21ರಂದು ಬೃಹತ್ ರೈತ ಹೋರಾಟ, ರೈತರ ಹುತಾತ್ಮ ದಿನಾಚರಣೆ

KannadaprabhaNewsNetwork |  
Published : Jul 07, 2026, 03:30 AM IST
06ಸಜಬಕಜಸಬಕ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಬೆಲ್ಲದ ನಗರಿ ಎಂದು ಗುರುತಿಸಿಕೊಂಡಿರುವ ಮಹಾಲಿಂಗಪುರಕ್ಕೆ ತಾಲೂಕು ಸ್ಥಾನಮಾನ ನೀಡಬೇಕೆಂಬ ಹಲವು ದಿನಗಳ ಜನರ ಬೇಡಿಕೆ ಇದೆ. ಇದೀಗ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜುಲೈ 21ರಂದು ಬೃಹತ್ ರೈತ ಹೋರಾಟ ಹಾಗೂ ರೈತರ ಹುತಾತ್ಮ ದಿನಾಚರಣೆ ಮೂಲಕ ಸರ್ಕಾರಕ್ಕೆ ಪ್ರಬಲ ಸಂದೇಶ ರವಾನಿಸಲು ತಾಲೂಕು ಹೋರಾಟ ಸಮಿತಿ ಸಜ್ಜಾಗಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಬೆಲ್ಲದ ನಗರಿ ಎಂದು ಗುರುತಿಸಿಕೊಂಡಿರುವ ಮಹಾಲಿಂಗಪುರಕ್ಕೆ ತಾಲೂಕು ಸ್ಥಾನಮಾನ ನೀಡಬೇಕೆಂಬ ಹಲವು ದಿನಗಳ ಜನರ ಬೇಡಿಕೆ ಇದೆ. ಇದೀಗ ಮತ್ತೊಮ್ಮೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಜುಲೈ 21ರಂದು ಬೃಹತ್ ರೈತ ಹೋರಾಟ ಹಾಗೂ ರೈತರ ಹುತಾತ್ಮ ದಿನಾಚರಣೆ ಮೂಲಕ ಸರ್ಕಾರಕ್ಕೆ ಪ್ರಬಲ ಸಂದೇಶ ರವಾನಿಸಲು ತಾಲೂಕು ಹೋರಾಟ ಸಮಿತಿ ಸಜ್ಜಾಗಿದೆ.

ಪಟ್ಟಣದ ಜಿಎಲ್ಬಿಸಿ ಅತಿಥಿ ಗೃಹದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಬಸವಂತ ಕಾಂಬಳೆ ಮಾತನಾಡಿ, ಮಹಾಲಿಂಗಪುರ ತಾಲೂಕು ಬೇಡಿಕೆ ಯಾವುದೇ ವ್ಯಕ್ತಿ, ಸಂಘಟನೆ ಅಥವಾ ರಾಜಕೀಯ ಪಕ್ಷದ ಬೇಡಿಕೆಯಲ್ಲ. ಈ ಭಾಗದ ಲಕ್ಷಾಂತರ ಜನರ ಆಡಳಿತಾತ್ಮಕ ಹಕ್ಕು ಹಾಗೂ ಅಭಿವೃದ್ಧಿಯ ಪ್ರಶ್ನೆಯಾಗಿದೆ. ಸರ್ಕಾರ ಜನರ ನ್ಯಾಯಸಮ್ಮತ ಬೇಡಿಕೆಯನ್ನು ಇನ್ನಷ್ಟು ವಿಳಂಬ ಮಾಡದೆ ಕೂಡಲೇ ಈಡೇರಿಸಲಿ. ಜತೆಗೆ ನಮ್ಮ ಹೋರಾಟದಲ್ಲಿ ನೀತಿ ಬದ್ಧತೆಯಿದ್ದು, ಶಿಸ್ತಿನಿಂದ ನಡೆಸುವುದಾಗಿದೆ. ಈ ಪಟ್ಟಣ ಕೃಷಿ, ವ್ಯಾಪಾರ, ಶಿಕ್ಷಣ, ಆರೋಗ್ಯ, ಬ್ಯಾಂಕಿಂಗ್ ಹಾಗೂ ಕೈಗಾರಿಕಾ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದ್ದರೂ ಆಡಳಿತಾತ್ಮಕವಾಗಿ ತಾಲೂಕು ಸ್ಥಾನಮಾನ ಇಲ್ಲದಿರುವುದರಿಂದ ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದಾರೆ ಎಂದರು.

ಮುಖಂಡರಾದ ಮಹಾಂತೇಶ ಹಿಟ್ಟಿನಮಠ, ರೈತ ಸಂಚಾಲಕ ಗಂಗಾಧರ ಮೇಟಿ ಮಾತನಾಡಿ, ಮಹಾಲಿಂಗಪುರಕ್ಕೆ ತಾಲೂಕು ಸ್ಥಾನಮಾನ ದೊರೆತರೆ ಸರ್ಕಾರಿ ಕಚೇರಿಗಳು, ಆಡಳಿತಾತ್ಮಕ ಸೇವೆಗಳು ಹಾಗೂ ಅಭಿವೃದ್ಧಿ ಯೋಜನೆಗಳು ವೇಗ ಪಡೆಯಲಿದ್ದು, ಸ್ಥಳೀಯ ಜನರಿಗೆ ಸುಲಭವಾಗಿ ಸರ್ಕಾರಿ ಸೇವೆಗಳು ಲಭ್ಯವಾಗಲಿವೆ. ಶಿಕ್ಷಣ, ಆರೋಗ್ಯ, ರಸ್ತೆ, ಕೃಷಿ ಹಾಗೂ ಕೈಗಾರಿಕಾ ಕ್ಷೇತ್ರಗಳ ಅಭಿವೃದ್ಧಿಗೂ ಹೊಸ ದಿಕ್ಕು ದೊರೆಯಲಿದ್ದು, ಇಡೀ ಭಾಗದ ಆರ್ಥಿಕ ಪ್ರಗತಿಗೆ ಮಹತ್ವದ ಬುನಾದಿಯಾಗಲಿದೆ ಎಂದರು.

ಹೋರಾಟದ ವಿಶೇಷ ಅಂಗವಾಗಿ ರೈತರ ಹಕ್ಕುಗಳಿಗಾಗಿ ಪ್ರಾಣತ್ಯಾಗ ಮಾಡಿದ ರೈತ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುವುದು. ಅವರ ತ್ಯಾಗವನ್ನು ಸ್ಮರಿಸುವ ಜತೆಗೆ ಕೃಷಿ ಕ್ಷೇತ್ರದ ಸಮಸ್ಯೆಗಳು, ರೈತರ ಸಂಕಷ್ಟ, ಗ್ರಾಮೀಣಾಭಿವೃದ್ಧಿ, ಆಡಳಿತದ ವಿಕೇಂದ್ರೀಕರಣ ಹಾಗೂ ಮಹಾಲಿಂಗಪುರ ತಾಲೂಕು ಘೋಷಣೆಯ ಅಗತ್ಯತೆ ಕುರಿತು ವಿವಿಧ ಮುಖಂಡರಿಂದ ಅಭಿಪ್ರಾಯ ಮೂಡಲಿವೆ ಎಂದರು.

ತಾಲೂಕು ಹೋರಾಟ ಸಮಿತಿ ಅಧ್ಯಕ್ಷ ಸಂಗಪ್ಪ ಹಲ್ಲಿ ಮಾತನಾಡಿ, ತಾಲೂಕು ಸ್ಥಾನಮಾನ ದೊರೆಯುವವರೆಗೆ ಹೋರಾಟವನ್ನು ಹಂತಹಂತವಾಗಿ ಮತ್ತಷ್ಟು ತೀವ್ರಗೊಳಿಸಲಾಗುವುದು. ಅಗತ್ಯವಿದ್ದರೆ ರಾಜ್ಯಮಟ್ಟದ ಬೃಹತ್ ಪ್ರತಿಭಟನೆಗಳನ್ನು ಮತ್ತು ಹೋರಾಟಗಳನ್ನು ಕೈಗೊಳ್ಳುವುದಕ್ಕೂ ಹಿಂದೆ ಸರಿಯುವುದಿಲ್ಲ ಎಂದರು.

ಈ ಬೃಹತ್ ಹೋರಾಟದಲ್ಲಿ ರೈತರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳು, ಕಾರ್ಮಿಕರು, ವ್ಯಾಪಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಮಹಾಲಿಂಗಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಾಲೂಕು ಸ್ಥಾನಮಾನಕ್ಕಾಗಿ ನಡೆಯುತ್ತಿರುವ ನ್ಯಾಯಯುತ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ತಾಲೂಕು ಹೋರಾಟ ಸಮಿತಿ ಮನವಿ ಮಾಡಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣವು ಕೇವಲ ಉದ್ಯೋಗದ ಸಾಧನವಲ್ಲ
ಮಳೆಗಾಗಿ ಗುರ್ಜಿ ಹೊತ್ತ ಕಿಲ್ಲಾ ಯುವಕರು