ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ, ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಬೆಳ್ತಂಗಡಿ ತಾಲೂಕಿನಲ್ಲಿ ಅನುಷ್ಠಾನವಾಗುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯ ಕಾಮಗಾರಿ ತಾಲೂಕಿನಲ್ಲಿ ಶೇ.೬೫ರಷ್ಟು ಪೂರ್ಣಗೊಂಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ.
ಒಟ್ಟು ೨೦೯ ಜನವಸತಿ ಪ್ರದೇಶಗಳಿಗೆ ನೀರು ಪೂರೈಕೆ ಮಾಡಲಾಗುವ ಯೋಜನೆ ಇದಾಗಿದೆ.೨೦೨೩ನೇ ಸಾಲಿನಲ್ಲಿ ಕಾಮಗಾರಿ ಪ್ರಾರಂಭಗೊಂಡಿದೆ. ಸುಮಾರು ೧೭೦ ಕೋಟಿ ರು.ವೆಚ್ಚದಲ್ಲಿ ಗ್ರಾಮೀಣ ನೀರು ಸರಬರಾಜು ಯೋಜನೆಯಡಿ ಅನುಷ್ಠಾನವಾಗುತ್ತಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಈಗಾಗಲೇ ಪೈಪ್ ಲೈನ್ ಕಾಮಗಾರಿ ನಡೆದಿದ್ದು, ಕೆಲವು ನಿಗದಿತ ಸ್ಥಳಗಳಲ್ಲಿ ಜಾಕ್‌ವೆಲ್ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ. ಬಹು ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆ ಇದಾಗಿದೆ.
ಸವಣೂರಿಂದ ಕಳೆಂಜಕ್ಕೆ ನೀರು:ಕುಮಾರಧಾರ ನದಿಯ ಶಾಂತಿಮೊಗೇರಿನಲ್ಲಿ ಡ್ಯಾಂ ಈಗಾಗಲೇ ನಿರ್ಮಾಣವಾಗಿದ್ದು, ಇದನ್ನು ಬಳಕೆ ಮಾಡಿಕೊಂಡು, ಸವಣೂರಿನ ಮಾಂತೂರಿನಲ್ಲಿ ನಿರ್ಮಾಣವಾಗಲಿರುವ ನೀರಿನ ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣ ಮಾಡಿ ಬೆಳ್ತಂಗಡಿ ತಾಲೂಕಿನ ಗ್ರಾಮದ ಕೊಕ್ಕಡ, ಪಟ್ರಮೆ, ನಿಡ್ಲೆ, ಕಳೆಂಜ ಗ್ರಾಮಗಳಿಗೂ ಶಾಂತಿಮೊಗೆರುವಿನಿಂದ ನೀರು ಸರಬರಾಜು ಆಗಲಿದೆ.
೧೧೧ ಟ್ಯಾಂಕ್‌ಗಳಿಗೆ ನೀರು ಪೂರೈಕೆ:೧೩ ಗ್ರಾಮ ಪಂಚಾಯತಿ ವ್ಯಾಪ್ತಿಯ ೨೧ ಗ್ರಾಮಗಳಿಗೆ ನೀರು ಸರಬರಾಜು ಮಾಡಲಾಗುತ್ತದೆ. ಡ್ಯಾಂ ನೀರು ಶುದ್ಧೀಕರಣ ಘಟಕದಲ್ಲಿ ಶುದ್ಧೀಕರಣವಾಗಿ ಪೂರೈಸಲಾಗುತ್ತದೆ. ಈ ಪೈಕಿ ಬಾರ್ಯದ ಕಾನ ಎಂಬಲ್ಲಿ ಆರು ಟ್ಯಾಂಕ್ ನಿರ್ಮಾಣವಾಗಲಿದ್ದು ಅದರಲ್ಲಿ ೨ ಟ್ಯಾಂಕ್ ಗಳ ಕಾಮಗಾರಿ ನಡೆದಿದೆ. ಶುದ್ದೀಕರಣಗೊಂಡ ನೀರು, ಒಂದು ಎಂಬಿಟಿ ಟ್ಯಾಂಕ್, ೫ ಝಡ್ ಬಿಟಿ ಟ್ಯಾಂಕ್ ಗಳಲ್ಲಿ ಶೇಖರಣೆಯಾಗಿ ಅಲ್ಲಿಂದ ಗ್ರಾಮ ಮಟ್ಟದಲ್ಲಿರುವ ಪಂಚಾಯಿತಿ ನೀರಿನ ಟ್ಯಾಂಕ್ ಹಾಗೂ ಜೆಜೆಎಂ ಟ್ಯಾಂಕ್ ಗಳಿಗೆ ಪೂರೈಸಲಾಗುತ್ತದೆ.ಇಳಂತಿಲ, ಬಾರ್ಯ, ತೆಕ್ಕಾರು, ತಣ್ಣೀರುಪಂತ, ಕಣಿಯೂರು, ಕಳಿಯ, ಬಂದಾರು, ಮಚ್ಚಿನ, ಮಡಂತ್ಯಾರು, ಮಲಾಡಿ, ಕುವೆಟ್ಟು, ಕೊಯ್ಯೂರು ಹಾಗೂ ಬೆಳಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯಾಗಲಿದೆ.
ನೀರಿನ ಸಮಸ್ಯೆಗೆ ಪರಿಹಾರ: ಈ ಯೋಜನೆಯಿಂದ ಬಹುತೇಕ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ದೊರೆಯಲಿದೆ. ರಸ್ತೆ ಬದಿ ಪೈಪ್ ಲೈನ್ ಅಳಡಿಸಲಾಗಿದೆ, ರಸ್ತೆ ಬದಿ ಮಣ್ಣು ಅಗೆದು ಹಾಕಿದ್ದು ಸಮರ್ಪಕವಾಗಿ ಅದನ್ನು ಸರಿಪಡಿಸಿಲ್ಲ ಎಂಬ ಕೂಗು ಕಾಮಗಾರಿ ಅನುಷ್ಠಾನ ಆಗುವ ಗ್ರಾಮದಲ್ಲಿ ಕೇಳಿ ಬಂದಿದೆ. ಕಾನದಲ್ಲಿ ನಿರ್ಮಾಣವಾಗುತ್ತಿರುವ ಟ್ಯಾಂಕ್ ಕಾಮಗಾರಿಗೆ ಅರಣ್ಯದ ಎನ್ ಒಸಿಯಿಂದ ಅಡ್ಡಿಯಾಗಿತ್ತು. ಆದರೆ ಸಮಸ್ಯೆಯನ್ನು ಪರಿಹಾರ ಕಾಣುವ ಹಂತದಲ್ಲಿದೆ. ಕಾಮಗಾರಿ ವೇಗವಾಗಿ ನಡೆದರೆ ಕುಡಿಯುವ ನೀರಿನ ವ್ಯವಸ್ಥೆ ಸುಲಭವಾಗಿದೆ.................ಬಾರ್ಯ ಗ್ರಾಮಪಂಚಾಯಿತಿ ವ್ಯಾಪ್ತಿಯ ಸರಳೀಕಟ್ಟೆಯ ಎಂಬಲ್ಲಿ ನೇತ್ರಾವತಿ ನದಿಗೆ ಬೃಹತ್ ಕಿಂಡಿ ಅಣೆಕಟ್ಟು ನಿರ್ಮಾಣವಾಗಿದ್ದು, ಒಟ್ಟು ೧೩ ಗ್ರಾಮ ಪಂಚಾಯತಿಗಳ ೨೧ ಗ್ರಾಮಗಳಿಗೆ ನೀರನ್ನು ಪೂರೈಸುವ ಮಹತ್ವದ ಯೋಜನೆ ಇದಾಗಿದೆ.-ಹರೀಶ್ ಪೂಂಜ, ಶಾಸಕ, ಬೆಳ್ತಂಗಡಿ.