ಕನ್ನಡಪ್ರಭ ವಾರ್ತೆ ತುಮಕೂರು ತುಮಕೂರಿನ ಸಿದ್ಧಗಂಗಾ ಮಠದಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಅರಣ್ಯ ಇಲಾಖೆ, ಚಿತ್ರಕಲಾ ಪರಿಷತ್ ಸಹಯೋಗದಲ್ಲಿ ತುಮಕೂರು ಜಿಲ್ಲಾ ಮಟ್ಟದ ಬೃಹತ್ ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಮಠದ 2500 ಕ್ಕೂ ಹೆಚ್ಚು ಮಕ್ಕಳು ಈ ಬೃಹತ್ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಶ್ರೀ ಮಠದಲ್ಲಿ ಪ್ರಾರ್ಥನೆಯಾದ ಬಳಿಕ ಸರತಿ ಸಾಲಿನಲ್ಲಿ ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆ ನಡೆದ ಸ್ಥಳಕ್ಕೆ ಆಗಮಿಸಿದರು. ಅಷ್ಟೂ ಮಕ್ಕಳಿಗೆ ಚಿತ್ರಕಲೆಗೆ ಸಂಬಂಧಿಸಿದ ಪರಿಕರಗಳನ್ನು ವಿತರಿಸಲಾಯಿತು. ಒಂದು ಗಂಟೆಗಳ ಕಾಲ ಕಾಲಾವಕಾಶ ಕೊಟ್ಟು ಸ್ಪರ್ಧೆಗೆ ಚಾಲನೆ ನೀಡಲಾಯಿತು. ಅರಣ್ಯ ಮತ್ತು ವನ್ಯಜೀವಿ ಕುರಿತು ವಿದ್ಯಾರ್ಥಿಗಳು ಚಿತ್ರ ಬಿಡಿಸಿದರು. ಚಿತ್ರಕಲಾ ಸ್ಪರ್ಧೆಗೆ ಖುದ್ದು ಸಿದ್ಧಗಂಗಾ ಮಠಾಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಆಗಮಿಸಿ ಮಕ್ಕಳು ಚಿತ್ರ ಬಿಡಿಸುವುದನ್ನು ತದೇಕ ಚಿತ್ತದಿಂದ ವೀಕ್ಷಿಸಿದರು. ಅಲ್ಲದೇ ಕೆಲ ಮಕ್ಕಳಿಗೆ ಉಪಯುಕ್ತ ಸಲಹೆಗಳನ್ನು ನೀಡಿದರು. 2500 ಕ್ಕೂ ಹೆಚ್ಚು ಮಕ್ಕಳ ಜಾಗಕ್ಕೆ ಶ್ರೀಗಳು ತೆರಳಿ ವೀಕ್ಷಿಸಿದರು. ಅಲ್ಲದೇ ಈ ಬೃಹತ್ ಚಿತ್ರಕಲಾ ಸ್ಪರ್ಧೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.ವಿದ್ಯಾರ್ಥಿಗಳು ನಿಶಬ್ಧವಾಗಿ ಕುಳಿತು ಚಿತ್ರಗಳನ್ನು ಬಿಡಿಸಿದರು. ಕೆಲವರು ಪ್ರಾಣಿಗಳ ಚಿತ್ರಗಳನ್ನು, ಕೆಲವರು ಕಾಡಿನ ಚಿತ್ರಗಳನ್ನು, ಮತ್ತೆ ಕೆಲವರು ಹಾವು ಮತ್ತಿತರ ಚಿತ್ರಗಳನ್ನು ಬಿಡಿಸಿ ಗಮನಸೆಳೆದರು. ಸುಮಾರು ಒಂದು ಗಂಟೆಗಳ ಕಾಲ ನಡೆದ ಸ್ಪರ್ಧೆ ಬಳಿಕ ತೀರ್ಪುಗಾರರ ತಂಡ ಎಲ್ಲಾ ಚಿತ್ರಗಳನ್ನು ಪರಿಶೀಲಿಸಿ ಬಹುಮಾನಕ್ಕೆ ಆಯ್ಕೆ ಮಾಡಿದರು. ಸಂಭ್ರಮವೋ ಸಂಭ್ರಮ ಕನ್ನಡ ಪ್ರಭ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ, ಏಷ್ಯಾನೆಟ್ ಸುವರ್ಣ, ಅರಣ್ಯ ಇಲಾಖೆ ಹಾಗೂ ಚಿತ್ರಕಲಾ ಪರಿಷತ್ ಆಯೋಜಿಸಿದ್ದ ಈ ಬೃಹತ್ ಚಿತ್ರಕಲಾ ಸ್ಪರ್ಧೆಗೆ ಶ್ರೀ ಮಠ ಸಂಭ್ರಮಿಸಿತ್ತು. ಪ್ರತಿ ಶಾಲೆಗೆ ಹೋಗಿ ಸ್ಪರ್ಧೆ ಬಗ್ಗೆ ಅರಣ್ಯ ಮತ್ತು ವನ್ಯಜೀವಿ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲಾಗಿತ್ತು.1 ರಿಂದ 4 ಹಾಗೂ 5 ರಿಂದ 7 ನೇ ತರಗತಿಯ ಮಕ್ಕಳಿಗೆ ಈ ಸ್ಪರ್ಧೆ ಮಾಡಲಾಗಿತ್ತು. ಎರಡು ವಿಭಾಗದಲ್ಲಿ ಚಿತ್ರಕಲಾ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಚಿತ್ರಕಲಾ ಸ್ಪರ್ಧೆಗೆ ಮಕ್ಕಳು ಅತ್ಯುತ್ಸಾಹದಿಂದ ಪಾಲ್ಗೊಂಡು ಗಮನ ಸೆಳೆದರು. ಶ್ರೀ ಮಠದ ಸಿಬ್ಬಂದಿ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಸಿಬ್ಬಂದಿ ಈ ಬೃಹತ್ ಚಿತ್ರ ಸ್ಪರ್ಧೆಗೆ ಹಗಲಿರುಳು ದುಡಿದಿದ್ದರು.ಚಿತ್ರಕಲಾ ಸ್ಪರ್ಧೆಗೆ ಆಗಮಿಸಿದ್ದ ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಡಾ. ಎಸ್. ಪರಮೇಶ್ ಅವರು ಇದೊಂದು ಅತ್ಯುತ್ತಮ ಸ್ಪರ್ಧೆಯಾಗಿದೆ. ಕನ್ನಡಪ್ರಭ,, ಏಷ್ಯಾನೆಟ್ ಸುವರ್ಣ, ಸಿದ್ಧಗಂಗಾ ವೈದ್ಯಕೀಯ ಮತ್ತು ಸಂಶೋಧನಾ ಸಂಸ್ಥೆ, ಅರಣ್ಯ ಇಲಾಖೆ ಹಾಗೂ ಚಿತ್ರಕಲಾ ಪರಿಷತ್ ವತಿಯಿಂದ ನಡೆದ ಈ ಸ್ಪರ್ಧೆ ನಿಜಕ್ಕೂ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾಗಿದೆ. ವಿದ್ಯಾರ್ಥಿಗಳು ತಮ್ಮ ಕಲ್ಪನೆಯ ಅರಣ್ಯ ಮತ್ತು ವನ್ಯ ಜೀವಿ ಸಂಪತ್ತಿನ ಬಗ್ಗೆ ಚಿತ್ರ ಬಿಡಿಸಿರುವುದು ನಿಜಕ್ಕೂ ಶ್ಲಾಘನೀಯ. ಮಕ್ಕಳಿಗೆ ಇದೊಂದು ಅತ್ಯುತ್ತಮ ವೇದಿಕಯಾಗಲಿದೆ ಎಂದರು.ಕಾರ್ಯಕ್ರಮದಲ್ಲಿ ಕನ್ನಡಪ್ರಭ ಪತ್ರಿಕೆಯ ಸಮನ್ವಯ ಸಂಪಾದಕ ( ವಿಶೇಷ ಯೋಜನೆ) ಪ್ರಕಾಶಕ ಬಿ.ವಿ. ಮಲ್ಲಿಕಾರ್ಜುನಯ್ಯ, ಸಿದ್ಧಗಂಗಾ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಪ್ರಾಂಶುಪಾಲರಾದ ಡಾ. ಶಾಲಿನಿ ಎಂ, ವೈದ್ಯಕೀಯ ಅಧೀಕ್ಷಕ ನಿರಂಜನಮೂರ್ತಿ, ಸಿಇಒ ಡಾ. ಸಂಜೀವ ಕುಮಾರ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಕಾಂತರಾಜು ಮತ್ತಿತರರಿದ್ದರು.