ಇಂದಿನಿಂದ ಬೃಹತ್ ಇ-ಖಾತಾ ಆಂದೋಲನ: ಶಾಸಕ ಸಮರ್ಥ್

KannadaprabhaNewsNetwork |  
Published : Nov 17, 2026, 01:30 AM IST
16ಕೆಡಿವಿಜಿ7, 8-ದಾವಣಗೆರೆ ಪಾಲಿಕೆಯಲ್ಲಿ ಬೃಹತ್ ಇ-ಖಾತಾ ಆಂದೋಲನದ ಬಗ್ಗೆ ಶಾಸಕ ಸಮರ್ಥ ಎಂ.ಶಾಮನೂರು, ಪಾಲಿಕೆ ಆಯುಕ್ತ ಎನ್.ಮಹಾಂತೇಶ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು. | Kannada Prabha

ಸಾರಾಂಶ

ದಾವಣಗೆರೆ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಇ-ಖಾತಾ (ಇ-ಆಸ್ತಿ) ಸೇವೆಯನ್ನು 72 ಗಂಟೆ ಒಳಗೆ ತ್ವರಿತವಾಗಿ ಒದಗಿಸಲು ನ.17ರಿಂದ 20 ರವರೆಗೆ ಬೃಹತ್ ಇ-ಖಾತಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಶಾಸಕ ಸಮರ್ಥ ಎಂ.ಶಾಮನೂರು ತಿಳಿಸಿದ್ದಾರೆ.

- ಪಾಲಿಕೆಯ ಮೂರು ವಲಯ ಕಚೇರಿಯಲ್ಲೂ ಏಕಕಾಲಕ್ಕೆ ಆಂದೋಲನ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ಪಾಲಿಕೆ ವ್ಯಾಪ್ತಿಯ ಆಸ್ತಿ ಮಾಲೀಕರಿಗೆ ಇ-ಖಾತಾ (ಇ-ಆಸ್ತಿ) ಸೇವೆಯನ್ನು 72 ಗಂಟೆ ಒಳಗೆ ತ್ವರಿತವಾಗಿ ಒದಗಿಸಲು ನ.17ರಿಂದ 20 ರವರೆಗೆ ಬೃಹತ್ ಇ-ಖಾತಾ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ದಕ್ಷಿಣ ಶಾಸಕ ಸಮರ್ಥ ಎಂ.ಶಾಮನೂರು ತಿಳಿಸಿದರು.

ನಗರದ ಪಾಲಿಕೆ ಸಭಾಂಗಣದಲ್ಲಿ ಸೋಮವರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಭೂ ಗ್ಯಾರಂಟಿ ಯೋಜನೆಯಡಿ ಎಲ್ಲ ಅರ್ಹ ಆಸ್ತಿಗಳಿಗೆ ಕಾಲಮಿತಿಯಲ್ಲಿ ಇ-ಆಸ್ತಿ ತಂತ್ರಾಂಶದ ಮೂಲಕ ತ್ವರಿತವಾಗಿ ಅಂತಿಮ ಇ-ಖಾತಾ ನೀಡುವುದು ಆಂದೋಲನದ ಉದ್ದೇಶ ಎಂದರು.

ಪಾಲಿಕೆಯ ಎಲ್ಲ ಮೂರೂ ವಲಯ ಕಚೇರಿಗಳಲ್ಲಿ ಏ.17ರಿಂದ 20 ರವರೆಗೆ ಆಂದೋಲನ ಏಕಕಾಲದಲ್ಲಿ ಆರಂಭವಾಗಲಿದ್ದು, ಬೆಳಗ್ಗೆ 10.30ರಿಂದ ಸಂಜೆ 4 ಗಂಟೆವರೆಗೆ ಸಾರ್ವಜನಿಕರು ಅರ್ಜಿ ಸಲ್ಲಿಸಲು ಅವಕಾಶವಿದೆ. ಆಯಾ ಆಸ್ತಿಗಳು ಯಾವ ವಲಯ ಕಚೇರಿಗೆ ವ್ಯಾಪ್ತಿಗೆ ಒಳಪಡುತ್ತವೋ ಅದೇ ವಲಯ ಕಚೇರಿಗೆ ಸಾರ್ವಜನಿಕರು ಭೇಟಿ ನೀಡಬೇಕು. ವಲಯ ಕಚೇರಿ-01ಕ್ಕೆ ರಾಜೀವ್ ಗಾಂಧಿ ಬಡಾವಣೆ, ವಲಯ ಕಚೇರಿ-2 ಲೋಕಿಕೆರೆ ರಸ್ತೆಯ ಟಿವಿ ಸ್ಟೇಷನ್ ಕೆರೆ ಎದುರು, ವಲಯ ಕಚೇರಿ-3 ಶಾಬನೂರು ರಸ್ತೆಯ ಎಂಸಿಸಿ ಎ ಬ್ಲಾಕ್‌ನ ಆಶ್ರಯ ಆಸ್ಪತ್ರೆ ಪಕ್ಕದ ವಿಳಾಸದಲ್ಲಿ ಕಾರ್ಯ ನಿರ್ವಹಿಸಲಿವೆ ಎಂದು ಅವರು ಹೇಳಿದರು.

ಇ-ಖಾತಾಗೆ ಅರ್ಜಿ ಸಮೇತ ಅಗತ್ಯ ಎಲ್ಲ ದಾಖಲೆ ಸಮರ್ಪಕವಾಗಿ ಸಲ್ಲಿಸಿ, ಆಧಾರ್ ಆಧಾರಿತ ಇ-ಕೆವೈಸಿ ಪೂರ್ಣಗೊಳಿಸಿದ ಹಾಗೂ ಪರಿಶೀಲನೆಯಲ್ಲಿ ಯಾವುದೇ ಲೋಪದೋಷ, ಆಕ್ಷೇಪಣೆ ಕಂಡುಬಾರದ ಅರ್ಹ ಅರ್ಜಿಗಳಿಗೆ, ಪೂರ್ಣ ಅರ್ಜಿ ಸ್ವೀಕೃತಿಯಾದ ದಿನದಿಂದ 72 ಗಂಟೆ ಒಳಗಾಗಿ ಇ-ಖಾತಾ ವಿತರಿಸಲು ಕ್ರಮ ಕೈಗೊಂಡಿದೆ. ಅರ್ಜಿದಾರರು ಮಾಲೀಕತ್ವದ ದಾಖಲೆಗಳು (ನೋಂದಾಯಿತ ಕ್ರಮಪತ್ರ, ದಾನಪತ್ರ, ಇತ್ಯಾದಿ), ಆಸ್ತಿ ತೆರಿಗೆ ಪಾವತಿ ರಸೀದಿಗಳು, ಋಣಭಾರ ಪ್ರಮಾಣಪತ್ರ, ಆಧಾರ್ ಕಾರ್ಡ್ ಹಾಗೂ ಗುರುತಿನ ಚೀಟಿ, ಭಾವಚಿತ್ರಗಳು ಮತ್ತು ಲೇಔಟ್‌ ನಕ್ಷೆ ಅಥವಾ ವಂಶವೃಕ್ಷದಂತಹ ದಾಖಲೆ ಕಡ್ಡಾಯವಾಗಿ ತರಬೇಕು ಎಂದು ಅವರು ವಿವರಿಸಿದರು.

ಜನರು ಇ-ಆಸ್ತಿ ವೆಬ್‌ಸೈಟ್‌ ಮೂಲಕ ನಾಗರೀಕ ಸೇವೆಯ ಇ-ಖಾತಾ ಆಯ್ಕೆ ಮಾಡುವ ಮೂಲಕ ಮನೆಯಲ್ಲೇ ತಮ್ಮ ಆಸ್ತಿಯ ಕರಡು ಇ-ಖಾತಾ ಪರಿಶೀಲಿಸಿಕೊಳ್ಳಬಹುದು. ಪಾಲಿಕೆ ಈಗಾಗಲೇ ನಗರದಲ್ಲಿ ಒಟ್ಟು 96,143 ಆಸ್ತಿಗಳಿಗೆ ಇ-ಖಾತಾ ವಿತರಿಸಿದೆ. ಇದರಲ್ಲಿ 78770 ಎ ಖಾತಾ, 17373 ಬಿ ಖಾತಾ ಆಗಿವೆ. ಶೀಘ್ರದಲ್ಲೇ ಒಂದು ಲಕ್ಷ ಇ-ಖಾತಾ ವಿತರಣೆ ಮೈಲಿಗಲ್ಲನ್ನು ತಲುಪುವತ್ತ ಪಾಲಿಕೆ ಮುನ್ನುಗ್ಗುತ್ತಿದೆ ಎಂದರು.

ಪಾಲಿಕೆ ಆಯುಕ್ತ ಎನ್.ಮಹಾಂತೇಶ ಮಾತನಾಡಿ, ಇ-ಖಾತಾ ಆಂದೋಲನವನ್ನು ಮೂರೂ ವಲಯ ಕಚೇರಿಗಳಲ್ಲಿ ಉಪ ನೋಂದಣಾಧಿಕಾರಿ ಹಾಗೂ ತಹಸೀಲ್ದಾರ್ ಕಚೇರಿಯ ಸಿಬ್ಬಂದಿ ಜೊತೆಗೆ ಅರ್ಜಿ ಭರ್ತಿಗೆ ಕರ್ನಾಟಕ ಒನ್‌ ಸಿಬ್ಬಂದಿ ಸಹ ಕಾರ್ಯನಿರ್ವಹಿಸುತ್ತಿದ್ದಾರೆ. ದಾಖಲೆ ಕೊರತೆ ಇದ್ದರೆ ಅವುಗಳ ಬಗ್ಗೆ ಅಗತ್ಯ ದಾಖಲೆ ಬಗ್ಗೆ ಹಿಂಬರಹ ನೀಡಲಿದ್ದೇವೆ. ಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 1.96 ಲಕ್ಷ ಆಸ್ತಿ ಇದ್ದು, ಶೇ.46ರಷ್ಟು ಅಂದರೆ 96143 ಆಸ್ತಿಯನ್ನು ಇ-ಖಾತೆ ಮಾಡಲಾಗಿದೆ. ಉಳಿದ ಖಾತೆಗಳನ್ನೂ ಇ-ಖಾತೆಯನ್ನಾಗಿಸುವ ಕಾರ್ಯ ಸಾಗಿದೆ. ಬಿ ಖಾತೆಯಿಂದ ಎ ಖಾತೆಯಾಗಿಸಲು ರಾಜ್ಯ ಸರ್ಕಾರದ ನಿರ್ದೇಶನದಂತೆ ಆಸ್ತಿಯ ಸರ್ಕಾರಿ ಮೌಲ್ಯದ ಶೇ.1ರಷ್ಟು ಶುಲ್ಕ ಆಕರಿಸಲಾಗುತ್ತದೆ ಎಂದು ಎನ್.ಮಹಾಂತೇಶ ಮಾಹಿತಿ ನೀಡಿದರು.

ಪಾಲಿಕೆ ಅಭಿಯಂತರ ಸುನಿಲ್, ಅಧಿಕಾರಿ, ಸಿಬ್ಬಂದಿ ಇದ್ದರು. ಇದೇ ವೇಳೆ ಈಚೆಗೆ ನಿಧನರಾದ ಪೌರ ಕಾರ್ಮಿಕರ ಕುಟುಂಬ ಸದಸ್ಯರಿಗೆ ಅನುಕಂಪ ಆಧಾರಿತ ನೇಮಕಾತಿ ಪತ್ರವನ್ನು ಶಾಸಕ ಸಮರ್ಥ ಶಾಮನೂರು ವಿತರಿಸಿ, ಶುಭಾರೈಸಿದರು.

- - -

-16ಕೆಡಿವಿಜಿ7: ದಾವಣಗೆರೆ ಪಾಲಿಕೆಯಲ್ಲಿ ಬೃಹತ್ ಇ-ಖಾತಾ ಆಂದೋಲನ ಬಗ್ಗೆ ಶಾಸಕ ಸಮರ್ಥ ಎಂ.ಶಾಮನೂರು, ಪಾಲಿಕೆ ಆಯುಕ್ತ ಎನ್.ಮಹಾಂತೇಶ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೆಐಎನಲ್ಲಿ ₹13 ಕೋಟಿಯ ಡ್ರಗ್ಸ್‌ ಜಪ್ತಿ
ಮಾರತಹಳ್ಳೀಲಿ ಕೊಡಲಿಯಿಂದ ಕೊಚ್ಚಿ ಪತ್ನಿಯನ್ನೇ ಕೊಂದ ಗಂಡ