ಕನ್ನಡಪ್ರಭ ವಾರ್ತೆ ಪಾಂಡವಪುರ
ತಾಲೂಕಿನ ಶ್ರೀರಾಮಯೋಗೀಶ್ವರ ಮಠಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮ್ಮ ಕುಟುಂಬ ಸದಸ್ಯರೊಂದಿಗೆ ಭೇಟಿ ಕ್ಷೇತ್ರದ ಆರಾಧ್ಯ ದೈವ ಮಲೆ ಮಹದೇಶ್ವರಸ್ವಾಮಿ ಹಾಗೂ ಲಿಂಗೈಕ್ಯ ಸದಾಶಿವ ಸ್ವಾಮೀಜಿ ಅವರ ಗದ್ದುಗೆಗೆ ಪೂಜೆ ಸಲ್ಲಿಸಿ ನಮಸ್ಕರಿಸಿದರು.ಕಾರ್ಯನಿಮಿತ್ತ ಕೆ.ಆರ್.ಪೇಟೆ ತಾಲೂಕಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ವಾಪಸ್ಸು ಬೆಂಗಳೂರಿಗೆ ಹಿಂದಿರುಗುವಾಗ ಮಾರ್ಗ ಮಧ್ಯೆದ ರಾಮಯೋಗೀಶ್ವರ ಮಠಕ್ಕೆ ಭೇಟಿ ನೀಡಿ ಮಠದ ಪೀಠಾಧ್ಯಕ್ಷ ಶಿವಬಸವ ಸ್ವಾಮೀಜಿ ಅವರ ಆಶೀರ್ವಾದ ಪಡೆದರು.
ಮಾಜಿ ಮುಖ್ಯಮಂತ್ರಿಗಳನ್ನು ಆತ್ಮೀಯವಾಗಿ ಬರಮಾಡಿಕೊಂಡು ಸನ್ಮಾನಿಸಿದ ಶ್ರೀಗಳು, ಲಿಂಗೈಕ್ಯ ತ್ರಿವಿಧ ದಾಸೋಹಿ ಡಾ.ಶಿವಕುಮಾರ್ ಶ್ರೀಗಳಿಗೆ ಯಡಿಯೂರಪ್ಪನವರು ನಮಸ್ಕರಿಸುತ್ತಿರುವ ಭಾವಚಿತ್ರವುಳ್ಳ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.ನೆನಪಿನ ಕಾಣಿಕೆ ಸ್ವೀಕರಿಸಿದ ಬಿಎಸ್‌ವೈ, ಅದನ್ನು ಕಣ್ಣಿಗೆ ಒತ್ತಿಕೊಂಡು ಭಾವುಕರಾಗಿ ಭಾವಚಿತ್ರವನ್ನು ಕೆಲಕಾಲ ನೋಡಿದರು. ತಮ್ಮ ಅಂಗರಕ್ಷಕರು ಅದನ್ನು ಪಡೆಯಲು ಮುಂದಾದರು. ಕೊಡದೆ ತಾವೇ ಅದನ್ನು ಹಿಡಿದುಕೊಂಡು ಸ್ವಲ್ಪ ಸಮಯದ ಬಳಿಕ ಅಂಗರಕ್ಷಕರಿಗೆ ನೀಡಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಇಂದ್ರೇಶ್, ನೀರು ಮಹಾ ಮಂಡಳದ ರಾಜ್ಯ ಉಪಾಧ್ಯಕ್ಷ ಆರ್.ಎ.ನಾಗಣ್ಣ ಯಡಿಯೂರಪ್ಪ ಅವರನ್ನು ಸನ್ಮಾನಿಸಿದರು.
ಈ ವೇಳೆ ಯಡಿಯೂರಪ್ಪರ ಪುತ್ರಿಯರಾದ ಅರುಣ, ಪದ್ಮ ಸೊಸೆ ಪ್ರೇಮ, ಹಾಗೂ ಸಹೋದರಿ ಪುತ್ರ ಆಶೋಕ್, ತಾಲೂಕು ವೀರಶೈವ ಮಹಾ ಸಭಾ ಉಪಾಧ್ಯಕ್ಷೆ ಮೀನಾಕ್ಷಿ ಮಾದಪ್ಪ, ಎಂ.ಎಸ್.ಮಂಜುನಾಥ್, ಕೆ.ಎಲ್.ಆನಂದ್, ಶಂಕರನಂಜಪ್ಪ, ಕಲಿಗಣೇಶ್, ದ್ಯಾವಪ್ಪ ಸುತ್ತಮುತ್ತಲಿನ ಮಠದ ಭಕ್ತರು ಇತರರು ಇದ್ದರು.
ನಮ್ಮೂರಿನ ಜನರ ಪ್ರೀತಿ, ಆಶೀರ್ವಾದದಿಂದ ಈ ಮಟ್ಟಕ್ಕೆ ಬೆಳೆದಿದ್ದೇನೆ: ಯಡಿಯೂರಪ್ಪಕೆ.ಆರ್.ಪೇಟೆ:ಬೂಕನಕೆರೆ ನನ್ನ ಹುಟ್ಟೂರು. ನಮ್ಮ ತಂದೆ ತಾಯಿರು ಜೀವಿಸಿದ್ದ ಸ್ಥಳ. ನಮ್ಮೂರಿನ ಜನರ ಪ್ರೀತಿ, ಆಶೀರ್ವಾದದಿಂದಲೆ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.ಹುಟ್ಟೂರಿನಲ್ಲಿ ಮನೆ ದೇವರುಗಳ ಪೂಜೆ ಸಲ್ಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮಸ್ಥರ ಅನುಕೂಲಕ್ಕಾಗಿ ಈ ಸಮುದಾಯ ಭವನ ನಿರ್ಮಿಸಲಾಗಿದೆ. ಮದುವೆ, ಶುಭ ಸಮಾರಂಭ, ಸಭೆ-ಸಮಾರಂಭಗಳಿಗೆ ಇದನ್ನು ಸದುಪಯೋಗಪಡಿಸಿಕೊಳ್ಳಿ. ಗ್ರಾಮದ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ ಎಂದರು.
ಬಿಜೆಪಿ ಪಕ್ಷವು ನಿಮ್ಮೂರಿನ ಮಗನಿಗೆ ಎಲ್ಲಾ ಸ್ಥಾನಗಳನ್ನು ಕೊಟ್ಟಿದೆ. ನಾನು ಎಲ್ಲಿದ್ದರೂ ಕೂಡಾ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ನನ್ನ ನಿರೀಕ್ಷೆಗೆ ತಕ್ಕಂತೆ ಬೂಕನಕೆರೆ ಗ್ರಾಮವು ಅಭಿವೃದ್ಧಿಯಾಗಿಲ್ಲ. ನನ್ನ ಮನೆ ದೇವರ ದೇಗುಲವು ಕೂಡಾ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ ಎಂದರು.ಮುಂದೆ ನಮ್ಮ ಬಿಜೆಪಿ ಸರ್ಕಾರ ಬರುತ್ತದೆ. ನಂತರದ ದಿನಗಳಲ್ಲಿ ಇನ್ನೂ ಹೆಚ್ಚಿನ ಅನುದಾನ ಒದಗಿಸಿ ಜನರ ಪ್ರೀತಿಯ ಋಣ ತೀರಿಸುತ್ತೇನೆ. ನಾನು ಈ ದಿನ ಬಂದಿರುವುದು ರಾಜಕಾರಣದ ಸಭೆಗಲ್ಲ. ಧಾರ್ಮಿಕ ಕಾರ್ಯಕ್ರಮಕ್ಕೆ ಆದ್ದರಿಂದ ರಾಜಕಾರಣ ಪ್ರಶ್ನೆಗಳಿಗೆ ಉತ್ತರಿಸುವುದಿಲ್ಲ. ನಮ್ಮ ರಾಜ್ಯಕ್ಕೆ ಉತ್ತಮವಾಗಿ ಮಳೆ ಬೆಳೆಯಾಗಬೇಕಿದೆ. ಇದನ್ನು ಭಗವಂತನಲ್ಲಿ ಕೇಳಿಕೊಂಡಿದ್ದೇನೆ ಎಂದರು.