ಕನ್ನಡಪ್ರಭ ವಾರ್ತೆ ಇಳಕಲ್ಲ

ರಾಜ್ಯದೆಲ್ಲೆಡೆ ಧಾರಾಕಾರ ಮಳೆ ಸುರಿಯುತ್ತಿದ್ದರೂ ಬಾಗಲಕೋಟೆ ಜಿಲ್ಲೆಗೆ ಮಾತ್ರ ಬರದ ಛಾಯೆ ಆವರಿಸಿದೆ. ಮಳೆಗಾಗಿ ಜಿಲ್ಲೆಯಲ್ಲಿ ರೈತರಾದಿಯಾಗಿ, ಜನಸಾಮಾನ್ಯರು ದೇವರ ಪ್ರಾರ್ಥನೆ, ವಿಶೇಷ ಪೂಜೆ ಹಾಗೂ ವಿಶಿಷ್ಠ ಆಚರಣೆಗೆ ಮುಂದಾಗುತ್ತಿರುವುದು ಎಲ್ಲೆಡೆ ಸಾಮಾನ್ಯವಾಗಿದೆ.

ಜಿಲ್ಲೆಯ ಇಳಕಲ್ಲ ನಗರದ ಕಿಲ್ಲಾ ಓಣಿ ಯುವಕರು ಗುರ್ಜಿ ಹೊತ್ತರೆ ಮಳೆ ಬರುತ್ತದೆ ಎಂಬ ನಂಬಿಕೆಯಿಂದ ಮನೆ ಮನೆಗೆ ಬಾರೋ ಬಾರೋ ಮಳೆ ರಾಯ ರೈತರ ಕಾಪಾಡು ಎಂದು ಹಾಡು ಹೇಳುತ್ತಾ ಮಳೆಗಾಗಿ ದೇವರಿಗೆ ವಿಶಿಷ್ಠವಾಗಿ ಪ್ರಾರ್ಥಿಸುತ್ತಿರುವುದು ವಿಶೇಷವಾಗಿದೆ.

ಮುಂಗಾರು ಆರಂಭದಿಂದಲೂ ಜಿಲ್ಲೆಯಲ್ಲಿ ಮಳೆಯ ಅಭಾವ ಎದ್ದು ಕಾಣುತ್ತಿದೆ. ಮಳೆ ನಂಬಿ ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ್ದ ರೈತರು ಮಳೆಗಾಗಿ ತಲೆ ಮೇಲೆ ಕೈ ಹೊತ್ತು ಕುಳಿತಕೊಳ್ಳಬೇಕಾದ ಪರಿಸ್ಥಿತಿ ಎದುರಾಗಿದೆ. ಪರಿಣಾಮ ಬಿತ್ತಿದ ಬೆಳೆಗೆ ನೀರಿನ ಕೊರತೆ ಇರುವುದರಿಂದ ಬೆಳೆ ಸಂಪೂರ್ಣ ಕಮರಿ ಹೋಗಿದೆ. ಮಳೆಗಾಗಿ ಕಿಲ್ಲಾ ಓಣಿಯ ಯುವಕ ಸಲೀಂ ಕಂದಗಲ್ಲ ಬರೀ ಮೈಯಲ್ಲಿ ಗುರ್ಜಿ ಹೋತ್ತು ಮನೆ ಮನೆಗೆ ಹೋಗಿ ನೀರು ಹಾಕಿಸಿಕೊಳ್ಳುತ್ತಿದ್ದಾರೆ. ಆತನ ಸ್ನೇತ ಮಹಳಿ ವೇಷ ಧರಿಸಿ ಎಲ್ಲರ ಗಮನ ಸೆಳೆದಿದ್ದಾನೆ.

ರೈತ ಮುಖಂಡ ಶೇಖಣ್ಣ ಘಂಟಿ, ಸಿದ್ದು ಘಂಟಿ, ಶರಣಗೌಡ ಪಾಟೀಲ, ಮುತ್ತು ಕೌದಿ, ಮಲ್ಲು ಬಮಸಾಗರ, ಭಾಷಾ ವಾಲಿಕಾರ, ರುಶಿ ವಾಲಿಕಾರ, ಶಿಕ್ಷಕ ವಿರೇಶ, ಮಲ್ಲು ಅಕ್ಕಿ, ಮಲ್ಲು ಸೂಳಿಬಾವಿ ಇತರರು ಪಾಲ್ಗೊಂಡಿದ್ದರು.