ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಎರಡು ಜೋಡಿ ಪ್ರೇತಾತ್ಮಗಳ ಮದುವೆ ಇಲ್ಲಿ ನಡೆದಿದೆ. ಬೆಳ್ತಂಗಡಿ ತಾಲೂಕಿನ ಶಾರದಾ ಹಾಗೂ ಬಂಟ್ವಾಳ ತಾಲೂಕಿನ ಕಲ್ಲಡ್ಕದ ಸದಾಶಿವ ಹಾಗೂ ಬಂಟ್ವಾಳ ತಾಲೂಕಿನ ನಯನಾಡಿನ ಯಶೋದಾ ಮತ್ತು ಜಾರುಗುಡ್ಡೆಯ ಯಾದವ ಎಂಬುವರ ಮಧ್ಯೆ ಮದುವೆ ನಡೆದಿದೆ.
ಈ ಎರಡೂ ಜೋಡಿಗಳು ಮದುವೆಯಾಗದೆ ಅಕಾಲಿಕವಾಗಿ ಮೃತಪಟ್ಟವರಾಗಿದ್ದರು. ಅವರ ವಯಸ್ಸು ಪ್ರಾಯಕ್ಕೆ ಬಂದಾಗ ಮದುವೆ ನಡೆಯುತ್ತದೆ. ಇಲ್ಲಿ 35 ವರ್ಷಗಳ ಬಳಿಕ ವಿವಾಹ ಸಂಪನ್ನವಾಗಿದೆ. ಆದಾಗ್ಯೂ ಜೋಡಿಗಳ ನಡುವಿನ ಬರಿ (ಗೋತ್ರ), ಜಾತಿ-ಜಾತಕ ಸರಿ ಹೊಂದಿದರೆ ಮಾತ್ರ ಮದುವೆ ಸಾಧ್ಯ.ಜ್ಯೋತಿಷಿಗಳಲ್ಲಿ ಮಾತುಕತೆ ನಡೆಸಿ, ಪುರೋಹಿತರ ಮಾರ್ಗದರ್ಶನದಲ್ಲಿ ವಧು-ವರನ ಕಡೆಯವರು ಒಮ್ಮತದಿಂದ ಒಪ್ಪಿ ಮದುವೆ ನಡೆಯುತ್ತದೆ. ಬರ್ಕಜೆ ಕ್ಷೇತ್ರದಲ್ಲಿ ನಡೆದ ಮದುವೆಯಲ್ಲಿ ಎರಡು ಜೋಡಿಗಳ ತಂದೆ-ತಾಯಿ ಇದ್ದು ಕುಟುಂಬಸ್ಥರು ಸೇರಿ ಶಾಸ್ತ್ರೋಕ್ತವಾಗಿ ಮದುವೆಯನ್ನು ಸಂಪನ್ನಗೊಳಿಸಲಾಗಿದೆ.
ಈ ರೀತಿ ಮದುವೆ ಮಾಡಿದರೆ ಮೃತರಾದವರಿಗೆ ಸದ್ಗತಿ ಪ್ರಾಪ್ತಿಯಾಗುತ್ತದೆ ಮತ್ತು ಕುಟುಂಬದ ಸಮಸ್ಯೆಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದರ ಹಿಂದೆ ಇದೆ.
ಬರ್ಕಜೆ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಇಂತಹ ಅನೇಕ ಮದುವೆಗಳನ್ನು ನಡೆಸಲಾಗಿದೆ. ಶಾಸ್ತ್ರಕ್ಕೆ ಯಾವುದೇ ಅಪಚಾರವಾಗದಂತೆ ನಡೆಸಲಾಗುತ್ತದೆ. ಮದುವೆ ಮಾಡಿಸಿದ ಕುಟುಂಬಗಳು ಮುಂದಿನ ದಿನಗಳಲ್ಲಿ ಸುಖ-ಶಾಂತಿ-ನೆಮ್ಮದಿಯಿಂದ ಇರುವುದು ಕ್ಷೇತ್ರದ ಮಹಿಮೆಯಾಗಿದೆ ಎಂದು ಕ್ಷೇತ್ರದ ಧರ್ಮದರ್ಶಿ ರಮೇಶ್ ಹೇಳುತ್ತಾರೆ.