ಉಡುಪಿ: ಇಲ್ಲಿನ ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಪೂರ್ವಭಾವಿ ಗ್ರಾಮಸ್ಥರ ಸಭೆಯು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ದಿನೇಶ್ ಶೆಟ್ಟಿ ಕಂಬಳಮನೆ ಅಧ್ಯಕ್ಷತೆಯಲ್ಲಿ ದೇವಸ್ಥಾನದ ಉಮಾಮಹೇಶ್ವರ ಸಭಾಭವನದಲ್ಲಿ ಭಾನುವಾರ ನಡೆಯಿತು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿ, ಮಾರ್ಪಳ್ಳಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಮುಜರಾಯಿ ಇಲಾಖೆಯಿಂದ 25 ಲಕ್ಷ ರು. ಅನುದಾನ ಮಂಜೂರು ಮಾಡಲು ಈಗಾಗಲೇ ಮುಜರಾಯಿ ಸಚಿವರಿಗೆ ಮನವಿ ಮಾಡಿದ್ದು, ಪತ್ರದಂತೆ ಅನುದಾನ ಒದಗಿಸುವ ಬಗ್ಗೆ ಭರವಸೆ ವ್ಯಕ್ತಪಡಿಸಿದರು. ಅದೇ ರೀತಿ ದೇವಳಕ್ಕೆ ಸಂಪರ್ಕಿಸುವ ಮುಖ್ಯ ರಸ್ತೆಗೆ ಕಾಂಕ್ರೀಟ್ ರಸ್ತೆ ನಿರ್ಮಿಸಲು ಗ್ರಾಮ ಪಂಚಾಯಿತಿ ಮೂಲಕ ಯೋಜನೆ ಸಿದ್ಧಪಡಿಸಲು ನಿರ್ದೆಶಿಸಿಲಾಗುವುದು ಎಂದರು.ಹಾಗೆಯೇ ದೇವಸ್ಥಾನದ ದ್ವಾರದ ಬಾಗಿಲು, ಮೇಲ್ಛಾವಣಿ ಸಹಿತ ಇತರೆ ಕಾಮಗಾರಿಗಳಿಗೆ ಬೇಕಾಗುವ ಮರ ಮಟ್ಟುಗಳನ್ನು ಅರಣ್ಯ ಇಲಾಖೆಯ ಮೂಲಕ ಮನವಿ ಸಲ್ಲಿಸಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.ಜೀರ್ಣೋದ್ಧಾರ ಕಾರ್ಯಕ್ರಮವನ್ನು ಗ್ರಾಮಸ್ಥರು ಒಟ್ಟಾಗಿ ಮಾಡಬೇಕು. ಊರಿನ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಕ್ರಮ ಸಂದರ್ಭದಲ್ಲಿ ಆ ಊರಿನ ಶಕ್ತಿ ಏನೆಂಬುವುದು ತಿಳಿಯುತ್ತದೆ. ಗ್ರಾಮಸ್ಥರು ಒಗ್ಗೂಡಿದರೆ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ನಡೆಸುವುದು ಕಷ್ಟದ ಕೆಲಸವಲ್ಲ ಎಂದು ಹೇಳಿದರು.ಜೀರ್ಣೋದ್ಧಾರದ ಪ್ರಾರಂಭಿಕ ಹಂತವಾಗಿ ದೇವಳದ ಸುತ್ತುಪೌಳಿ ಮತ್ತು ಒಳಾಂಗಣಕ್ಕೆ 15 ಲಕ್ಷ ರು. ವೆಚ್ಚದಲ್ಲಿ ಹಾಸುಕಲ್ಲು ಹಾಕುವ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.ಮಾಜಿ ಆಡಳಿತ ಮೂಕ್ತೇಸರ ಚಿಟ್ಪಾಡಿ ಬೀಡು ಡಾ. ಸಿ.ಜಿ. ಬಲ್ಲಾಳ್ ಮತ್ತು ತ್ರಿಶಾ ಸಮೂಹ ಸಂಸ್ಥೆಗಳ ಮುಖ್ಯಸ್ಥ ಗೋಪಾಲಕೃಷ್ಣ ರಾವ್ ಮಾತನಾಡಿದರು. ಗ್ರಾಮದ ಹಿರಿಯರಾದ ಡಾ. ಪಿ.ಜಿ.ರಾವ್, ಮಧುಸೂದನ್ ಭಟ್, ವ್ಯವಸ್ಥಾಪನಾ ಸಮಿತಿ ಕಾರ್ಯದರ್ಶಿ ಲಕ್ಷ್ಮೀ ನಾರಾಯಣ ರಾವ್ ವರದಿ ಮತ್ತು ಲೆಕ್ಕಪತ್ರ ಮಂಡಿಸಿದರು, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶೇಖರ್ ಸುವರ್ಣ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿಯ ಪಾಡುರಂಗ ನಾಯಕ್, ಶಂಕರ್ ಆಚಾರ್ಯ, ಚಂದ್ರಾವತಿ, ದೇವಳದ ಅನುವಂಶಿಕ ಅರ್ಚಕರು ಉಪಸ್ಥಿತರಿದ್ದರು. ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಉಮೇಶ್ ಮಾರ್ಪಳ್ಳಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.