಿಣ ಶಿಕ್ಷಕರ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. ಶಿಕ್ಷಕ ಸಮುದಾಯದ ಪ್ರತಿನಿಧಿಯಾಗಿ ಶಿಕ್ಷಣ ಕ್ಷೇತ್ರದ ಘನತೆ ಮತ್ತು ಶಿಕ್ಷಕರ ಆತ್ಮಗೌರವಕ್ಕೆ ಧಕ್ಕೆಯಾಗದಂತೆ ಕೆಲಸ ಮಾಡಿದ್ದಾರೆ. ಶಿಕ್ಷಕರ ಸಮಸ್ಯೆಗಳ ಬಗ್ಗೆ ಸದನದ ಒಳಗೆ ಮತ್ತು ಸದನದ ಹೊರಗೆ ಹೋರಾಟ ಮಾಡಿ, ನ್ಯಾಯ ದೊರಕಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದರು.ವಿಧಾನ ಪರಿಷತ್ತಿನ ಉಪಸಭಾಪತಿಯಾಗಿ ನಿಸ್ವಾರ್ಥ, ನಿಷ್ಪಕ್ಷಪಾತವಾಗಿ ಪ್ರಾಮಾಣಿಕತೆಯಿಂದ ಕೆಲಸ ಮಾಡಿದ್ದಾರೆ. ಆದ್ದರಿಂದ ಮೊದಲ ಪ್ರಾಶಸ್ತ್ಯದ ಮತವನ್ನು ಮರಿತಿಬ್ಬೇಗೌಡ ಅವರಿಗೆ ನೀಡುವ ಮೂಲಕ ಆಯ್ಕೆ ಮಾಡಬೇಕು ಎಂದು ಅವರು ಕೋರಿದರು.
ಮಾಜಿ ಮೇಯರ್ ಗಳಾದ ಟಿ.ವಿ. ಚಿಕ್ಕಣ್ಣ, ಪುಷ್ಪಲತಾ ಚಿಕ್ಕಣ್ಣ, ಮೋದಾಮಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜೆ. ಸತೀಶ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಹರೀಶ್ ಮೊಗಣ್ಣ, ಹರೀಶ್, ಕೃಷ್ಣಕುಮಾರ್ ಸಾಗರ್, ಚಂದ್ರು, ಬಿ. ರವಿ, ಪ್ರಕಾಶ್, ಪಿ. ನಾಗರಾಜ್, ಎಸ್. ಮಹಾದೇವ, ಶಿವಕುಮಾರ್, ರಘು ಇದ್ದರು.