ಕನ್ನಡಪ್ರಭ ವಾರ್ತೆ ಮೇಲುಕೋಟೆ
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ಭಾನುವಾರ ಚೆಲುವನಾರಾಯಣಸ್ವಾಮಿ ದರ್ಶನ ಪಡೆದು ಭಾವುಕರಾಗಿ ಹಾಡನ್ನು ಹಾಡಿ ಭಕ್ತಿಯಿಂದ ಚೆಲುವನಾರಾಯಣನ ಪಾದಾರವಿಂದಕ್ಕೆ ಸಮರ್ಪಿಸುತ್ತಿರುವುದಾಗಿ ತಿಳಿಸಿದರು.ಚೆಲುವನಾರಾಯಣಸ್ವಾಮಿ ದಿವ್ಯಮಂಗಳ ರೂಪದ ದರ್ಶನ ಪಡೆದು ಧನ್ಯತಾಭಾವ ಅನುಭವಿಸಿದ್ದೇನೆ. ದೇವರ ದರ್ಶನ ಭಾಗ್ಯದಿಂದ ನನ್ನಲ್ಲಿ ದೈವೀಕ ಭಾವನೆ ಸೃಷ್ಟಿಯಾಗಿದೆ. ಮತ್ತೊಮ್ಮೆ ಮೇಲುಕೋಟೆ ಬರುತ್ತೇನೆ. ಇಂದಿನ ಭೇಟಿ ಅತ್ಯಂತ ಸಂತಸ ನೀಡಿದೆ ಎಂದರು.
ಮಧ್ಯಾಹ್ನ ಮೇಲುಕೋಟೆಗೆ ಆಗಮಿಸಿದ ಮಹಿಳಾ ಆಯೋಗದ ಅಧ್ಯಕ್ಷರನ್ನು ದೇವಾಲಯ ಕಾರ್ಯನಿರ್ವಾಹಕ ಅಧಿಕಾರಿ ಶೀಲ ಪುಷ್ಪಹಾರ ಹಾಕಿ ಆತ್ಮೀಯವಾಗಿ ಬರಮಾಡಿಕೊಂಡರು. ದೇವಾಲಯದ ಪಾರುಪತ್ತೇಗಾರ್ ಮತ್ತು ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿ ಚೆಲುವನಾರಾಯಣಸ್ವಾಮಿ ಮಹಾಲಕ್ಷ್ಮಿ, ರಾಮಾನುಜರ ದರ್ಶನ ಮಾಡಿಸಿ ರಾಮಾನುಜರ ಕರ್ಮಭೂಮಿಯಾದ ಶ್ರೀಕ್ಷೇತ್ರದ ಮಾಹಿತಿ ನೀಡಿದರು.ದೇವರ ದರ್ಶನ ಮುಗಿಸಿ ರಾಮಾನುಜಾಚಾರ್ಯರೇ ಸಾಕ್ಷಾತ್ ಬಿಕ್ಷೆ ಸ್ವೀಕರಿಸುತ್ತಿದ್ದ ಇತಿಹಾಸವಿರುವ ಯತಿರಾಜದಾಸರ್ ಗುರುಪೀಠಕ್ಕೆ ಭೇಟಿ ನೀಡಿದ ಡಾ.ನಾಗಲಕ್ಷ್ಮಿ ವಿಜಯಲಕ್ಷ್ಮಿ ಅಮ್ಮನವರ ದರ್ಶನ ಪಡೆದು ಸ್ಥಾನಾಚಾರ್ಯ ಶ್ರೀನಿವಾಸನರಸಿಂಹನ್ ಗುರೂಜಿಯಿಂದ ಆಶೀರ್ವಾದ ಪಡೆದರು.
ಈ ವೇಳೆ ಅಧ್ಯಕ್ಷರನ್ನು ಪ್ರಸಾದ ನೀಡಿ ಮಾಲೆಮರ್ಯಾದೆ ಮಾಡಿ ಗೌರವಿಸಲಾಯಿತು. ಶತಮಾನದ ಸರ್ಕಾರಿ ಶಾಲೆ ಬಗ್ಗೆಯೂ ಮಾಹಿತಿ ಪಡದ ಅಧ್ಯಕ್ಷರು ಶತಮಾನದ ಶಾಲಾಭಿವೃದ್ಧಿಗೆ ಸಹಕಾರ ನೀಡುವ ಜೊತೆಗೆ ಶಾಲೆಗೂ ಭೇಟಿ ನೀಡುತ್ತೇನೆ ಎಂದರು.
ಈ ವೇಳೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಗೋವಿಂದೇಗೌಡ, ತಹಶೀಲ್ದಾರ್ ಆದರ್ಶ, ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕನಗೋನಹಳ್ಳಿ ಪರಮೇಶ್‌ಗೌಡ, ಸದಸ್ಯರಾದ ಪುಟ್ಟಸ್ವಾಮಿಗೌಡ, ಬಚ್ಚಿಕೊಪ್ಪಲು ರಾಜು ಇದ್ದರು. ಸೆಲ್ಫಿಗಾಗಿ ಮುಗಿ ಬಿದ್ದ ಭಕ್ತರು, ಸಾರ್ವಜನಿಕರುಮೇಲುಕೋಟೆ: ಭಕ್ತರು ಹಾಗೂ ದೇವಾಲಯದ ಸಿಬ್ಬಂದಿ ಮತ್ತು ವ್ಯವಸ್ಥಾಪನಾ ಸಮಿತಿಯವರು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿಚೌಧರಿ ಭಾನುವಾರ ಚೆಲುವನಾರಾಯಣಸ್ವಾಮಿ ದರ್ಶನ ಪಡೆದ ವೇಳೆ ಅವರೊಡನೆ ಭಕ್ತರು, ಸಾರ್ವಜನಿಕರು ಫೋಟೋ ಮತ್ತು ಸೆಲ್ಫಿಗಾಗಿ ಮುಗಿಬಿದ್ದರು. ಚಲನಚಿತ್ರ ತಾರೆಯರೊಂದಿಗೆ ಫೋಟೋಗಾಗಿ ಮುಗಿಬೀಳುವ ಮಾದರಿಯಲ್ಲೇ ಭಕ್ತರು ಕ್ಲಿಕ್ಕಿಸಿಕೊಳ್ಳಲು ಪರದಾಡಿದರು. ಸಾಕಷ್ಟು ಭಕ್ತರು ಅಭಿಮಾನಿಗಳೊಂದಿಗೆ ಕಾರು ಹತ್ತಿ ತೆರಳುವವರೆಗೆ ತಾಳ್ಮೆಯಿಂದಲೇ ಫೋಟೋ ತೆಗೆಸಿಕೊಂಡ ಅಧ್ಯಕ್ಷರು ಎಲ್ಲರಿಗೂ ಶುಭಕೋರಿ ತೆರಳಿದರು.