ಸ್ನೇಹಿತನ ಮನೆಯಲ್ಲೇ ಕಳ್ಳತನ ಮಾಡಿಸಿದ್ದ ಮೇಸ್ತ್ರಿ ಬಂಧನ

KannadaprabhaNewsNetwork |  
Published : May 23, 2026, 03:45 AM IST
ಬಂಧನ | Kannada Prabha

ಸಾರಾಂಶ

ತನ್ನ ಸ್ನೇಹಿತ ಮನೆಗೆ ಕೆಲಸಗಾರರ ಬಿಟ್ಟು ದರೋಡೆ ಮಾಡಿಸಿದ್ದ ನಿರ್ಮಾಣ ಹಂತದ ಕಟ್ಟಡದ ಮೇಸ್ತ್ರಿ ಸೇರಿದಂತೆ ಮೂವರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ತನ್ನ ಸ್ನೇಹಿತ ಮನೆಗೆ ಕೆಲಸಗಾರರ ಬಿಟ್ಟು ದರೋಡೆ ಮಾಡಿಸಿದ್ದ ನಿರ್ಮಾಣ ಹಂತದ ಕಟ್ಟಡದ ಮೇಸ್ತ್ರಿ ಸೇರಿದಂತೆ ಮೂವರನ್ನು ಚಿಕ್ಕಜಾಲ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಿಕ್ಕಜಾಲ ಸಮೀಪದ ನಿವಾಸಿಗಳಾದ ಗುರುಪ್ರಸಾದ್ ,ಅರ್ಬಾಜ್ ಮತ್ತು ಜಿಬ್ರಾನ್ ಬಂಧಿತರಾಗಿದ್ದು, ಆರೋಪಿಗಳಿಂದ 79 ಗ್ರಾಂ ಚಿನ್ನ, 64 ಗ್ರಾಂ ಬೆಳ್ಳಿ, ₹12 ಲಕ್ಷ ನಗದು ಹಾಗೂ ಕಾರು ಸೇರಿದಂತೆ ಒಟ್ಟು 24 ಲಕ್ಷ ರು. ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಇತ್ತೀಚಿಗೆ ಹುಣಸಮಾರನಹಳ್ಳಿಯಲ್ಲಿ ನೆಲೆಸಿರುವ ಸುದರ್ಶನ್ ಅವರ ತಂದೆ ಮನೆಗೆ ನುಗ್ಗಿ ಚಾಕು ತೋರಿಸಿ ಬೆದರಿಕೆ ಹಾಕಿ 15 ಲಕ್ಷ ರು. ಹಣವನ್ನು ಇಬ್ಬರು ದುಷ್ಕರ್ಮಿಗಳು ದೋಚಿದ್ದರು. ಈ ಕೃತ್ಯದ ತನಿಖೆಗಿಳಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಿದಾಗ ಸ್ನೇಹಿತನ ನಿಜ ಬಣ್ಣ ಬಯಲಾಗಿದೆ. ಹಲವು ವರ್ಷಗಳಿಂದ ಸುದರ್ಶನ್ ಹಾಗೂ ಮೇಸ್ತ್ರಿ ಗುರುಪ್ರಸಾದ್ ಗೆಳೆಯರಾಗಿದ್ದು, ತಮ್ಮ ಮನೆ ನಿರ್ಮಾಣದ ಗುತ್ತಿಗೆಯನ್ನು ಗೆಳೆಯನಿಗೆ ಸುದರ್ಶನ್‌ ಕೊಟ್ಟಿದ್ದರು. ಆದರೆ ಮನೆ ನಿರ್ಮಾಣದ ವೇಳೆ ಪದೇ ಪದೇ ಸ್ನೇಹಿತ ಹಾಗೂ ಆತನ ತಂದೆ ಕೃಷ್ಣಾಚಾರ್‌ ಬಂದು ಕಿರಿಕಿರಿ ಮಾಡುತ್ತಿದ್ದರು. ತಾವು ಹೇಳಿದಂತೆ ನಿರ್ಮಾಣವಾಗುತ್ತಿಲ್ಲ ಎಂದೆಲ್ಲ ಅವರು ಗಲಾಟೆ ಮಾಡುತ್ತಿದ್ದರು. ಅಲ್ಲದೆ ಹಣ ನೀಡುವಾಗಲು ಸಹ ಅವರು ತಗಾದೆ ತೆಗೆಯುತ್ತಿದ್ದರು. ಈ ವರ್ತನೆಯಿಂದ ಗುರುಪ್ರಸಾದ್‌ಗೆ ಸಿಟ್ಟು ಬಂದಿತ್ತು. ಈ ಹಣಕಾಸು ವಿವಾದ ಹಿನ್ನಲೆಯಲ್ಲಿ ಕೆರಳಿದ ಗುರುಪ್ರಸಾದ್‌, ತನ್ನ ಕೆಲಸಗಾರರು ಕೃಷ್ಣಚಾರಿ ಮನೆಗೆ ನುಗ್ಗಿಸಿ ದರೋಡೆಗೆ ಸಂಚು ರೂಪಿಸಿದ. ಅಂತೆಯೇ ತನ್ನ ಸಹಚರರಾದ ಅರ್ಬಾಜ್ ಹಾಗೂ ಜಿಬ್ರಾನ್‌ಗೆ ದರೋಡೆ ಕಾರ್ಯರೂಪಕ್ಕಿಳಿಸುವ ಬಗ್ಗೆ ತಿಳಿಸಿ ಸಜ್ಜುಗೊಳಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರೇಮ ವೈಫಲ್ಯ ಬಳಸಿಕೊಂಡು

ದರೋಡೆಗೆ ಸಂಚು ರೂಪಿಸಿದ! ತನ್ನ ಗೆಳೆಯ ಸುದರ್ಶನ ಪ್ರೇಮ ವೈಫಲ್ಯ ಸಂಗತಿ ಗುರುಪ್ರಸಾದ್‌ಗೆ ತಿಳಿದಿತ್ತು. ಈ ಸಂಗತಿಯನ್ನು ಬಳಸಿಕೊಂಡು ಸ್ನೇಹಿತನ ಮನೆಗೆ ಕನ್ನ ಹಾಕಲು ಆತ ಯೋಜಿಸಿದ್ದ. ಅಂತೆಯೇ ಕೃಷ್ಣಾಚಾರ್‌ಗೆ ಅಪರಿಚಿತ ನಂಬರ್‌ನಿಂದ ಕರೆ ಮಾಡಿ ‘ನಿಮ್ಮ ಮಗ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದು, ಈ ಸಂಬಂಧಕ್ಕೆ ದಾಖಲೆಗಳಿವೆ. ಈ ಬಗ್ಗೆ ಮಾತನಾಡಲು ಏ.18 ರಂದು ಮನೆಗೆ ಬರುತ್ತೇನೆ. ಆಗ ನೀವೊಬ್ಬರೇ ಇರಬೇಕು. ಇಲ್ಲವಾದರೆ ಮುಂದೆ ಸಮಸ್ಯೆಯಾಗಲಿದೆ. ನಿಮ್ಮ ಮಗನ ಕೌಟುಂಬಿಕ ಜೀವನಕ್ಕೆ ತೊಂದರೆಯಾಗಲಿದೆ’ ಎಂದಿದ್ದ. ಅಪರಿಚಿತ ಕರೆಯಿಂದ ಆತಂಕಕ್ಕೊಳಗಾಗಿದ್ದ ಕೃಷ್ಣಚಾರ್‌, ಅಂದು ಮನೆಯಲ್ಲಿ ಒಬ್ಬರೇ ಇದ್ದಾಗ ಇಬ್ಬರು ಮುಸುಕುಧಾರಿಗಳು ಮನೆಗೆ ನುಗ್ಗಿದ್ದರು. ಚಾಕು ತೋರಿಸಿ ಬೆದರಿಸಿ ನನ್ನ ತಂಗಿಗೆ ಮೋಸ ಆಗಿದೆ ಎಂದು ಕಿರುಚಾಡುತ್ತಾ ಕಬೋರ್ಟ್‌ನಲ್ಲಿಟ್ಟಿದ್ದ ನಗದು ಹಾಗೂ ಆಭರಣ ದೋಚಿದ್ದರು. ಮರು ದಿನ ಚಿಕ್ಕಜಾಲ ಠಾಣಗೆ ಅವರು ದೂರು ನೀಡಿದರು. ಅಂತೆಯೇ ತನಿಖೆಗಿಳಿದ ಪೊಲೀಸರು, ಮೊಬೈಲ್‌ ಕರೆಗಳು ಹಾಗೂ ಘಟನಾ ಸ್ಥಳದ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಗುರುಪ್ರಸಾದ್ ಮೇಲೆ ಶಂಕೆ ಬಂದಿದೆ. ಕೂಡಲೇ ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಸತ್ಯ ಬಯಲಾಗಿದೆ ಎಂದು ಮೂಲಗಳು ಹೇಳಿವೆ.

₹50 ಸಾವಿರ ಮರಳಿಸಿದ್ರು

ಈ ದರೋಡೆ ವೇಳೆ ನಾನು ಕೂಡಿರುವ ಒಡವೆ ಹಾಗೂ ದುಡ್ಡು ದೋಚಿದರೆ ಜೀವನ ಕಷ್ಟವಾಗುತ್ತದೆ ಎಂದು ಕೃಷ್ಣಚಾರ್ ಗೋಳಾಡಿದರು. ಈ ಮಾತಿಗೆ ಮನಕರಗಿ ಅವರಿಗೆ 50 ಸಾವಿರ ರು ಮರಳಿಸಿ ಆರೋಪಿಗಳು ಪರಾರಿಯಾಗಿದ್ದರು ಎಂದು ತಿಳಿದು ಬಂದಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೃತ ರೈತ ಕುಟುಂಬಕ್ಕೆ ವೈ.ಎಸ್.ವಿ. ದತ್ತ ಸಾಂತ್ವನ
ಬೌರಿಂಗ್‌ ದುರಂತಕ್ಕೆ ಅವೈಜ್ಞಾನಿಕ ನಿರ್ಮಾಣ ಕಾರಣ: ಲೋಕಾ ವರದಿ