ಆರ್‌ಇಇ, ಯಟ್ರಿಯಮ್‌ನ ನಿಕ್ಷೇಪ ಗೋಚರ । 314 ಹೆಕ್ಟೇರ್ ಪ್ರದೇಶದಲ್ಲಿ 11.48 ದಶಲಕ್ಷ ಟನ್ ಅದಿರು, ಗಣಿಗಾರಿಕೆಗೆ ಜಿಎಸ್‌ಐ ಶಿಫಾರಸು?
ಮೊಬೈಲ್, ಕಂಪ್ಯೂಟರ್, ವಾಹನದ ಬ್ಯಾಟರಿ ಸೇರಿದಂತೆ ತಂತ್ರಜ್ಞಾನದ ಅಗತ್ಯಗಳಿಗೆ ಬೇಕಿರುವ ಅಪರೂಪದ ಖನಿಜ ಸಂಪತ್ತು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನಲ್ಲಿ ಪತ್ತೆಯಾಗಿದೆ.
ತಾಲೂಕಿನ ಮಲ್ಲಯ್ಯನಪುರ, ವಿಜಯಪುರ, ಕೂತನೂರು, ಮನುಗನಹಳ್ಳಿ ಸುತ್ತಮುತ್ತ ಅಪರೂಪದ ವಿರಳ ಭೂಮಿಯ ಮೂಲ ಧಾತುಗಳು (ರೇರ್ ಅರ್ಥ್ ಎಲಿಮೆಂಟ್ಸ್) ಮತ್ತು ಯಟ್ರಿಯಮ್/ಥೋರಿಯಮ್ ಖನಿಜ ನಿಕ್ಷೇಪ ಭಾರತೀಯ ಭೂವೈಜ್ಞಾನಿಕ ಸರ್ವೇಕ್ಷಣ (ಜಿಎಸ್‌ಐ) ನಡೆಸಿದ ಸಮೀಕ್ಷೆಯಲ್ಲಿ ಪತ್ತೆಯಾಗಿದೆ ಎನ್ನಲಾಗಿದೆ.ಜಿಎಸ್‌ಐ ವರದಿಯಲ್ಲಿ 2.85 ಚದರ ಕಿ.ಮೀಟರ್‌ನ 750 ಎಕರೆಯಲ್ಲಿ ಅತಿ ಅಪರೂಪದ ಖನಿಜ ಸಂಪತ್ತು ಗೋಚರವಾಗಿದ್ದು, 20 ಎಕರೆಯಷ್ಟು ಥೋರಿಯಂ ಇರುವುದು ತಿಳಿದುಬಂದಿದ್ದು, ಕೋರ್ ಮಿನರಲ್ ಝೋನ್ ಎಂದು ಘೋಷಣೆಯಾಗುವ ಸಿದ್ಧತೆ ನಡೆದಿದೆ ಎನ್ನಲಾಗುತ್ತಿದೆ.ಜಿಎಸ್‌ಐ ನಡೆಸಿದ ಸಾಮಾನ್ಯ ಪರಿಶೋಧನೆ ಜಿ-೨ ಪ್ರಕಾರ ಗುಂಡ್ಲುಪೇಟೆ ಬಳಿ ಆರ್‌ಇಇ ಮತ್ತು ಯಟ್ರಿಯಮ್ ಬ್ಲಾಕ್ ಒಟ್ಟು 314.21 ಹೆಕ್ಟೇರ್ ಪ್ರದೇಶ ಒಳಗೊಂಡಿದೆ.ಈ ಪ್ರದೇಶವನ್ನು ಗಣಿಗಾರಿಕೆ ಗುತ್ತಿಗೆಗೆ ಶಿಫಾರಸು ಮಾಡಲಾಗಿದೆ ಎನ್ನಲಾಗಿದೆ.ಎಷ್ಟು ಖನಿಜವಿದೆ?ಜಿಎಸ್‌ಐ ವರದಿಯ ಪ್ರಕಾರ ಈ ಬ್ಲಾಕ್‌ನಲ್ಲಿ ಎರಡು ಪ್ರಮುಖ ಖನಿಜಗಳಲ್ಲಿ ಆರ್‌ಇಇ ಅದಿರು ಶೇ.0.25 ಕಟ್-ಆಫ್‌ನಲ್ಲಿ 11.48 ಮಿಲಿಯನ್ ಟನ್ ಅದಿರು ಇದೆ. ಇದರಿಂದ ಅಂದಾಜು 55,276 ಟನ್ ಶುದ್ಧ ಆರ್‌ಇಇ ಲೋಹ ಸಿಗಬಹುದಾಗಿದೆ. ಉತ್ತಮ ಗುಣಮಟ್ಟದ ಶೇ. 0.50 ಕಟ್-ಆಫ್‌ನಲ್ಲಿ 6.35 ಮಿಲಿಯನ್ ಟನ್ ಅದಿರಿದೆ. 40,261 ಟನ್ ಲೋಹ ಲಭ್ಯದಲ್ಲಿ ಯಟ್ರಿಯಮ್ 100 ಪಿಪಿಎಂ ಕಟ್-ಆಫ್‌ನಲ್ಲಿ 7.18 ಮಿಲಿಯನ್ ಟನ್ ಅದಿರು ಇದ್ದು,1020 ಟನ್ ಶುದ್ಧ ಯಟ್ರಿಯಮ್ ಲೋಹ ಪಡೆಯುವ ಅಂದಾಜಿದೆ.ಒಟ್ಟು 44 ಬೋರ್‌ವೆಲ್‌ಗಳನ್ನು ಕೊರೆದು 6979.45 ಮೀಟರ್ ಪರಿಶೀಲನೆ ನಡೆಸಲಾಗಿದೆ. ಜೊತೆಗೆ 40 ಕಂದಕಗಳನ್ನು ತೋಡಿ ಮಾದರಿ ಸಂಗ್ರಹಿಸಲಾಗಿದೆ ಎನ್ನಲಾಗುತ್ತಿದೆ.ಪ್ರಾಮುಖ್ಯತೆ ಏನು?ಮೊಬೈಲ್,ಕಂಪ್ಯೂಟರ್,ಎಲೆಕ್ಟ್ರಿಕ್ ವಾಹನದ ಬ್ಯಾಟರಿ, ಗಾಳಿ ವಿದ್ಯುತ್ ಟರ್ಬೈನ್,ರಕ್ಷಣಾ ಉಪಕರಣಗಳು ಮತ್ತು ಉನ್ನತ ತಂತ್ರಜ್ಞಾನ ಉದ್ಯಮಗಳಿಗೆ ಆರ್‌ಇಇ ಮತ್ತು ಯಟ್ರಿಯಮ್ ಅತ್ಯಗತ್ಯ. ದೇಶದಲ್ಲಿ ಈ ಖನಿಜಗಳ ಆಮದು ಹೆಚ್ಚಿರುವ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ನಿಕ್ಷೇಪವು ಕಾರ್ಯ ತಂತ್ರಾತ್ಮಕವಾಗಿ ಮಹತ್ವ ಪಡೆದಿದೆ.ಸಂಪರ್ಕ ಮತ್ತು ಭೂ ಸ್ವರೂಪಈ ಬ್ಲಾಕ್ ಬೆಂಗಳೂರಿನಿಂದ 199 ಕಿಮೀ ನೈಋತ್ಯಕ್ಕೆ, ಮೈಸೂರಿನಿಂದ 61 ಕಿಮೀ ದಕ್ಷಿಣಕ್ಕೆ ಇದೆ. ಎನ್‌ಎಚ್-212 ಮತ್ತು ಎನ್‌ಎಚ್-766 ರಾಷ್ಟ್ರೀಯ ಹೆದ್ದಾರಿಗಳು ಹತ್ತಿರದಲ್ಲಿವೆ. ಹತ್ತಿರದ ರೈಲು ನಿಲ್ದಾಣ ಚಾಮರಾಜನಗರ 35 ಕಿಮೀ ದೂರದಲ್ಲಿದೆ. ಸಮುದ್ರ ಮಟ್ಟದಿಂದ ಸರಾಸರಿ 850 ಮೀಟರ್ ಎತ್ತರದಲ್ಲಿದೆ.ಈ ಪ್ರದೇಶವು ಸಮತಟ್ಟಾದ ಮತ್ತು ಲಘುವಾಗಿ ಉಬ್ಬು-ತಗ್ಗುಗಳನ್ನು ಹೊಂದಿದೆ. ವಾರ್ಷಿಕ ಸರಾಸರಿ ಮಳೆ 669 ಮಿಮೀ ಮತ್ತು ಉಷ್ಣತೆ 23.7°C ಇದೆ. ಈ ಪ್ರದೇಶದಲ್ಲಿ 6 ದೊಡ್ಡ ಕಾರ್ಬೊನಾಟೈಟ್ ಬಂಡೆಗಳ ಪಟ್ಟಿಗಳಿದ್ದು, ಅಲ್ಲಿಂದಲೇ ಈ ಖನಿಜಗಳು ದೊರೆತಿವೆ ಎಂದು ಜಿಎಸ್‌ಐ ತನ್ನ ವರದಿಯಲ್ಲಿ ಉಲ್ಲೇಖಿಸಿದೆ ಎನ್ನಲಾಗುತ್ತಿದೆ.ಗಣಿಗಾರಿಕೆಗೆ ಅನುಮತಿ ದೊರೆತಲ್ಲಿ ಜಿಲ್ಲೆಗೆ ಉದ್ಯೋಗ ಮತ್ತು ಕಂದಾಯದ ಹೊಸ ಅವಕಾಶಗಳು ತೆರೆದುಕೊಳ್ಳುವ ನಿರೀಕ್ಷೆಯಂತೂ ಇದ್ದೇ ಇದೆ.-ಗುಂಡ್ಲುಪೇಟೆ (ವಿಜಯಪುರ), ಮಲ್ಲಯ್ಯನಪುರ, ಕೂತನೂರು ಬಳಿ ಜಿ-೪ ಸರ್ವೇಯನ್ನು ಭಾರತೀಯ ಭೂ ವೈಜ್ಞಾನಿಕ ಇಲಾಖೆ ನಡೆಸಿದೆ. ಕೆಲ ಮಾದರಿಗಳನ್ನು ಸಂಗ್ರಹಿಸಿದ್ದು, ಪರಿಶೀಲನೆ ನಡೆಸಿದೆ. ಜಿಎಸ್‌ಐ ಭಾರತ ಸರ್ಕಾರಕ್ಕೆ ವರದಿ ನೀಡಿದೆ.- ರಾಜೇಶ್, ಹಿರಿಯ ಭೂ ವಿಜ್ಞಾನಿ