ಸಂಡೂರು: ಮಸಣ ಕಾರ್ಮಿಕರ ಸಂಘ, ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳು ಶನಿವಾರ ಕುಡುತಿನಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮ್ಮ ವಿವಿಧ ಬೇಡಿಕೆಗಳ ಮನವಿಯನ್ನು ಸಂಸದ ಈ.ತುಕಾರಾಂ ಅವರಿಗೆ ಸಲ್ಲಿಸಿದರು.ಎಲ್ಲ ಮಸಣ ಕಾರ್ಮಿಕರ ಗಣತಿ ಮಾಡಬೇಕು. ಪುನರ್ವಸತಿಗೆ 2025ರ ಬಜೆಟ್‌ನಲ್ಲಿ ಕ್ರಮ ವಹಿಸಬೇಕು. 45 ವರ್ಷ ವಯಸ್ಸಿನ ಎಲ್ಲರಿಗೂ ಮಾಸಿಕ ಕನಿಷ್ಠ ₹3000 ಪಿಂಚಣಿ ಒದಗಿಸಬೇಕು. ಕುಣಿ ಅಗೆದು ಮುಚ್ಚುವ ಕೆಲಸವನ್ನು ಉದ್ಯೋಗ ಖಾತ್ರಿ ಕೆಲಸವೆಂದು ಪರಿಗಣಿಸಿ ವೇತನ ನೀಡಬೇಕು. ಸುರಕ್ಷತಾ ಪರಿಕರಗಳನ್ನು ಒದಗಿಸಬೇಕು. ಮಸಣಕ್ಕೊಬ್ಬರಂತೆ ಮಸಣ ನಿರ್ವಾಹಕರಾಗಿ ಸ್ಥಳೀಯ ಸಂಸ್ಥೆಗಳು ನೇಮಿಸಿಕೊಳ್ಳಬೇಕು. ಮಸಣ ಕಾರ್ಮಿಕರ ಕುಟುಂಬಗಳಿಗೆ ತಲಾ ಐದು ಎಕರೆ ಜಮೀನು ಮತ್ತು ನಿವೇಶನ ಒದಗಿಸಬೇಕು ಹಾಗೂ ಮಸಣ ಕಾರ್ಮಿಕರ ಮಕ್ಕಳಿಗೆ ಮದುವೆಗೆ ಸಹಾಯ ಧನ ನೀಡಬೇಕು ಎಂದರು.
ಎಲ್ಲ ಮಾಜಿ ದೇವದಾಸಿ ಮಹಿಳೆಯರ ಮಾಸಿಕ ಸಹಾಯಧನವನ್ನು 2025ರ ಬಜೆಟ್‌ನಲ್ಲಿ ಕನಿಷ್ಠ ₹3000ಗೆ ಹೆಚ್ಚಿಸಬೇಕು. ಮಹಿಳಾ ಅಭಿವೃದ್ಧಿ ನಿಗಮವು ದೇವದಾಸಿ ಮಹಿಳೆಯರ ಕುಟುಂಬದ ಎಲ್ಲ ಸದಸ್ಯರ ಗಣತಿಗೆ ಕ್ರಮ ವಹಿಸಿದೆ. ಆದರೆ, ಈ ಗಣತಿ ಕಾರ್ಯವನ್ನು ಅಂಗನವಾಡಿ ಕೇಂದ್ರಗಳ ಮೂಲಕ ನಡೆಸಲು ಕ್ರಮ ಕೈಗೊಳ್ಳಬೇಕು. ಸ್ವಯಂ ಉದ್ಯೋಗದಡಿ ದೇವದಾಸಿ ಮಹಿಳೆಯರಿಗೆ ನೀಡುವ ಸಹಾಯ ಧನವನ್ನು ಕನಿಷ್ಠ ₹1.50 ಲಕ್ಷಗೆ ಹೆಚ್ಚಿಸಲು ಅಗತ್ಯ ಕ್ರಮ ವಹಿಸಬೇಕು. ದೇವದಾಸಿ ಮಹಿಳೆಯರ ವಸತಿಗಾಗಿ ಉಚಿತ ನಿವೇಶನದ ಜೊತೆಗೆ ರಾಜೀವಗಾಂಧಿ ವಸತಿ ಯೋಜನೆಗೆ ಜೋಡಿಸಿ ಪಕ್ಕಾ ಮನೆಯನ್ನು ಕಟ್ಟಿಸಿಕೊಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ಮಸಣ ಕಾರ್ಮಿಕರ ಸಂಘ ಹಾಗೂ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಪದಾಧಿಕಾರಿಗಳಾದ ಎ. ಸ್ವಾಮಿ, ಕಾರ್ಯದರ್ಶಿ ಎಚ್.ದುರುಗಮ್ಮ, ಹಲವು ಸದಸ್ಯರು ಉಪಸ್ಥಿತಿರಿದ್ದರು.
ಮಸಣ ಕಾರ್ಮಿಕರ ಸಂಘ ಹಾಗೂ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಮುಖಂಡರು ಶನಿವಾರ ಕುಡುತಿನಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸದ ಈ. ತುಕಾರಾಂ ಅವರಿಗೆ ತಮ್ಮ ಬೇಡಿಕೆಗಳ ಮನವಿ ಸಲ್ಲಿಸಿದರು.