ಕನ್ನಡಪ್ರಭ ವಾರ್ತೆ ಮದ್ದೂರು
ತಾಲೂಕಿನ ಕೊಪ್ಪ ಗ್ರಾಮದ ಸರ್ವೋದಯ ವಿದ್ಯಾವರ್ಧಕ ಟ್ರಸ್ಟ್‌ನಿಂದ ನ.8ರಂದು ಸ್ವಾತಂತ್ರ ಹೋರಾಟಗಾರ, ಮಾಜಿ ಶಾಸಕ ಹಾಗೂ ಮೈಷುಗರ್ ಮಾಜಿ ಅಧ್ಯಕ್ಷ ಕೀರ್ತಿ ಶೇಷ ಎ.ಡಿ.ಬಿಳೀಗೌಡರ ಸ್ಮರಣಾರ್ಥ ಉಚಿತ ಬೃಹತ್ ಆರೋಗ್ಯ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಬಿ.ವಿವೇಕಾನಂದ ಶುಕ್ರವಾರ ಹೇಳಿದರು.ವಿದ್ಯಾವರ್ಧಕ ಟ್ರಸ್ಟ್ ಕಾಲೇಜಿನ ಆವರಣದಲ್ಲಿ ಆದಿಚುಂಚನಗಿರಿ ಆಸ್ಪತ್ರೆ ಹಾಗೂ ಬೆಂಗಳೂರು ಕಿದ್ವಾಯಿ ಸ್ಮಾರಕ ಗ್ರಂಥಿ ಆಸ್ಪತ್ರೆ ಸಹಯೋಗದಲ್ಲಿ ಬೆಳಗ್ಗೆ 10 ರಿಂದ ಸಂಜೆ 4 ಗಂಟೆವರೆಗೆ ನಡೆಯುವ ಆರೋಗ್ಯ ಶಿಬಿರವನ್ನು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದ ಸ್ವಾಮಿ ಮತ್ತು ಪುರುಷೋತ್ತಮಾನಂದ ಸ್ವಾಮೀಜಿ ಚಾಲನೆ ನೀಡಲಿದ್ದಾರೆ ಎಂದರು.
ಎರಡು ಆಸ್ಪತ್ರೆಗಳ ನುರಿತ ವೈದ್ಯಕೀಯ ತಜ್ಞರ ತಂಡ ಶಿಬಿರದಲ್ಲಿ ಪಾಲ್ಗೊಂಡು ಹೃದಯ ರೋಗ, ನರರೋಗ, ಮೂತ್ರಪಿಂಡ, ಮಧುಮೇಹ , ಪಿತ್ತ ಜನಕಾಂಗ, ಕ್ಯಾನ್ಸರ್, ಸ್ತ್ರೀರೋಗ, ಕೀಲು ಮೂಳೆ, ದಂತ, ಕಿವಿ ,ಮೂಗು, ಗಂಟಲು, ಮಕ್ಕಳ ತಜ್ಞರು, ನೇತ್ರಾ ಚರ್ಮರೋಗ ಹಾಗೂ ಮಾನಸಿಕ ರೋಗಗಳ ಕುರಿತು ವೈದ್ಯರು ತಪಾಸಣೆನಡೆಸಿ ಚಿಕಿತ್ಸೆ ಕುರಿತು ಸಲಹೆ ಸೂಚನೆಗಳನ್ನು ನೀಡಲಿದ್ದಾರೆಎಂದು ವಿವರಿಸಿದರು.ಶಿಬಿರದಲ್ಲಿ ಇಸಿಜಿ, ಯಕೋ, ಮತ್ತು ರಕ್ತ ಪರೀಕ್ಷೆ ಮಾಡಲಾಗುವುದು. ತಾಲೂಕಿನ ಮತ್ತು ಕೊಪ್ಪ ಹೋಬಳಿ ವ್ಯಾಪ್ತಿಯ ಜನರು ಉಚಿತ ಆರೋಗ್ಯ ತಪಾಸಣಾ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.
ಸುದ್ಧಿಗೋಷ್ಠಿಯಲ್ಲಿ ಟ್ರಸ್ಟ್ ಅಧ್ಯಕ್ಷ ಆಡಳಿತ ಅಧಿಕಾರಿ ಡಿ.ಪಿ.ಸ್ವಾಮಿ, ಪ್ರಾಂಶುಪಾಲ ಹನುಮಂತರಾಯ, ಮುಖ್ಯಸ್ಥ ಡಾ.ಕೆ.ಎಂ.ಶಿವಕುಮಾರ್ ಇದ್ದರು.ಟಿ.ಸಾನಿಕ ಜಿಲ್ಲೆಗೆ ಪ್ರಥಮ
ಮದ್ದೂರು: ಸಂಸದೀಯ ವ್ಯವಹಾರಗಳ ಇಲಾಖೆ, ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯ್ತಿ ಮತ್ತು ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಯುವ ಸಂಸತ್ ಸ್ಪರ್ಧೆ-2025ರಲ್ಲಿ ಪಟ್ಟಣದ ಪೂರ್ಣ ಪ್ರಜ್ಞ ಆಂಗ್ಲ ಮಾಧ್ಯಮ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಟಿ.ಸಾನಿಕ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿನಿ ಸಾನಿಕಾಳನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಬಿ.ಧನಂಜಯ, ವಿದ್ಯಾಸಂಸ್ಥೆ ಅಧ್ಯಕ್ಷ ಪಿ.ಕಸ್ತೂರಿ, ಮುಖ್ಯ ಶಿಕ್ಷಕ ಎಚ್.ಆರ್. ಅನಂತೇಗೌಡ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.