ಕನ್ನಡಪ್ರಭ ವಾರ್ತೆ ಮದ್ದೂರು

ಮಂಡ್ಯ ಜಿಲ್ಲೆಯನ್ನು ಬರಪೀಡಿತ ಎಂದು ಘೋಷಣೆ ಮಾಡುವಂತೆ ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಸೂಚನೆ ನೀಡುವಂತೆ ಕಸ್ತೂರಿ ಕರ್ನಾಟಕ ಜನಪದ ವೇದಿಕೆ ಕಾರ್ಯಕರ್ತರು ಕೇಂದ್ರ ಬೃಹತ್ ಕೈಗಾರಿಕೆ ಮತ್ತು ಉಕ್ಕು ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.ತಾಲೂಕಿನ ಚಾಮನಹಳ್ಳಿ ಹಾಗೂ ಮಂಡ್ಯದ ಖಾಸಗಿ ಕಾರ್ಯಕ್ರಮದಲ್ಲಿ ಭಾನುವಾರ ಭಾಗವಹಿಸಲು ಆಗಮಿಸಿದ್ದ ಕೇಂದ್ರ ಸಚಿವರನ್ನು ಕಜವೇ ಅಧ್ಯಕ್ಷ ವಿ.ಸಿ.ಉಮಾಶಂಕರ್ ನೇತೃತ್ವದಲ್ಲಿ ಕಾರ್ಯಕರ್ತರ ತಂಡ ಭೇಟಿ ಮಾಡಿ ಮನವಿ ಸಲ್ಲಿಸಿದರು.

ಈ ಬಾರಿ ಮುಂಗಾರು ಮಳೆ ಅಭಾವದಿಂದ ಕೆಆರ್‌ಎಸ್ ಜಲಾಶಯ ಹಾಗೂ ಜಿಲ್ಲೆಯ ಕೆರೆಕಟ್ಟೆಗಳು ಬರಿದಾಗಿದೆ. ಇದರಿಂದ ರೈತರ ಬೆಳೆದ ಕಬ್ಬು, ರಾಗಿ, ತೆಂಗು, ಬಾಳೆ ಹಾಗೂ ಹಿಪ್ಪ ನೇರಳೆ ಬೆಳೆಗಳು ನೀರಿನ ಅಭಾವದಿಂದ ಒಣಗುವ ಹಂತಕ್ಕೆ ಬಂದಿದೆ ಎಂದು ಕಾರ್ಯಕರ್ತರು ರೈತರ ಪರವಾಗಿ ಅಳಲು ತೋಡಿಕೊಂಡರು.

ಸಕಾಲದಲ್ಲಿ ಮುಂಗಾರು ಮಳೆ ಆರಂಭವಾಗಿದ್ದರೆ ರೈತರ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳವ ಎಲ್ಲಾ ಅವಕಾಶಗಳು ಇತ್ತು. ಆದರೆ, ಮಳೆ ಕೊರತೆಯಿಂದಾಗಿ ಬೆಳೆ ನಷ್ಟವಾಗಿ ಆರ್ಥಿಕ ನಷ್ಟ ಎದುರಿಸುವಂತಾಗಿದೆ. ಹೀಗಾಗಿ ತಾವು ಸರ್ಕಾರ ಹಾಗೂ ಜಿಲ್ಲಾಡಳಿತದೊಂದಿಗೆ ಚರ್ಚೆ ನಡೆಸಿ ಜಿಲ್ಲೆಯನ್ನು ಬರಪೀಡಿತ ಪ್ರದೇಶ ಎಂದು ಘೋಷಿಸುವ ಜೊತೆಗೆ ಬೆಳೆ ನಷ್ಟ ಪರಿಹಾರ ನೀಡುವಂತೆ ಒತ್ತಾಯ ಪಡಿಸುವಂತೆ ಕಾರ್ಯಕರ್ತರು ಮನವಿ ಮಾಡಿದರು.

ಜಿಲ್ಲೆಯ ಸಕ್ಕರೆ ಕಾರ್ಖಾನೆಗಳು ರೈತರಿಗೆ ಕೊಡಬೇಕಾದ 50 ರು. ಸಹಾಯಧನ ಇನ್ನೂ ನೀಡಿಲ್ಲ ಹಾಗೂ ಕಾರ್ಖಾನೆಗಳ ಮಾಲೀಕರು ಕಾರ್ಖಾನೆ ಪ್ರಾರಂಭಿಸದೇ ಕಾರಣ ಬೆಳೆದು ನಿಂತ ಕಬ್ಬು ಒಣಗುವಂತಕ್ಕೆ ಬಂದಿದೆ. ಆದರೆ, ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಸಕ್ಕರೆ ಆಯುಕ್ತರ ಆದೇಶವಿಲ್ಲದೆ ಕಾರ್ಖಾನೆ ಆರಂಭಿಸಿದಂತೆ ಮಾಲೀಕರಿಗೆ ಪತ್ರ ಬರೆದಿರುವುದು ಖಂಡನೀಯ ಎಂದು ದೂರು ನೀಡಿದರು.


ತಾವು ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕಾರ್ಖಾನೆಗಳ ಮಾಲೀಕರ ಸಭೆ ನಡೆಸಿ ಸಮಸ್ಯೆ ಬಗೆಹರಿಸುವಂತೆ ಸೂಚನೆ ನೀಡುವಂತೆ ಮನವಿ ಮಾಡಿದರು. ಜಿಲ್ಲೆಯಲ್ಲಿ ವಿದ್ಯಾವಂತ ಯುವಕರಿಗೆ ಉದ್ಯೋಗವಿಲ್ಲದೆ ದಿನೇ ದಿನೇನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಜಿಲ್ಲೆಯಲ್ಲಿ ಬೃಹತ್ ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.

ಈ ವೇಳೆ ವೇದಿಕೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ಸಿ.ಲಿಂಗರಾಜು, ಮುಖಂಡರಾದ ರಮೇಶ್, ಮಹೇಶ್, ವೀರಪ್ಪ, ನಾಗಣ್ಣ, ನಿರಂಜನ್ ಮತ್ತಿತರರು ಇದ್ದರು.