ಸಿ.ಕೆ. ನಾಗರಾಜ
ಮರಿಯಮ್ಮನಹಳ್ಳಿ ಪಟ್ಟಣದ ಪದವಿಪೂರ್ವ ಕಾಲೇಜಿಗೆ ವಿಜ್ಞಾನ ವಿಭಾಗ ಮಂಜೂರು ಮಾಡಬೇಕು ಎಂಬ ಬೇಡಿಕೆ ಕಳೆದ 25 ವರ್ಷಗಳಿಂದಲೂ ಈಡೇರಿಲ್ಲ. ಮರಿಯಮ್ಮನಹಳ್ಳಿಯಲ್ಲಿ ವಿಜ್ಞಾನ ವಿಭಾಗವಿಲ್ಲದ ಕಾರಣ ಪಿಯುಸಿಯಲ್ಲಿ ವಿಜ್ಞಾನ ಶಿಕ್ಷಣ ಪಡೆಯಲು ಹೊಸಪೇಟೆ, ಹಗರಿಬೊಮ್ಮನಹಳ್ಳಿ ಅಥವಾ ಕೂಡ್ಲಿಗಿಗೆ ತೆರಳಬೇಕಿದೆ. ಹೀಗೆ ದೂರದ ಊರುಗಳಿಗೆ ತೆರಳಲು ಸಾಧ್ಯವಾಗದ ಅನೇಕ ಬಡವಿದ್ಯಾರ್ಥಿಗಳು ಮತ್ತು ಬಹುತೇಕ ಹೆಣ್ಣು ಮಕ್ಕಳು ವಿಜ್ಞಾನ ಶಿಕ್ಷಣದಿಂದ ವಂಚಿತರಾಗಿ ಕಲಾ ವಿಭಾಗದಲ್ಲಿ ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವಂತಹ ಅನಿವಾರ್ಯತೆ ಉಂಟಾಗಿದೆ.
ಹೋಬಳಿ ಕೇಂದ್ರವೂ ಆಗಿರುವ ಮರಿಯಮ್ಮನಹಳ್ಳಿ ಪಟ್ಟಣಕ್ಕೆ ಸುಮಾರು 33 ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಪಟ್ಟಣದಲ್ಲಿಯೇ ಒಟ್ಟು 8 ಪ್ರೌಢಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಪಕ್ಕದ ಗ್ರಾಮಗಳಾದ ಡಣಾಪುರ, ಸ್ಮಯೋರ್, ವ್ಯಾಸನಕೆರೆ, ಚಿಲಕನಹಟ್ಟಿ, ತೆಲುಗುಬಾಳು, ತಿಮ್ಮಲಾಪುರ, ಪೋತಲಕಟ್ಟೆ ಗ್ರಾಮಗಳಲ್ಲಿಯೂ ಪ್ರೌಢಶಾಲೆಗಳಿವೆ.ಮರಿಯಮ್ಮನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಪ್ರೌಢಶಾಲೆಗಳಿಂದ ಪ್ರತಿವರ್ಷ ಸುಮಾರು ಸಾವಿರ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣಗಾರುತ್ತಾರೆ. ಮರಿಯಮ್ಮನಹಳ್ಳಿಯಲ್ಲಿ ಉತ್ತಮ ಗುಣಮಟ್ಟದ ಪದವಿಪೂರ್ವ ಕಾಲೇಜುಗಳೂ ಇವೆ. ಈ ಕಾಲೇಜುಗಳಲ್ಲಿ ವಿಜ್ಞಾನ ವಿಭಾಗ ಇದ್ದರೆ ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗುತ್ತದೆ.
ಗ್ರಾಮೀಣ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಮರಿಯಮ್ಮನಹಳ್ಳಿ ಕಾಲೇಜಿಗೆ ವಿಜ್ಞಾನ ವಿಭಾಗ ಮಂಜೂರು ಮಾಡುವಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಮತ್ತು ಸರ್ಕಾರಕ್ಕೆ ನೂರಾರು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಸ್ಥಳೀಯ ಶಾಸಕ ಕೆ. ನೇಮರಾಜ್ ನಾಯ್ಕಗೆ ಮರಿಯಮ್ಮನಹಳ್ಳಿ ಸ್ವಂತ ಊರಾಗಿದ್ದು, ಇಲ್ಲಿನ ನಿವಾಸಿಗಳಾಗಿದ್ದರೂ ಇದುವರೆಗೂ ಶಾಸಕರ ತವರೂರಲ್ಲಿ ಇನ್ನೂ ಪಿಯುಸಿ ವಿಜ್ಞಾನ ವಿಭಾಗ ಇಲ್ಲ ಎನ್ನುವುದು ದುರಂತದ ಸಂಗತಿಯಾಗಿದೆ. ತನ್ನ ಹುಟ್ಟೂರಿನಲ್ಲಿ ಅನೇಕ ವಿದ್ಯಾರ್ಥಿಗಳು ವಿಜ್ಞಾನ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ ಎಂಬುದನ್ನು ಅರಿತು ಈಗಲಾದರೂ ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ನಡೆಸಿ ತಕ್ಷಣವೇ ಮರಿಯಮ್ಮನಹಳ್ಳಿಗೆ ಪಿಯುಸಿ ವಿಜ್ಞಾನ ವಿಭಾಗವನ್ನು ಮಂಜೂರು ಮಾಡಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ. ಒತ್ತಾಯ
ಮರಿಯಮ್ಮನಹಳ್ಳಿಯ ಗ್ರಾಮೀಣ ಕಾಲೇಜಿನ ಮೂಲಭೂತ ಸೌಕರ್ಯಗಳನ್ನು ಗಮನಿಸಿ ಮೇಲಧಿಕಾರಿಗಳ ಗಮನಕ್ಕೆ ತಕ್ಷಣವೇ ತರಲಾಗುತ್ತದೆ ಎಂದು ವಿಜಯನಗರ ಜಿಲ್ಲೆ ಪದವಿ ಪೂರ್ವ ಶಿಕ್ಷಣ ಇಲಾಖೆ ನೋಡಲ್ ಅಧಿಕಾರಿ ನಾಗರಾಜ ಹವಾಲ್ದಾರ್ ತಿಳಿಸಿದ್ದಾರೆ.