ಹೆದ್ದಾರಿ ಪಕ್ಕದಲ್ಲಿ ಗೋಕರ್ಣವಾರದ ಸಂತೆ, ಜೀವಕ್ಕೆ ಕುತ್ತು

KannadaprabhaNewsNetwork | Published : Dec 23, 2023 1:47 AM

ಸಾರಾಂಶ

ವಾಹನಗಳ ಭರಾಟೆಯಲ್ಲಿ ನಡೆಯುವ ಸಂತೆಯಲ್ಲಿ ಅವಘಡ ನಡೆದ ನಂತರವೇ ಎಚ್ಚೆತ್ತುಕೊಳ್ಳುತ್ತಾರೆಯೇ ಎಂದು ಜನರು ಆಡಿಕೊಳ್ಳುತ್ತಿದ್ದು ಪ್ರಾಣ ಹಾನಿಯಾಗುವ ಮೊದಲು ಸುರಕ್ಷಿತ ಸ್ಥಳಕ್ಕೆ ಸಂತೆಯನ್ನು ವರ್ಗಾಯಿಸಿ ಎಂದು ಆಗ್ರಹಿಸುತ್ತಿದ್ದಾರೆ.

ಗೋಕರ್ಣ:

ವಾರದ ಸಂತೆಯನ್ನು ಈ ವಾರ ಮೊದಲಿನಂತೆ ಮೇಲಿನಕೇರಿಯ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಡೆಸಿದ್ದು ವಾಹನಗಳ ದಟ್ಟಣೆ ನಡುವೆ ನಡೆಯಿತು.ರಸ್ತೆಯ ಅಂಚಿನಲ್ಲಿ ಅಪಾಯಕಾರಿ ಸ್ಥಿತಿಯಲ್ಲಿ ನಡೆಯುವುದನ್ನು ತಪ್ಪಿಸಿ ಎಪಿಎಂಸಿ ಜಾಗದಲ್ಲಿ ನಿರ್ಮಿಸಿದ ಮಾರುಕಟ್ಟೆ ಪ್ರಾಂಗಣಕ್ಕೆ ಸ್ಥಳಾಂತರಿಸಬೇಕು ಎಂಬ ಆಗ್ರಹ ಹಲವು ದಿನಗಳಿಂದ ಕೇಳಿ ಬಂದಿತ್ತು . ಅದರಂತೆ ಹಿಂದಿನ ವಾರ ರಾಜ್ಯಪಾಲರು ಆಗಮಿಸುವ ಹಿನ್ನೆಲೆಯಲ್ಲಿ ಪ್ರಾಯೋಗಿಕವಾಗಿ ಭದ್ರಕಾಳಿ ಕಾಲೇಜಿನ ಕ್ರೀಡಾಂಗಣದಲ್ಲಿ ಸಂತೆ ಮಾಡಲಾಗಿತ್ತು. ಈ ವಾರವಾದರೂ ಮಾರುಕಟ್ಟೆ ಪ್ರಾಂಗಣದಲ್ಲಿ ಸಂತೆ ನಡೆಯಬಹುದು ಎಂಬ ಜನರ ಆಶಯವಾಗಿತ್ತು .ಆದರೆ ಅದು ಹುಸಿಯಾಗಿದ್ದು ವಾಹನಗಳ ಆರ್ಭಟದ ನಡುವೆ ಮುಂದುವರಿದಿದೆ. ಭದ್ರಕಾಳಿ ಕಾಲೇಜಿನ ಕ್ರೀಡಾಂಗಣದಲ್ಲಿ ನಡೆಸುವ ಬದಲು ಮಾರುಕಟ್ಟೆಯ ಪ್ರಾಂಗಣದಲ್ಲಿಯೆ ಸಂತೆ ನಡೆಸಿದ್ದಲ್ಲಿ ಸಮಸ್ಯೆ ಅರಿಯಲು ಸಹಾಯವಾಗುತ್ತಿತ್ತು ಮತ್ತು ಶಾಶ್ವತವಾಗಿ ಸ್ಥಳಾಂತರಿಸಲು ಅನುಕೂಲವಾಗುತ್ತಿತ್ತು ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಹಲವು ವರ್ಷಗಳ ಹಿಂದೆ ಖಾಸಗಿ ಬಸ್ ರಥಬೀದಿಯ ಮೂಲಕ ತೆರಳುತ್ತಿತ್ತು. ಇಲ್ಲಿ ಪಾದಾಚಾರಿಗಳಿಗೆ ತೊಂದರೆಯಾಗುತ್ತದೆ ಬಸ್ ಸಂಚಾರ ನಿಷೇಧಿಸಿ ಎಂದು ಜನರು ಆಗ್ರಹಿಸಿದ್ದರು. ಆದರೆ ಯಾವುದೇ ಕ್ರಮ ತೆಗೆದುಕೊಳ್ಳದೆ ನಿರ್ಲಕ್ಷಿಸಲಾಗಿತ್ತು. ಕೊನೆಯಲ್ಲಿ ಓರ್ವ ಪಾದಾಚಾರಿ ಬಸ್ ಬಡಿದು ಸಾವನ್ನಪ್ಪಿದ್ದ. ನಂತರ ಎಚ್ಚೆತ್ತುಕೊಂಡ ಸಂಬಂಧಿಸಿದ ಇಲಾಖೆ ವಾಹನ ಸಂಚಾರ ನಿಷೇಧಿಸಿತ್ತು .ಅದರಂತೆ ವಾಹನಗಳ ಭರಾಟೆಯಲ್ಲಿ ನಡೆಯುವ ಸಂತೆಯಲ್ಲಿ ಅವಘಡ ನಡೆದ ನಂತರವೇ ಎಚ್ಚೆತ್ತುಕೊಳ್ಳುತ್ತಾರೆಯೇ ಎಂದು ಜನರು ಆಡಿಕೊಳ್ಳುತ್ತಿದ್ದು ಪ್ರಾಣ ಹಾನಿಯಾಗುವ ಮೊದಲು ಸುರಕ್ಷಿತ ಸ್ಥಳಕ್ಕೆ ಸಂತೆಯನ್ನು ವರ್ಗಾಯಿಸಿ ಎಂದು ಆಗ್ರಹಿಸುತ್ತಿದ್ದಾರೆ.ಈ ಹಿಂದಿನ ಜಿಲ್ಲಾಧಿಕಾರಿ ಕೆಡಿಪಿ ಸಭೆಯಲ್ಲಿ ಸಂತೆ ವಿಷಯ ಪ್ರಸ್ತಾಪಿಸಿ ಸ್ಥಳಾಂತರಿಸಲು ಕ್ರಮಕೈಗೊಳ್ಳಲು ನಿರ್ಣಯಿಸಿದ್ದರು. ಆದರೆ ಅವರು ವರ್ಗವಾದ ನಂತರ ಇದುವರೆಗೂ ಯಾವುದೇ ಪ್ರಕ್ರಿಯೆ ಮುಂದುವರಿಯದೆ ನನೆಗುದಿಗೆ ಬಿದ್ದಿದ್ದು ಇನ್ನಾದರೂ ಎಚ್ಚೆತ್ತುಕೊಂಡು ಕ್ರಮ ತೆಗೆದುಕೊಳ್ಳಬೇಕಿದೆ.

Share this article