ಸಾಮೂಹಿಕ ವಿವಾಹಗಳಿಂದ ಸಾಮರಸ್ಯ ಹೆಚ್ಚಳ

KannadaprabhaNewsNetwork |  
Published : Aug 18, 2025, 12:00 AM IST
ಪೋಟೊಗಳು | Kannada Prabha

ಸಾರಾಂಶ

ಸರ್ವರು ಸಮಾನತೆಯಿಂದ ಬಾಳಬೇಕು. ಈ ಸಮಾಜದಲ್ಲಿ ಎಲ್ಲರೂ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಬೆಳೆಯಬೇಕು

ಕಾರಟಗಿ: ಗ್ರಾಮೀಣ ಪ್ರದೇಶದ ಎಲ್ಲ ಸಮಾಜ ಆರ್ಥಿಕ, ಸಾಮಾಜಿಕವಾಗಿ ಬೆಳೆಯಲು ಸಾಮೂಹಿಕ ವಿವಾಹಗಳು ಹೆಚ್ಚು ಹೆಚ್ಚು ಆಗುವುದರ ಮೂಲಕ ಹಳ್ಳಿಗಳು ಸಾಮರಸ್ಯವಾಗಿ ಬೆಳೆಯುತ್ತವೆ ಮತ್ತು ಬೆಸೆಯುತ್ತವೆ ಎಂದು ಸಂಸ್ಥಾನ ಬುಕ್ಕಸಾಗರದ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.

ಪಟ್ಟಣದ ಆರಾಧ್ಯ ದೈವ ಶ್ರೀಶರಣಬಸವೇಶ್ವರರ 51ನೇ ವರ್ಷದ ಪುರಾಣ ಪ್ರವಚನದ ಅಂಗವಾಗಿ ಇಲ್ಲಿನ ಶರಣಬಸವೇಶ್ವರ ದೇವಸ್ಥಾನದಲ್ಲಿ ಭಾನುವಾರ ನಡೆದ ಸಾಮೂಹಿಕ ವಿವಾಹದ ಸಾನ್ನಿಧ್ಯ ವಹಿಸಿ ನೂತನ ದಂಪತಿಗೆ ಆಶೀರ್ವಚನ ನೀಡಿ ಮಾತನಾಡಿದರು.

ಸರ್ವರು ಸಮಾನತೆಯಿಂದ ಬಾಳಬೇಕು. ಈ ಸಮಾಜದಲ್ಲಿ ಎಲ್ಲರೂ ಶೈಕ್ಷಣಿಕ, ಆರ್ಥಿಕ ಮತ್ತು ಸಾಮಾಜಿಕವಾಗಿ ಬೆಳೆಯಬೇಕು. ಮದುವೆಗಾಗಿ ಕೋಟ್ಯಂತರ ವೆಚ್ಚ ಮಾಡುವವವರು ನಮ್ಮ ಸಮಾಜದಲ್ಲಿ ಇದ್ದಾರೆ. ಆದರೆ ಈ ವೆಚ್ಚ ಸಮಾಜಕ್ಕೆ ಏನೂ ಸಂದೇಶ ನೀಡುತ್ತದೆ ಎನ್ನುವ ಜ್ಞಾನ ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಭತ್ತದ ನಾಡು ಅನ್ನ ದಾಸೋಹಕ್ಕೆ ಹೆಸರು ಮಾಡಿದೆ. ನಮ್ಮ ರೈತರು ಬೆಳೆದ ಅಕ್ಕಿ ಇಡೀ ದೇಶಕ್ಕೆ ರವಾನೆಯಾಗುತ್ತದೆ. ಅಕ್ಕಿಗೆ ಇಷ್ಟು ಬೇಡಿಕೆ ಇದೆ. ಆದರೆ ನಮ್ಮ ರೈತರು ಆರ್ಥಿಕವಾಗಿ ಇನ್ನೂ ಬೆಳೆದಿಲ್ಲ. ಈ ಕುರಿತು ನಾವೆಲ್ಲ ಚಿಂತನೆ ಮಾಡಬೇಕು. ಹಳ್ಳಿಗಳಲ್ಲಿನ ರೈತರೆ ದೇಶಕ್ಕೆ ಅನ್ನ ನೀಡುತ್ತಾರೆ. ಹೀಗಾಗಿ ಹಳ್ಳಿಗಳಲ್ಲಿ ಎಲ್ಲ ವರ್ಗದವರ ಆರ್ಥಿಕ ಸ್ಥಿತಿ ಸುಧಾರಣೆ ಆಗಲು ಈ ಸಾಮೂಹಿಕ ವಿವಾಹ ಅನುಕೂಲವಾಗುತ್ತವೆ ಎಂದು ಶ್ರೀಗಳು ಹೇಳಿದರು.

ವೈಭವದ ಮದುವೆಗಳಿಂದ ದೂರವಿದ್ದು, ಜೀವನದಲ್ಲಿ ಆರ್ಥಿಕ ಸರಳತೆ ಪಾಲಿಸಬೇಕು. ಆಗ ನೆಮ್ಮದಿಯ ದಾಂಪತ್ಯ ಜೀವನ ಸಾಗಿಸಲು ಸಾಧ್ಯ. ಉಳ್ಳವರು ಸಾಮೂಹಿಕ ವಿವಾಹದಂತ ಸತ್ಕಾರ್ಯಗಳಿಗೆ ಮುಂದಾಗಿ ಪುಣ್ಯದ ಕಾರ್ಯ ನಡೆಸಿದ ಕೀರ್ತಿಗೆ ಭಾಜನರಾಗಬೇಕು ಎಂದರು.

ಶ್ರೀ ಶರಣ ಬಸವೇಶ್ವರರ ಮದುವೆಯೊಂದಿಗೆ ಸಂಸ್ಥಾನಮಠ ಬುಕ್ಕಸಾಗರದ ಕರಿಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ 6 ಜೋಡಿ ನವವಧುವರರು ಸಪ್ತಪದಿ ತುಳಿದರು.

ಸಾಮೂಹಿಕ ವಿವಾಹದ ನೇತೃತ್ವ ವಹಿಸಿದ್ದ ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಮಾತನಾಡಿ, ಸಂಸಾರವೆಂಬ ಬಾಳ ನೌಕೆಯಲ್ಲಿ ಇಂದಿನಿಂದ ನಿಮ್ಮ ಪಯಣ ಆರಂಭವಾಗಿದೆ. ಈ ಒಂದು ಪಯಣ ಇಡಿ ನಿಮ್ಮ ಜೀವನದಲ್ಲಿ ಕಷ್ಟ ಸುಖಗಳು ಬರುತ್ತಲಿರುತ್ತವೆ. ಅವುಗಳನ್ನೆಲ್ಲ ಎದುರಿಸಿ ನಿಮ್ಮ ಜೀವನ ಎಂಬ ನೌಕೆ ಸಾಗಿಸುತ್ತಲೆ ಇರಬೇಕು ಎಂದರು.

ಇದಕ್ಕೂ ಮುನ್ನ ಹರಗುರು ಚರಮೂರ್ತಿಗಳ ಸಾನ್ನಿಧ್ಯದಲ್ಲಿ ಮಂಗಲ ಮಂಟಪದಲ್ಲಿ 6 ಜೋಡಿಗಳು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ನೆರೆದಿದ್ದ ಅಪಾರ ಜನರು ನೂತನ ದಂಪತಿಗಳಿಗೆ ಸಾಮೂಹಿಕ ಅಕ್ಷತೆ ಹಾಕಿ ಶುಭಕೋರಿದರು. ನಂತರ ಶರಣ ಬಸವೇಶ್ವರರ ದೇವಸ್ಥಾನದಿಂದ ಭಾಜಾ ಭಜಂತ್ರಿಗಳೊಂದಿಗೆ ನವವಧುವರರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪುರಾಣ ಸಮಿತಿಯ ಪದಾಧಿಕಾರಿಗಳು, ದಾನಿಗಳು, ಪ್ರಮುಖರು, ಸದ್ಭಕ್ತರು, ಸುತ್ತಲಿನ ವಿವಿಧ ಗ್ರಾಮಗಳ ಜನರು ಮದುವೆ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

PREV

Recommended Stories

ಧರ್ಮಸ್ಥಳ ಗ್ರಾಮ ಕೇಸ್‌ ರೀತಿ ಶ್ವಾನ ಮೂಳೆ ಪತ್ತೆಗೆ ಎಸ್‌ಐಟಿ?
ಎಸ್ಸೆಸ್ಸೆಲ್ಸಿ- ಪಿಯು : ಈ ವರ್ಷವೂ 3 ಪರೀಕ್ಷೆ ಉದ್ದೇಶ ಫೇಲ್‌