ಹಾವೇರಿ: ಜಿಲ್ಲೆಯ ಸವಣೂರು ತಾಲೂಕಿನ ಯಲವಿಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರುತಿಪುರ ಗ್ರಾಮಕ್ಕೆ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರು ಭೇಟಿ ನೀಡಿ ಹಲವು ದಶಕಗಳಿಂದ ಬಗೆಹರಿಯದೆ ಉಳಿದಿರುವ ಹಕ್ಕುಪತ್ರ, ಪಹಣಿ ಹಾಗೂ ಮೂಲಸೌಕರ್ಯ ಸಮಸ್ಯೆಗಳ ಕುರಿತು ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿ, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಮಾರುತಿಪುರ ಗ್ರಾಮದ ಸರ್ವೇ ನಂಬರ್ ೨೧೭ರಲ್ಲಿ ಸುಮಾರು ನೂರು ವರ್ಷಗಳ ಹಿಂದಿನಿಂದಲೇ ಜನವಸತಿ ರೂಪುಗೊಂಡಿದ್ದು, ಪ್ರಸ್ತುತ ಸುಮಾರು ೨೦೪ ಮನೆಗಳು ನಿರ್ಮಾಣವಾಗಿ ನೂರಾರು ಕುಟುಂಬಗಳು ವಾಸಿಸುತ್ತಿವೆ. ಗ್ರಾಮದಲ್ಲಿ ಸರ್ಕಾರಿ ಶಾಲೆ, ಅಂಗನವಾಡಿ ಕೇಂದ್ರ, ದೇವಸ್ಥಾನ ಸೇರಿದಂತೆ ಅಗತ್ಯ ಸಾರ್ವಜನಿಕ ಕಟ್ಟಡಗಳಿದ್ದರೂ, ನಿವಾಸಿಗಳಿಗೆ ಇದುವರೆಗೆ ಹಕ್ಕುಪತ್ರ ದೊರೆತಿಲ್ಲ. ಈ ಕುರಿತು ಗ್ರಾಮಸ್ಥರು ಜಿಲ್ಲಾಧಿಕಾರಿ ಗಮನಕ್ಕೆ ತಂದರು. ಈ ಪ್ರದೇಶವು ಅರಣ್ಯ ಇಲಾಖೆಯ ದಾಖಲೆಯಲ್ಲಿ `ಕಾಯ್ದಿಟ್ಟ ಅರಣ್ಯ'''' ಎಂದು ದಾಖಲಾಗಿರುವುದರಿಂದ ಹಕ್ಕುಪತ್ರ ವಿತರಣೆ ಸಾಧ್ಯವಾಗಿಲ್ಲ ಎಂದು ಅಧಿಕಾರಿಗಳು ವಿವರಿಸಿದರು. ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ, ಜನವಸತಿ ಪ್ರದೇಶವಾಗಿರುವ ಸುಮಾರು ೨೧ ಎಕರೆ ೫ ಗುಂಟೆ ಪ್ರದೇಶವನ್ನು ಅರಣ್ಯ ಇಲಾಖೆಯಿಂದ ಡಿ-ಫಾರೆಸ್ಟ್ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಹೊಸ ಕಂದಾಯ ಗ್ರಾಮವನ್ನಾಗಿ ಘೋಷಿಸುವ ಮೂಲಕ ನಿವಾಸಿಗಳಿಗೆ ಕಾನೂನುಬದ್ಧ ಹಕ್ಕುಪತ್ರಗಳನ್ನು ನೀಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಸರ್ವೇ ನಂಬರ್ ೨೦೮, ೨೧೪, ೨೧೫, ೨೧೮, ೨೧೯, ೨೨೦, ೨೨೧, ೨೨೪ ಹಾಗೂ ೨೩೦ರಲ್ಲಿರುವ ಜಮೀನುಗಳು `ಚೇರ್ಮನ್, ನವಜೀವನ ಕೋ-ಫಾರ್ಮಿಂಗ್ ಸೊಸೈಟಿ, ಯಲುವಿಗಿ'''' ಹೆಸರಿನಲ್ಲಿ ದಾಖಲಾಗಿರುವ ಹಿನ್ನೆಲೆಯಲ್ಲಿ ಆ ಭೂಮಿಯಲ್ಲಿ ಹಲವು ವರ್ಷಗಳಿಂದ ಕೃಷಿ ಮಾಡುತ್ತಿರುವ ಸುಮಾರು ೩೦೫ ರೈತರಿಗೆ ಇದುವರೆಗೆ ಪಹಣಿ ದೊರೆತಿಲ್ಲ. ಪಹಣಿ ಇಲ್ಲದ ಕಾರಣ ರೈತರಿಗೆ ಬೀಜ, ಗೊಬ್ಬರ, ಬೆಳೆ ಸಾಲ ಹಾಗೂ ವಿವಿಧ ಸರ್ಕಾರಿ ಸೌಲಭ್ಯಗಳು ಮತ್ತು ಸಹಾಯಧನ ಪಡೆಯಲು ತೀವ್ರ ತೊಂದರೆಯಾಗುತ್ತಿದೆ ಎಂದು ರೈತರು ಮನವಿ ಸಲ್ಲಿಸಿದರು.ಈ ಕುರಿತು ಜಿಲ್ಲಾಧಿಕಾರಿ, ಕಂದಾಯ ಇಲಾಖೆ ಹಾಗೂ ತಹಸೀಲ್ದಾರರಿಗೆ ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಸರ್ಕಾರದ ಆದೇಶದನ್ವಯ ರೈತರಿಗೆ ಪಹಣಿ ಒದಗಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಗ್ರಾಮದ ಮತ್ತೊಂದು ಬಹುಕಾಲದ ಬೇಡಿಕೆಯಾಗಿದ್ದ ಸ್ಮಶಾನ ಭೂಮಿಯ ಕುರಿತು ಸಹ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿ, ಈಗಾಗಲೇ ೧ ಎಕರೆ ೨೦ ಗುಂಟೆ ಜಾಗವನ್ನು ಸ್ಮಶಾನಕ್ಕಾಗಿ ಮಂಜೂರು ಮಾಡಿ ಕಾಯ್ದಿರಿಸಿರುವುದಾಗಿ ತಿಳಿಸಿದರು. ಪಿಡಿಒ ಹಾಗೂ ಸರ್ವೆ ಇಲಾಖೆಯ ಅಧಿಕಾರಿಗಳಿಗೆ ಸ್ಥಳದ ಅಳತೆ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ ಗ್ರಾಮಸ್ಥರ ಬಳಕೆಗೆ ಅವಕಾಶ ಕಲ್ಪಿಸುವಂತೆ ನಿರ್ದೇಶನ ನೀಡಿದರು.