ಮೈಸೂರಿನ ವಸ್ತು ಪ್ರದರ್ಶನ ಮೈದಾನದ ಜೆ.ಕೆ. ಸಭಾಂಗಣದಲ್ಲಿ ಆಯೋಜನೆ । ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರಿಂದ ಚಾಲನೆ । ಬಿಜೆಪಿ ನಾಯಕರ ದಂಡು
ಮೈಸೂರಿನಲ್ಲಿ ಜು.೧೧ರಂದು ಕಾಯಕ ಸಮಾಜಗಳ ಬೃಹತ್ ಸಮಾವೇಶವನ್ನು ಹಮ್ಮಿಕೊಂಡಿದ್ದು, ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾಯಕ ಸಮಾಜದ ಬಂಧುಗಳು ಭಾಗವಹಿಸಬೇಕೆಂದು ವಿಧಾನ ಪರಿಷತ್ ನೂತನ ಸದಸ್ಯ ರಘು ಕೌಟಿಲ್ಯ ಮನವಿ ಮಾಡಿದರು.
ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾಯಕ ಸಮಾಜದ ಬಂಧುಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಮೈಸೂರಿನ ವಸ್ತು ಪ್ರದರ್ಶನ ಮೈದಾನದಲ್ಲಿರುವ ಜೆ.ಕೆ. ಸಭಾಂಗಣದಲ್ಲಿ ಬೆಳಗ್ಗೆ ೧೦.೩೦ಕ್ಕೆ ಕಾಯಕ ಸಮಾಜಗಳ ಒಕ್ಕೂಟದಿಂದ ವತಿಯಿಂದ ನಡೆಯುವ ಸಮಾವೇಶವನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಉದ್ಘಾಟಿಸಲಿದ್ದಾರೆ. ವಿಪಕ್ಷ ನಾಯಕ ಆರ್. ಆಶೋಕ್, ಛಲವಾದಿ ನಾರಾಯಣಸ್ವಾಮಿ, ಪಕ್ಷದ ಅನೇಕ ಹಿಂದುಳಿದ ವರ್ಗಗಳ ನಾಯಕರು ಹಾಗೂ ಕಾಯಕ ಸಮಾಜದ ಗಣ್ಯರು ಭಾಗವಹಿಲಿಸಲಿದ್ದಾರೆ. ಇದೊಂದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ರಾಜ್ಯದಲ್ಲಿರುವ ಸಣ್ಣ ಪುಟ್ಟ ಸಮುದಾಯಗಳನ್ನು ಗುರುತಿಸಿ ಅವರಿಗೆ ರಾಜಕೀಯ ಅಧಿಕಾರ ನೀಡುವ ಜೊತೆಗೆ ಅವರನ್ನು ಸಮಾಜದ ಮುಖ್ಯವಾಹಿನಿ ತರುವ ಸಲುವಾಗಿ ಈ ಸಮಾವೇಶ ಅತ್ಯಂತ ಪ್ರಮುಖ್ಯತೆಯನ್ನು ಪಡೆದುಕೊಂಡಿದೆ. ಹೀಗಾಗಿ ಜಿಲ್ಲೆಯಲ್ಲಿರುವ ಎಲ್ಲಾ ಕಾಯಕ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು.ಬಿಜೆಪಿ ಧ್ವನಿ ಇಲ್ಲದವರಿಗೆ ಧ್ವನಿ ನೀಡುವ ಪಕ್ಷವಾಗಿದೆ. ಲೋಕ ಸೌಧ ಹಾಗೂ ವಿಧಾನಸೌಧಕ್ಕೆ ಹೋಗಲು ಸಾಧ್ಯವಾಗದ ಅನೇಕ ಸಣ್ಣಪುಟ್ಟ ಸಮುದಾಯಗಳನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಇದರಲ್ಲಿ ನಾನು ಸಹ ಒಬ್ಬನಾಗಿದ್ದು, ಮಡಿವಾಳ ಸಮಾಜದ ನನ್ನನ್ನು ಬಿಜೆಪಿ ವರಿಷ್ಠರು ಗುರುತಿಸಿ, ವಿಧಾನ ಪರಿಷತ್‌ಗೆ ಕಳುಹಿಸಿಕೊಟ್ಟಿದ್ದಾರೆ. ಅದೇ ರೀತಿ ರಾಜ್ಯಸಭೆಗೆ ನಾಗರಾಜು ಅವರನ್ನು ವಿಧಾನ ಪರಿಷತ್‌ಗೆ ಇನ್ನು ಅನೇಕ ಹಿಂದುಳಿದ ಸಮುದಾಯಗಳ ಮುಖಂಡರನ್ನು ಕಳುಹಿಸಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಅತ್ಯಂತ ಸಣ್ಣ ಸಮಾಜದವರು. ಹೀಗಾಗಿ ಬಿಜೆಪಿಯ ಇಂಥ ಕಾರ್ಯವನ್ನು ಗುರುತಿಸಿ, ಪಕ್ಷವನ್ನು ಬೆಂಬಲಿಸಿ, ಮುಂದಿನ ಚುನಾವಣೆಯಲ್ಲಿ ಶಕ್ತಿ ತುಂಬುವ ಕೆಲಸವನ್ನು ಕಾಯಕ ಸಮಾಜದವರು ಮಾಡಬೇಕಾಗಿದೆ. ಇದರಿಂದ ಈ ಸಮಾವೇಶ ಮಹತ್ವ ಪೂರ್ಣವಾಗಿದೆ ಎಂದು ರಘುಕೌಟಿಲ್ಯ ತಿಳಿಸಿದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ. ವೃಷಬೇಂದ್ರಪ್ಪ ಮಾತನಾಡಿ, ವಿಧಾನ ಪರಿಷತ್‌ಗೆ ಆಯ್ಕೆಯಾಗಿರುವ ರಘು ಕೌಟಿಲ್ಯ ಅವರು ಸಂಘಟನಾಕಾರರು ಮೈಸೂರಿಗಿಂತ ಹೆಚ್ಚಾಗಿ ಚಾಮರಾಜನಗರ ಜಿಲ್ಲೆಯಲ್ಲಿ ಪಕ್ಷವನ್ನು ಸಂಘಟನೆ ಮಾಡಲು ಉತ್ಸುಕರರಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಬಿಜೆಪಿಯಿಂದ ಯಾವುದೇ ಎಂಪಿ. ಎಂಎಲ್‌ಎ ಹೀಗಾಗಿ ಅವರು ಪಕ್ಷ ಸಂಘಟನೆ ಮತ್ತು ಕಾರ್ಯಕರ್ತರ ಹಿತದೃಷ್ಟಿಯಿಂದ ಜಿಲ್ಲೆಯಲ್ಲಿ ಹೆಚ್ಚು ತೊಡಗಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಚಾಮರಾಜನಗರದ ಪ್ರವಾಸಿ ಮಂದಿರದಲ್ಲಿ ನಡೆದ ಕಾಯಕ ಸಮಾಜದ ಬಂಧುಗಳ ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯ ರಘು ಕೌಟಿಲ್ಯ ಮಾತನಾಡಿದರು.