ಕನ್ನಡಪ್ರಭ ವಾರ್ತೆ ಹಲಗೂರು
ನಿಮ್ಮ ಮಕ್ಕಳ ಭವಿಷ್ಯ ರೂಪಿಸುತ್ತಿರುವ ಸರ್ಕಾರಿ ಶಾಲೆಗಳನ್ನು ಉಳಿಸಿ, ಬೆಳೆಸಲು ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕರೆ ನೀಡಿದರು.ಗುಂಡಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ನೂತನವಾಗಿ (ಬಿಓಎಸ್ ಸಿಎಚ್) ಬಾಸ್ಚ್ ಕಂಪನಿಯು ಸಿಎಸ್‌ಆರ್ ಅನುದಾನದ ಅಡಿ 30 ಲಕ್ಷ ರು. ವೆಚ್ಚದಲ್ಲಿ ನಿರ್ಮಿಸಿ ಕೊಟ್ಟಿರುವ ಮೂರು ಕೊಠಡಿಗಳು, ಅಡುಗೆ ಮನೆ, ಶೌಚಾಲಯಗಳು ಹಾಗೂ ಗಗನಚುಕ್ಕಿ ಸಭಾಂಗಣ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರತಿಯೊಂದು ಸರ್ಕಾರಿ ಶಾಲೆಗಳಲ್ಲಿ ಬಿಸಿ ಊಟ ತಯಾರಿಸಲು ಸುಸಜ್ಜಿತ ಅಡಿಗೆ ಮನೆ ಮತ್ತು ಶೌಚಾಲಯ ಸೌಲಭ್ಯ ನೀಡಿ ವಿದ್ಯಾರ್ಥಿಗಳ ಆರೋಗ್ಯ ಮತ್ತು ಶುಚಿತ್ವಕ್ಕೆ ಮಾನ್ಯತೆ ನೀಡಲಾಗುತ್ತಿದೆ. ಖಾಸಗಿ ಶಾಲೆಗಳಿಗಿಂತ ಉನ್ನತ ಶಿಕ್ಷಣ ನಮ್ಮ ಸರ್ಕಾರಿ ಶಾಲೆಗಳಲ್ಲೂ ಸಿಗುತ್ತಿದೆ ಎಂದರು.
ಪೋಷಕರು ತಮ್ಮ ಮಕ್ಕಳನ್ನು ಪ್ರಾಥಮಿಕ ಮತ್ತು ಪ್ರೌಢ ಶಾಲಾ ಹಂತದ ವಿದ್ಯಾಭ್ಯಾಸಕ್ಕಾಗಿ ಖಾಸಗಿ ಶಾಲೆಗಳಿಗೆ ಸೇರಿಸಿ ವರ್ಷಕ್ಕೆ 30 ಸಾವಿರದಿಂದ ಲಕ್ಷ ರುವರೆಗೆ ಹೆಚ್ಚು ಖರ್ಚು ಮಾಡುವ ಹಣವನ್ನು ನಿಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಉಳಿತಾಯ ಮಾಡಿ ಸರ್ಕಾರಿ ಶಾಲೆಗಳಿಗೆ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಮಳವಳ್ಳಿ ತಾಲೂಕಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ವ್ಯವಸ್ಥೆಯನ್ನು ಡಿಜಿಟಲೀಕರಣ ಮಾಡಿರುವುದರಿಂದ ಮಕ್ಕಳಲ್ಲಿ ಈಗ ಕಲಿಕ ವೇಗ ಹೆಚ್ಚಾಗಿದೆ. ಶಿಕ್ಷಕರು ಒಂದು ವರ್ಷದಲ್ಲಿ ಬೋಧಿಸುವ ಪಾಠವನ್ನು ಮೂರು ತಿಂಗಳಲ್ಲಿ ಮುಗಿಸಬಹುದಾಗಿದೆ. ಮಕ್ಕಳಲ್ಲಿ ಕಲಿತಿದ್ದನ್ನು ಪುನರಾವರ್ತನೆ ಮಾಡಿಕೊಳ್ಳಲು ಹೆಚ್ಚು ಸಮಯಾವಕಾಶವಿದೆ. ನಮ್ಮ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಆಧುನಿಕ ಶಿಕ್ಷಣ ಜಗತ್ತಿನಲ್ಲಿ ಪಟ್ಟಣ ಪ್ರದೇಶದ ಖಾಸಗಿ ಶಾಲೆ ವಿದ್ಯಾರ್ಥಿಗಳಿಗೆ ಪೈಪೋಟಿ ನಡೆಸುವಲ್ಲಿ ಈಗ ಸಮರ್ಥರಾಗಿದ್ದಾರೆ ಎಂದರು.
ಬಾಸ್ಚ್(Bosch) ಕಂಪನಿಯ ಡಾ.ಪುಂಡಲೀಕ ಕಾಮತ್ ಅವರು ನೂತನವಾಗಿ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ಅದನ್ನು ನಿಮ್ಮ ಮನೆ ಎಂದು ತಿಳಿದುಕೊಂಡು ಸ್ವಚ್ಛತೆ ಕಾಪಾಡುವ ಮುಖಾಂತರ ಶಾಲೆ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿ ಎಂದರು.
ಈ ವೇಳೆ ಕಂಪನಿಯ ಸುದರ್ಶನ್, ಪ್ರಕಾಶ್, ಕಂಟ್ರಾಕ್ಟರ್ ಗಳಾದ ಸಂತೋಷ್, ಕೃಷ್ಣಮೂರ್ತಿ, ಬಿಇಒ ವಿ.ಇ.ಉಮಾ, ಬಿಆರ್ ಸಿ ಎಂ.ಕೆ.ಶ್ರೀನಿವಾಸ್, ಅಕ್ಷರ ದಾಸೋಹ ನಿರ್ದೇಶಕ ಮಹದೇವು, ಎಸ್ ಆರ್ ಪಿಯು ಬಾಬು, ಸಿಆರ್‌ಪಿಗಳಾದ ಕೃಷ್ಣ, ತಿಮ್ಮಯ್ಯ, ಚಂದ್ರಶೇಖರ್, ಮುಖ್ಯ ಶಿಕ್ಷಕ ಬಸವರಾಜು ಶಿಕ್ಷಕಿ ಜಯಮ್ಮ, ಜಿಪಂ ಮಾಜಿ ಸದಸ್ಯ ಚಂದ್ರಕುಮಾರ್ ಸೇರಿದಂತೆ ಗ್ರಾಮದ ಮುಖಂಡರು ಮತ್ತು ಇತರರು ಇದ್ದರು.