ಕನ್ನಡಪ್ರಭ ವಾರ್ತೆ ಪಾಂಡವಪುರ
ಶ್ರೀರಾಮಯೋಗೀಶ್ವರ ಮಠದ ಪೀಠಾಧ್ಯಕ್ಷ ಶ್ರೀಶಿವಬಸವ ಸ್ವಾಮೀಜಗಳ ದಿವ್ಯ ಸಾನಿಧ್ಯದಲ್ಲಿ ನಡೆದ ವಿವಾಹ ಮಹೋತ್ಸವದಲ್ಲಿ 29 ಮಂದಿ ನವ ಜೋಡಿಗಳಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪತ್ನಿ ಶಿಲ್ಪ ಹಾಗೂ ಸೋದರಿ ಸ್ಮಿತಾ ಪುಟ್ಟಣ್ಣಯ್ಯ ಅವರು ವರನಿಗೆ ವಾಚುಬಟ್ಟೆ, ವಧುವಿಗೆ ಸೀರೆ ವಿತರಣೆ ಮಾಡಿ ಬಳಿಕ ಮಾಂಗಲ್ಯ ವಿತರಣೆ ಮಾಡಿದರು.
ಬೆಳಗ್ಗೆ 10.10 ಗಂಟೆಯ ಶುಭಲಗ್ನದಲ್ಲಿ ಮಂತ್ರ ಮಾಂಗಲ್ಯದ ವೇಧಗೋಷದೊಂದಿಗೆ ಮಾಂಗಲ್ಯಧಾರಣೆ ನೆರವೇರಿಸಲಾಯಿತು.ಶ್ರೀಶಿವಬಸವ ಸ್ವಾಮೀಜಿ ಮಾತನಾಡಿ, ಬೇಬಿ ಬೆಟ್ಟದ ಜಾತ್ರೆಯಲ್ಲಿ ದನಗಳ ಜಾತ್ರೆ ಮೆರಗು ತಂದಿದೆ. ಇದರ ಜೊತೆಗೆ ನಡೆಯುವ ಸರಳ ಸಾಮೂಹಿಕ ವಿವಾಹವೇ ಜಾತ್ರೆಗೆ ಒಂದು ಮೆರುಗಾಗಿದೆ. ಜಾತ್ರೆಯಲ್ಲಿ ನಡೆದ ಸರಳ ಸಾಮೂಹಿಕ ವಿವಾಹದಲ್ಲಿ 29 ಮಂದಿ ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ ಎಂದು ಬಣ್ಣಿಸಿದರು.
ಹೊಸ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ನವ ಜೋಡಿಗಳು ಸಂಸಾರದಲ್ಲಿ ಕಷ್ಟ-ಸುಖ ಎರಡನ್ನು ಸಮಾನವಾಗಿ ಸ್ವೀಕರಿಸಿ ಮುನ್ನಡೆಯಬೇಕು, ಸೊಸೆ-ಅತ್ತೆ ಸಂಬಂಧ ತಾಯಿ-ಮಗಳಂತೆ ನಡೆದರೆ ಸಂಸಾರ ಚೆನ್ನಾಗಿರುತ್ತದೆ. ಸರ್ಕಾರಗಳು ಸಹ ಸರಳ ವಿವಾಹಗಳನ್ನು ನಡೆಸುವುದಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.
ಸುನೀತ ಪುಟ್ಟಣ್ಣಯ್ಯ ಮಾತನಾಡಿ, ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಎಲ್ಲಾ ನೂತನ ವಧು-ವರರಿಗೆ ಶುಭವಾಗಿ ಎಲ್ಲರೂ ಜೀವನದಲ್ಲಿ ಬರುವ ಕಷ್ಟ ಸುಖಗಳನ್ನು ಸಮಾನಾಗಿ ಹಂಚಿಕೊಂಡು ಮುನ್ನಡೆಬೇಕು ಎಂದು ಸಲಹೆ ನೀಡಿದರು.
ಶಾಸಕ ದರ್ಶನ್ ಪತ್ನಿ ಶಿಲ್ಪಾ ದರ್ಶನ್, ಸೋದರಿ ಸ್ಮಿತಾ ಪುಟ್ಟಣ್ಣಯ್ಯ ಮಾತನಾಡಿದರು. ಸಮಾರಂಭದಲ್ಲಿ ತುಮಕೂರು ಸಿದ್ದನ ಮಠ ಷಣ್ಮುಗ ಸ್ವಾಮೀಜಿ, ತಹಸೀಲ್ದಾರ್ ಬಸವರೆಡ್ಡಪ್ಪ ರೋಣದ, ಪತ್ನಿ ಜಯಶ್ರೀ, ರೈತ ಮುಖಂಡರಾದ ಕೆ.ಟಿ.ಗೋವಿಂದೇಗೌಡ, ಕೆ.ಎಸ್.ದಯಾನಂದ, ಜಯರಾಮು, ಚಿಕ್ಕೇಗೌಡ, ಜಯರಾಮು, ಇಓ ವೀಣಾ, ಸಿಡಿಪಿಓ ಪೂರ್ಣಿಮಾ, ಪಿಎಸ್ ಐ ಲಿಂಗರಾಜು, ರೈತಸಂಘದ ತಾಲೂಕು ಅಧ್ಯಕ್ಷ ವಿಜಯ್ ಕುಮಾರ್, ಕಾರ್ಯದರ್ಶಿ ಮಂಜುನಾಥ್ ಸೇರಿದಂತೆ ಹಲವು ಇದ್ದರು.
ಅನಾರೋಗ್ಯಕ್ಕೆ ಒಳಗಾಗಿದ್ದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಪತ್ನಿ ಶಿಲ್ಪ ದರ್ಶನ್ ಅವರು ಇದೇ ಮೊದಲ ಬಾರಿಗೆ ಸಾರ್ವಜನಿಕರ ಸಮಾರಂಭದಲ್ಲಿ ಕಾಣಿಸಿಕೊಂಡರು. ಚುನಾವಣೆ ಸಮಯದಲ್ಲಿ ಬಂದು ಪತಿ ಪರ ಮತಯಾಚನೆ ಮಾಡಿ ಹೋಗಿದ್ದ ಬಳಿಕ ಅನಾರೋಗ್ಯಕ್ಕೆ ಒಳಗಾಗಿದ್ದರು. ಅದಾದ ಮೂರು ವರ್ಷದ ಬಳಿಕ ಇದೇ ಮೊದಲ ಬಾರಿಗೆ ಬೇಬಿ ಬೆಟ್ಟ ಸರಳ ವಿವಾಹ ಮಹೋತ್ಸವದಲ್ಲಿ ಭಾಗವಹಿಸಿ ನವಜೋಡಿಗಳಿಗೆ ಮಾಂಗಲ್ಯ ವಿತರಣೆ ಮಾಡಿದರು.
ಪಾಂಡವಪುರ:
ದನಗಳ ಜಾತ್ರಾ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಉಚಿತ ಸರಳ ಸಾಮೂಹಿಕ ವಿವಾಹದಲ್ಲಿ ಇದೇ ಪ್ರಥಮ ಬಾರಿಗೆ ಶಾಸಕರೊಬ್ಬರು ಗೈರಾಗಿದ್ದು ವಿಶೇಷ. ಎಂದಿನಂತೆ ಶಾಸಕರು ಅಮೆರಿಕಾ ಪ್ರವಾಸ ಕೈಗೊಂಡಿದ್ದರಿಂದ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿರಲಿಲ್ಲ. ಇದರಿಂದ ಜಾತ್ರೆಯಲ್ಲಿ ಪಾಲ್ಗೊಂಡಿದ್ದ ಜನರು, ಭಕ್ತರು, ರೈತರು ಸೇರಿದಂತೆ ಸಾವಿರಾರು ಮಂದಿಗೆ ಬೇಸರ ಉಂಟಾಯಿತು. ಶಾಸಕರ ಬದಲಿಗೆ ಶಾಸಕರ ಪತ್ನಿ ಶಿಲ್ಪ ಹಾಗೂ ಸೋದರಿ ಸ್ಮಿತಾ ಪುಟ್ಟಣ್ಣಯ್ಯ ಪಾಲ್ಗೊಂಡು ವರನಿಗೆ ವಾಚುಬಟ್ಟೆ, ವಧುವಿಗೆ ಸೀರೆ ವಿತರಣೆ ಮಾಡಿದರು.