ಹುಬ್ಬಳ್ಳಿ:
ಸುದ್ದಿಗೋಷ್ಠಿಯಲ್ಲಿ ದಾಖಲೆಯ ಸಿಡಿ ಬಿಡುಗಡೆ ಮಾಡಿದ ಅವರು, ಅವ್ಯವಹಾರ ಹೇಗೆ ಆಗಿದೆ ಎಂಬುದನ್ನು ತಿಳಿಸಿದರು.
ಆಗಿದ್ದೇನು?2008-09ರಲ್ಲಿ ಉಂಟಾದ ಅತಿವೃಷ್ಟಿಯಿಂದ ಮಲಪ್ರಭಾ ನದಿ ಅಚ್ಚುಕಟ್ಟು ಪ್ರದೇಶ ಜಲಾವೃತವಾಗಿ ಸಾಕಷ್ಟು ಹಾನಿಯಾಗಿತ್ತು. ಆಗ ಸರ್ಕಾರ ಡಾ. ಪರಮಶಿವಯ್ಯ ನೇತೃತ್ವದಲ್ಲಿ ಆಯೋಗ ರಚಿಸಿ ಅಧ್ಯಯನ ಮಾಡಿಸಿತ್ತು. ಆಗ ಆಯೋಗವು ನದಿಯಿಂದ 7 ಟಿಎಂಸಿ ನೀರು ಕಾಲುವೆಯಿಂದ ಸೋರಿಕೆಯಾಗಿ ಹಾನಿಯಾಗಿದೆ ಎಂದು ವರದಿ ನೀಡಿತ್ತು. ಬಳಿಕ ನದಿಯ ಬಲ-ಎಡ ಕಾಲುವೆ ನವೀಕರಣಕ್ಕೆ ಸರ್ಕಾರ ₹ 450 ಕೋಟಿ ಡಿಪಿಆರ್ ಸಿದ್ಧಪಡಿಸಿದ್ದರೂ ಕಾಮಗಾರಿ ಆರಂಭಿಸಲಿಲ್ಲ. 2015-16ರಲ್ಲಿ ಅದನ್ನು ₹ 1250 ಕೋಟಿಗೆ ಡಿಪಿಆರ್ ಪರಿಷ್ಕರಿಸಲಾಗಿತ್ತು. ಇಷ್ಟೋಂದು ಹಣವೇಕೆ ಎಂದು ವಿಪಕ್ಷ ಆಕ್ಷೇಪಿಸಿತ್ತು. ಬಳಿಕ ಅದೇ ವರ್ಷ ₹ 2168.39 ಕೋಟಿಗೆ ನಿಗದಿಯಾಗಿ ಕಾಮಗಾರಿಗೆ ಚಾಲನೆ ದೊರೆಯಿತು ಎಂದು ಸೊಬರದಮಠ ವಿವರಿಸಿದರು.
ನವೀಕರಣ ಕಾಮಗಾರಿ ಆರಂಭದ ವೇಳೆಯೇ ಮಹದಾಯಿ ಹೋರಾಟ ಆರಂಭಿಸಿದ್ದರಿಂದ ಕಾಮಗಾರಿಯತ್ತ ಗಮನ ಹರಿಸಲಿಲ್ಲ. ಬಳಿಕ ಮಾಹಿತಿ ಕೇಳಿದರೂ ಅಧಿಕಾರಿಗಳು ನೀಡಲಿಲ್ಲ. ಆಗ ಹೋರಾಟ ಮಾಡಿ ದಾಖಲೆ ಪಡೆದುಕೊಂಡೆವು. ದಾಖಲೆ ಪರಿಶೀಲಿಸಿದಾಗ ಕಾಮಗಾರಿ ಕಳಪೆಯಾಗಿರುವುದು ಬೆಳಕಿಗೆ ಬಂದಿತು. ಕಾಲುವೆ ನವೀಕರಣ ಹಣದಲ್ಲಿಯೇ ನವಲಗುಂದ, ನರಗುಂದ, ಮೊರಬ, ಧಾರವಾಡದಲ್ಲಿ ಐಬಿ, ನವಲಗುಂದ ಹಾಗೂ ಧಾರವಾಡದಲ್ಲಿ ನೀರಾವರಿ ನಿಗಮದ ಸಿಬ್ಬಂದಿಗಳ ವಾಸಕ್ಕೆ ವಸತಿ ಕಟ್ಟಡ ನಿರ್ಮಿಸಲಾಗಿದೆ. ಈ ಕಾಮಗಾರಿಯೂ ಸಮರ್ಪಕವಾಗಿಲ್ಲ. ಹಾಗೆ ನೋಡಿದರೆ ಕ್ವಾಟರ್ಸ್, ಐಬಿ ನಿರ್ಮಿಸುವ ಅಧಿಕಾರವೇ ಇಲ್ಲ ಎಂದು ದೂರಿದರು.
ಲೋಕಾಯುಕ್ತಕ್ಕೆ ದೂರು:ಅವ್ಯವಹಾರದ ಕುರಿತು ಲೋಕಾಯುಕ್ತಕ್ಕೆ ದೂರು ನೀಡದ ಬಳಿಕ 2025ರಲ್ಲಿ 3 ದಿನ ತನಿಖೆ ನಡೆಸಲು ಯೋಗೇಶ ಎಂಬುವರನ್ನು ನೇಮಿಸಲಾಗಿತ್ತು. ಅವರು ಮೊದಲು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಬಳಿಕ ನೀವು ನಿಗಮದ ಅಧಿಕಾರಿಗಳೊಂದಿಗೆ ಮಾತನಾಡಿ ತಿಳಿಸಿದರೆ ತನಿಖೆ ಬಗ್ಗೆ ನೋಡಿಕೊಂಡು ವರದಿ ಸಲ್ಲಿಸುವುದಾಗಿ ಹೇಳಿದ್ದರು. ಈ ಮೂಲಕ ಹೊಂದಾಣಿಕೆಯಾಗಿ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದರು ಎಂದು ಸೊಬರದಮಠ ಹೇಳಿದರು.
ಸಂಧಾನಕ್ಕೆ ಯತ್ನ, ಆಮಿಷ:ಈ ನಡುವೆ ನಿಗಮದ ಆಗಿನ ಅಧೀಕ್ಷಕ ಅಭಿಯಂತರು ಸಂಧಾನಕ್ಕೆ ಯತ್ನಿಸಿ ನಮಗೆ ಆಮಿಷ ಕೂಡ ನೀಡಿದ್ದರು. ಇಷ್ಟರೊಳಗೆ ಲೋಕಾಯುಕ್ತ ನೇಮಿಸಿದ್ದ ಅಧಿಕಾರಿ ಅವ್ಯವಹಾರ ಆಗಿಲ್ಲವೆಂದು ವರದಿ ನೀಡಿದ್ದಾರೆ. ಅವ್ಯವಹಾರವಾಗಿಲ್ಲ ಎಂದರೆ ಮತ್ತೇಕೆ ನಮ್ಮನ್ನು ಸಂಧಾನಕ್ಕೆ ನಿಗಮದ ಅಧಿಕಾರಿಗಳು ಕರೆದಿದ್ದರು ಎಂದು ಲೋಕಾಯುಕ್ತರಿಗೆ ಕೇಳಿದ್ದೇವೆ. ಹೀಗಾಗಿ ಈ ತಿಂಗಳಾಂತ್ಯದಲ್ಲಿ ಮತ್ತೊಮ್ಮೆ ಲೋಕಾಯುಕ್ತಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ತಂಡ ರಚಿಸಿ- ತನಿಖೆ ನಡೆಸಿ:ಲೋಕಾಯುಕ್ತಕ್ಕೆ ಮನವಿ ಸಲ್ಲಿಸಿ ನಿವೃತ್ತ ಎಂಜಿನಿಯರ್‌ಗಳ 5 ಜನರ ತಂಡ ರಚಿಸಿ 10 ದಿನ ತನಿಖೆ ನಡೆಸಬೇಕು. ತಮಗೆ ಆಮಿಷ ಒಡ್ಡಿದವರ ವಿರುದ್ಧ ಕ್ರಮವಾಗಬೇಕು ಎಂದು ಸೊಬರದಮಠ ಆಗ್ರಹಿಸಿದರು.
ಒಂದು ವೇಳೆ ಲೋಕಾಯುಕ್ತದಿಂದ ಸ್ಪಂದನೆ ಸಿಗದಿದ್ದಲ್ಲಿ ಪಿಐಎಲ್ ಸಲ್ಲಿಸುವ ಮೂಲಕ ಹೈಕೋರ್ಟ್ ಮೊರೆ ಹೋಗಲಾಗುವುದು ಎಂದ ಅವರು, ಅವ್ಯವಹಾರದ ದಾಖಲೆಯನ್ನು ಮುಖ್ಯಮಂತ್ರಿಗೆ ನೀಡಿದರೂ ಕ್ರಮವಹಿಸಿಲ್ಲವೆಂದು ದೂರಿದರು.ಸುದ್ದಿಗೋಷ್ಠಿಯಲ್ಲಿ ಗುರು ರಾಯನಗೌಡರ, ಮಲ್ಲಣ್ಣ ಅರಕಾರ, ಕರ್ಜಗಿಮಠ, ಶಿವಪ್ಪ ಹೊರಕೇರಿ, ರಮೇಶ ಗಡ್ಡೆನವರ, ಶಿವು ಬಡಿಗೇರ ಸೇರಿದಂತೆ ಹಲವರಿದ್ದರು.