ಹಾರೋಹಳ್ಳಿ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಯಾವುದೋ ಒಂದು ಕಾರ್ಖಾನೆಯಿಂದ ವಿಷಕಾರಿ ತ್ಯಾಜ್ಯ ನೀರನ್ನು ಬನ್ನಿಕುಪ್ಪೆ ಕೆರೆಗೆ ಹರಿಸಿರುವ ಹಿನ್ನೆಲೆಯಲ್ಲಿ ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ
ಹಾರೋಹಳ್ಳಿ: ಹಾರೋಹಳ್ಳಿ ಕೈಗಾರಿಕಾ ಪ್ರದೇಶದ ಯಾವುದೋ ಒಂದು ಕಾರ್ಖಾನೆಯಿಂದ ವಿಷಕಾರಿ ತ್ಯಾಜ್ಯ ನೀರನ್ನು ಬನ್ನಿಕುಪ್ಪೆ ಕೆರೆಗೆ ಹರಿಸಿರುವ ಹಿನ್ನೆಲೆಯಲ್ಲಿ ಕೆರೆಯಲ್ಲಿ ಸಾವಿರಾರು ಮೀನುಗಳು ಸಾವನ್ನಪ್ಪಿವೆ. ಕೆರೆಯ ನೀರು ವಿಷಕಾರಿಯಾಗಿರುವ ಕಾರಣ ಜಲಚರಗಳು ಹಾಗೂ ಅವುಗಳನ್ನು ಅವಲಂಬಿಸಿರುವ ಪಕ್ಷಿಗಳ ಜೀವಕ್ಕೂ ಅಪಾಯ ಎದುರಾಗಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ 600ಕ್ಕೂ ಹೆಚ್ಚು ಕಾರ್ಖಾನೆಗಳು ಕಾರ್ಯನಿರ್ವಹಿಸುತ್ತಿದ್ದು, ಮೊದಲ ಮತ್ತು ಎರಡನೇ ಹಂತದ ಕೈಗಾರಿಕಾ ಪ್ರದೇಶಗಳು ಪೂರ್ಣಗೊಂಡಿವೆ. ಇದೀಗ ಮೂರನೇ ಹಂತದ ಕೈಗಾರಿಕಾ ಪ್ರದೇಶವೂ ಅಭಿವೃದ್ಧಿ ಹೊಂದುತ್ತಿದೆ. ಇಂತಹ ಬೃಹತ್ ಕೈಗಾರಿಕಾ ಪ್ರದೇಶದಲ್ಲಿ ತ್ಯಾಜ್ಯ ನಿರ್ವಹಣೆ ಮತ್ತು ಪರಿಸರ ಸಂರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.
ಸುಮಾರು 90 ಎಕರೆ ವಿಸ್ತೀರ್ಣ ಹೊಂದಿರುವ ಬನ್ನಿಕುಪ್ಪೆ ಕೆರೆಯ ನೀರು ಈ ಹಿಂದೆ ಸ್ವಚ್ಛವಾಗಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ ಕೆರೆಯ ನೀರು ಕಲುಷಿತಗೊಂಡು ಸಾವಿರಾರು ಮೀನುಗಳು ಸಾವನ್ನಪ್ಪಿರುವುದು ಆತಂಕಕ್ಕೆ ಕಾರಣವಾಗಿದೆ. ಸತ್ತ ಮೀನುಗಳನ್ನು ತಿನ್ನಲು ಅನೇಕ ಪಕ್ಷಿಗಳು ಕೆರೆಯ ಸುತ್ತಮುತ್ತ ಸೇರುತ್ತಿದ್ದು, ಅವುಗಳಿಗೂ ಅಪಾಯ ಉಂಟಾಗಬಹುದು. ಈ ನೀರನ್ನು ಕುಡಿಯುವ ಜಾನುವಾರುಗಳು ಹಾಗೂ ಇತರ ಪ್ರಾಣಿಗಳ ಆರೋಗ್ಯದ ಮೇಲೂ ದುಷ್ಪರಿಣಾಮ ಉಂಟಾಗುವ ಸಾಧ್ಯತೆ ಇದೆ.
ಇದೇ ವೇಳೆ, ಸುಮಾರು ಒಂದು ವಾರದ ಹಿಂದೆ ಬಡ ರೈತರೊಬ್ಬರಿಗೆ ಸೇರಿದ ಹಸು ಮತ್ತು ಕರು ನೀರು ಕುಡಿದ ಬಳಿಕ ಸಾವನ್ನಪ್ಪಿವೆ. ಆದರೆ, ಈ ಘಟನೆಗೂ ಕೆರೆಯ ಕಲುಷಿತ ನೀರಿಗೂ ಸಂಬಂಧವಿದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ದೃಢಪಡಿಸಬೇಕಿದೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರು ಈ ಸಂಬಂಧ ದೂರು ದಾಖಲಿಸಿಲ್ಲ ಎನ್ನಲಾಗಿದೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿ:
ಬನ್ನಿಕುಪ್ಪೆ ಕೆರೆಗೆ ತ್ಯಾಜ್ಯ ನೀರು ಹರಿಸಿರುವ ಮೂಲವನ್ನು ಪತ್ತೆಹಚ್ಚಬೇಕು. ಕೆರೆಯ ನೀರು ಮತ್ತು ಸತ್ತ ಮೀನುಗಳ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಬೇಕು. ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ತಪ್ಪಿತಸ್ಥರು ಪತ್ತೆಯಾದರೆ ಕಾನೂನುಬದ್ಧ ಕ್ರಮ ಕೈಗೊಳ್ಳಬೇಕು.
ಅಲ್ಲದೆ, ಸಾರ್ವಜನಿಕರು ಮತ್ತು ಮೀನುಗಾರರು ಕೆರೆಯಲ್ಲಿರುವ ಮೀನುಗಳನ್ನು ಹಿಡಿಯುವುದು, ಮಾರಾಟ ಮಾಡುವುದು ಅಥವಾ ಸೇವಿಸುವುದರಿಂದ ದೂರವಿರುವಂತೆ ಕೆರೆಯ ಮುಂಭಾಗದಲ್ಲಿ ಎಚ್ಚರಿಕೆ ಫಲಕ ಅಳವಡಿಸಬೇಕು.
ಇಂದು ಕೆರೆಯ ಮೀನುಗಳು ಮತ್ತು ಪಕ್ಷಿಗಳಿಗೆ ಎದುರಾಗಿರುವ ಅಪಾಯ ನಾಳೆ ಮನುಷ್ಯರ ಆರೋಗ್ಯದ ಮೇಲೂ ಪರಿಣಾಮ ಬೀರಬಹುದು ಎಂಬ ಆತಂಕ ಸಾರ್ವಜನಿಕರಲ್ಲಿ ಮನೆಮಾಡಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಕೆರೆಯ ನೀರಿನ ಗುಣಮಟ್ಟ ಪರೀಕ್ಷಿಸಿ, ಮಾಲಿನ್ಯದ ಮೂಲವನ್ನು ಪತ್ತೆಹಚ್ಚಿ, ಕೆರೆಯ ಪರಿಸರವನ್ನು ಸಂರಕ್ಷಿಸಲು ತುರ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಕೋಟ್............
ಈ ಕೆರೆಯ ಸ್ವಚ್ಛತೆಯನ್ನು ಕಾಪಾಡಬೇಕು. ಅಲ್ಲದೆ ಕೆರೆಗೆ ವಿಷದ ನೀರು ಹರಿಸುತ್ತಿರುವ ಕಾರ್ಖಾನೆಯನ್ನು ಪತ್ತೆ ಹಚ್ಚಿ ಕ್ರಮ ತೆಗೆದುಕೊಳ್ಳಬೇಕು ಪ್ರಾಣಿ ಪಕ್ಷಿಗಳ ರಕ್ಷಣೆಯನ್ನು ಮಾಡಬೇಕು. ಅವುಗಳು ನಮ್ಮಂತೆ ಜೀವಿಗಳು ಎಂದು ಮನವರಿಕೆ ಮಾಡಿಕೊಳ್ಳಬೇಕು.
- ಚಂದ್ರು, ಬಿಜೆಪಿ ಮುಖಂಡರು, ಹಾರೋಹಳ್ಳಿ
13ಕೆಆರ್ ಎಂಎನ್ 1,2.ಜೆಪಿಜಿ
ಕೆರೆಯ ಕಲುಷಿತ ನೀರು ಸೇವನೆಯಿಂದ ಕರು ಮತ್ತು ಮೀನುಗಳು ಸಾವನ್ನಪ್ಪಿರುವುದು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.