ಗೌರಿಬಿದನೂರು: ದುಂದು ವೆಚ್ಚದ ವಿವಾಹಗಳ ಬದಲಾಗಿ ಸಾಮೂಹಿಕ ವಿವಾಹ ಉತ್ತಮ, ಆರ್ಥಿಕ ಹೊರೆ ತಗ್ಗಿ, ಜೀವನದಲ್ಲಿ ಪ್ರಗತಿ ಹೊಂದಲು ಸಾಧ್ಯವಾಗುತ್ತದೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ತಿಳಿಸಿದರು.
ಮಾಂಗಲ್ಯವನ್ನು ವಿತರಿಸಿ ನೂತನ ದಂಪತಿಗಳಿಗೆ ಶುಭ ಹಾರೈಸಿ, ವಿವಾಹವೆಂಬುದು ಜನ್ಮ ಜನ್ಮಾಂತರದ ಪವಿತ್ರ ಬಂಧನವಾಗಿದೆ. ಸಂಸಾರದಲ್ಲಿ ಹಲವು ಕಷ್ಟ- ಸುಖಗಳು, ನೋವು- ನಲಿವುಗಳು ಸಾಮಾನ್ಯ. ನೀವೆಲ್ಲರೂ ಅವುಗಳೆಲ್ಲವನ್ನು ಸಮಾನವಾಗಿ ಸ್ವೀಕರಿಸಿ, ನಂಬಿಕೆಯಿಂದ ಸಂತೋಷವಾಗಿ ಜೀವನ ಸಾಗಿಸಿ ಸಮಾಜಕ್ಕೆ ಮಾದರಿಯಾಗಿರಬೇಕೆಂದು ತಿಳಿಸಿದರು.
ಆದಿಜಾಂಬವ ಮಹಾಸಂಸ್ಥಾನ ಮಠ ಕೋಡಿಹಳ್ಳಿ ಷಡಕ್ಷರಿ ಮುನಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ದಂಪತಿಗಳ ಜೀವನದಲ್ಲಿ ಸಣ್ಣಪುಟ್ಟ ಗಲಾಟೆ, ಜಗಳ, ವೈಮನಸ್ಸು ಬರುವುದು ಸರ್ವೇ ಸಾಮಾನ್ಯ. ಎಲ್ಲವನ್ನೂ ಇಬ್ಬರೂ ಪ್ರೀತಿಯಿಂದ ಸ್ವೀಕರಿಸುವ ಮೂಲಕ ಉತ್ತಮ ಜೀವನ ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.ಕರ್ನಾಟಕ ಮಾದಿಗ ದಂಡೋರ ರಾಜ್ಯ ಘಟಕದ ಅಧ್ಯಕ್ಷ ಎಂ. ಶಂಕರಪ್ಪ ಮಾತನಾಡಿ, ಇಂದಿನ ದಿನಗಳಲ್ಲಿ ವಿವಾಹ ವಿಚ್ಛೇಧನಗಳು ಹೆಚ್ಚುತ್ತಿರುವುದು ಕಳವಳಕಾರಿಯಾಗಿದೆ, ಪತಿ- ಪತ್ನಿ ಪರಸ್ಪರ ಅರ್ಥೈಸಿಕೊಂಡಾಗ ಜೀವನವು ನೆಮ್ಮದಿಯಿಂದ ಸಾಗಲು ಸಾಧ್ಯ, ನವ ದಂಪತಿಗಳು ಯಾವುದೇ ಕಾರಣಕ್ಕೂ ಜಗಳವಾಡಬಾರದು ಎಂದರು.
ಕಾರ್ಯಕ್ರಮದಲ್ಲಿ ಭಾರತೀಯ ಸೇನಾ ಸಮಿತಿ ರಾಷ್ಟ್ರ ಅಧ್ಯಕ್ಷ ಹೂಡಿ ರಾಮಚಂದ್ರ, ಅಮರ್, ಕಾಂತರಾಜು, ಪ್ರಕಾಶ್, ಕೃಷ್ಣಪ್ಪ, ವಿಜಯ ರಾಘವ, ಎ. ಗಂಗಾಧರಪ್ಪ, ರಾಮಾಂಜಿನಮ್ಮ, ಅರುಂಧತಿ, ನಾಗರಾಜ ನಾಯಕ್, ಬಾಬಣ್ಣ, ಮುನಿಯಪ್ಪ, ಮಲ್ಲಸಂದ್ರ ಗಂಗಾಧರಪ್ಪ, ಎಚ್.ಎಲ್. ವೆಂಕಟೇಶ್, ಜಿ. ನರಸಿಂಹಮೂರ್ತಿ ಪಾಲ್ಗೊಂಡಿದ್ದರು.