ಕೊಪ್ಪಳ: ಇಂದಿನ ಯುಗದಲ್ಲಿ ಯುವಪೀಳಿಗೆ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿ ನಮ್ಮ ಸಂಸ್ಕೃತಿಯ ಹಿರಿಮೆ ಮರೆಯುತ್ತಿದ್ದಾರೆ.ನಮ್ಮ ಸಂಸ್ಕೃತಿಯ ಪಳೆಯುಳಿಕೆ ಉಳಿಯಬೇಕಾದರೆ ಪುಸ್ತಕದ ಮಾರು ಹೋಗಬೇಕಾದ ಅನಿವಾರ್ಯತೆ ಇದೆ ಎಂದು ಡಾ. ನಾಗಣ್ಣ ಕಿಲಾರಿ ಹೇಳಿದರು.
ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಿಟ್ನಾಳ ಕನ್ನಡ ವಿಭಾಗದಿಂದ ಹಿಟ್ನಾಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ನನ್ನ ಮೆಚ್ಚಿನ ಪುಸ್ತಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್ ಬಿಡಿ ಪುಸ್ತಕ ಹಿಡಿ ಎಂಬುದು ಸರ್ಕಾರದ ಸದಾಶಯವಾಗಿದೆ.ವಿದ್ಯಾರ್ಥಿಗಳ ಉತ್ತಮ ವ್ಯಕ್ತಿತ್ವ ನಿರ್ಮಾಣಕ್ಕೆ ಪುಸ್ತಕಗಳು ಸಹಕಾರಿಯಾಗಲಿವೆ ಎಂದರು.ಕಾರ್ಯಕ್ರಮದ ಆಶಯ ನುಡಿಗಳನ್ನಾಡಿದ ಸಂಚಾಲಕ ಡಾ. ನಿಂಗಪ್ಪ ಕಂಬಳಿ, ವಿದ್ಯಾರ್ಥಿಗಳ ಸರ್ವತೋಮುಖ ಏಳಿಗೆಗಾಗಿ ಪ್ರಾಧಿಕಾರವು ಹಾಕಿಕೊಂಡ ಮಹತ್ವಪೂರ್ಣ ಯೋಜನೆ ಇದಾಗಿದೆ.ಪ್ರಾಧಿಕಾರದ ಸದಾಶಯ ಈಡೇರಬೇಕಾದರೆ ಮನಸ್ಸು ಕೆಡಿಸುವ ಹಲವು ವಸ್ತು ಮೆಚ್ಚುವುದನ್ನು ಬಿಟ್ಟು ಪುಸ್ತಕ ಮೆಚ್ಚುವ ಕೆಲಸವಾಗಬೇಕು. ಕನ್ನಡ ಸಾಹಿತ್ಯ ಸಮೃದ್ಧವಾಗಿದ್ದು ಬಹಳಷ್ಟು ಪುಸ್ತಕಗಳು ಬದುಕಿಗೆ ದಾರಿ ದೀಪವಾಗಲಿವೆ ಎಂದರು.
ಕಾರ್ಯಕ್ರಮದ ವಿಶೇಷ ಉಪನ್ಯಾಸಕರಾಗಿ ಪಾಲ್ಗೊಂಡಿದ್ದ ಡಾ.ತಿಪ್ಪೇರುದ್ರ ಸಂಡೂರು ಮಾತನಾಡಿ, ಕನ್ನಡ ಸಾಹಿತ್ಯದ ಮಹತ್ವದ ಗ್ರಂಥ ಪರಿಚಯಿಸುತ್ತಾ ನಾವೆಲ್ಲ ಪುಸ್ತಕಗಳನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬೇಕು. ಇಂದು ಹಲವಾರು ಮಹನೀಯರ ಬದುಕಿನ ಏರಿಳಿತ ಗಮನಿಸಿದಾಗ ಅವರನ್ನು ಮಹತ್ವದ ಸ್ಥಾನದಲ್ಲಿರಿಸಿದ್ದು ಪುಸ್ತಕಗಳು ಎಂಬುದನ್ನು ನಾವು ಮರೆಯುವಂತಿಲ್ಲ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಬಸವರಾಜ ಟಿ.ಎಚ್. ಮಾತನಾಡಿ,ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗುವ ಅನಿವಾರ್ಯತೆ ಇದೆ.ಯುವಪೀಳಿಗೆಗಳು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕಾದರೆ ಇಂಥ ಕಾರ್ಯಕ್ರಮಗಳು ಸಹಕಾರಿಯಾಗಲಿವೆ.ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮದ ಸದುಪಯೋಗ ಪಡೆದು ಒಳ್ಳೆಯ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ನನ್ನ ಮೆಚ್ಚಿದ ಪುಸ್ತಕ ಅಭಿಪ್ರಾಯ ಮಂಡನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ವಿಜಯಲಕ್ಷ್ಮಿ,ದ್ವಿತೀಯ ಸ್ಥಾನ ಚೈತ್ರ ಹಾಗೂ ತೃತೀಯ ಸ್ಥಾನ ಪಡೆದ ಸಿಂಧು ಬಹುಮಾನ ನೀಡಲಾಯಿತು.
ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.ಉಪನ್ಯಾಸಕ ಚಿಗಟೇರಿ ಗಜೇಂದ್ರಗಡ ಎರ್ರಿಸ್ವಾಮಿ, ಕವಿತಾ, ಸೋಮನಾಥ, ವಿಶ್ವನಾಥ, ಆಂಜನೇಯ,ವೆಂಕಟೇಶ, ಪ್ರಿಯಾ ಮುಂತಾದವರು ಉಪಸ್ಥಿತರಿದ್ದರು. ಚಂದ್ರಶೇಖರ ನಿರೂಪಿಸಿದರು, ಕವಿತಾ ಪ್ರಾರ್ಥಿಸಿದರು, ಈರಯ್ಯ ವಕ್ಕುಂದಮಠ ಸ್ವಾಗತಿಸಿದರು ಹಾಗೂ ಪೂಜಾ ಸುಬೇದಾರ ವಂದಿಸಿದರು.