ವಸಂತಕುಮಾರ್ ಕತಗಾಲ
ಬೇಡ್ತಿ (ಗಂಗಾವಳಿ)- ವರದಾ ಹಾಗೂ ಅಘನಾಶಿನಿ- ವೇದಾವತಿ ನದಿ ಜೋಡಣೆ ಯೋಜನೆಗಳನ್ನು ವಿರೋಧಿಸಿ ನ. 3ರಂದು ಯಲ್ಲಾಪುರದಲ್ಲಿ ರಾಷ್ಟ್ರೀಯ ಹೆದ್ದಾರಿ ತಡೆ ಬೃಹತ್ ಚಳವಳಿ ಹಮ್ಮಿಕೊಳ್ಳಲಾಗಿದ್ದು, 20 ಸಾವಿರಕ್ಕೂ ಅಧಿಕ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಇದುವರೆಗೆ ವಿವಿಧ ಯೋಜನೆಗಳಿಂದ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿ ಹಾಗೂ ಅರಣ್ಯ ಪ್ರದೇಶಕ್ಕೆ ಹಾನಿಯಾಗಿದ್ದು, ಸಾವಿರಾರು ಕುಟುಂಬಗಳು ತಮ್ಮ ನೆಲೆ, ಬದುಕು ಮತ್ತು ಸಾಂಪ್ರದಾಯಿಕ ಜೀವನಾಧಾರ ಕಳೆದುಕೊಂಡಿವೆ ಎಂಬುದು ಪರಿಸರ ಹೋರಾಟಗಾರರ ಆತಂಕ. ಇಷ್ಟೆಲ್ಲ ತ್ಯಾಗದ ಬಳಿಕವೂ ಜಿಲ್ಲೆಯ ಪಾಲಿಗೆ ಸಮರ್ಪಕ ಉದ್ಯೋಗ, ಪುನರ್ವಸತಿ, ಪರಿಹಾರ ಮತ್ತು ಮೂಲಸೌಕರ್ಯ ಸಿಕ್ಕಿದೆಯೇ ಎಂಬ ಪ್ರಶ್ನೆ ಮತ್ತೆ ಮುನ್ನೆಲೆಗೆ ಬಂದಿದೆ.ಈಗ ಮತ್ತೆ ನದಿ ತಿರುವು ಮತ್ತು ಜೋಡಣೆ ಯೋಜನೆಗಳ ಮೂಲಕ ಜಿಲ್ಲೆಯ ನದಿಗಳ ನೀರನ್ನು ಬೇರೆಡೆಗೆ ಹರಿಸುವ ಪ್ರಯತ್ನ ನಡೆಯುತ್ತಿದೆ. ಇದು ಕೇವಲ ನೀರಿನ ವರ್ಗಾವಣೆ ವಿಚಾರವಲ್ಲ; ಪಶ್ಚಿಮ ಘಟ್ಟದ ಪರಿಸರ ಸಮತೋಲನ, ಜೀವವೈವಿಧ್ಯ, ಕೃಷಿ, ಮೀನುಗಾರಿಕೆ, ಕುಡಿಯುವ ನೀರಿನ ಮೂಲಗಳು ಹಾಗೂ ನದಿತೀರದ ಜನರ ಭವಿಷ್ಯಕ್ಕೆ ಸಂಬಂಧಿಸಿದ ಗಂಭೀರ ಪ್ರಶ್ನೆಯಾಗಿದೆ. ಬೇಡ್ತಿ, ಗಂಗಾವಳಿ, ಅಘನಾಶಿನಿ ಮತ್ತು ವರದಾ ನದಿಗಳು ಉತ್ತರ ಕನ್ನಡದ ಪರಿಸರ ವ್ಯವಸ್ಥೆಯ ಜೀವನಾಡಿಗಳಾಗಿವೆ. ಪಶ್ಚಿಮಘಟ್ಟದ ಮಳೆಕಾಡು, ಸಣ್ಣ ಹೊಳೆಗಳು, ಜಲಚರಗಳು, ಮೀನುಗಳ ಸಂತಾನೋತ್ಪತ್ತಿ ಪ್ರದೇಶಗಳು, ನದಿಮುಖದ ಅಳಿವೆಗಳು ಹಾಗೂ ಕೃಷಿ ಚಟುವಟಿಕೆಗಳು ಈ ನದಿಗಳ ನೈಸರ್ಗಿಕ ಹರಿವಿನೊಂದಿಗೆ ಬೆಸೆದುಕೊಂಡಿವೆ. ನದಿಗಳ ನೀರನ್ನು ಕೃತಕವಾಗಿ ತಿರುಗಿಸುವುದರಿಂದ ನೈಸರ್ಗಿಕ ಹರಿವಿನಲ್ಲಿ ವ್ಯತ್ಯಯ ಉಂಟಾಗಿ, ನದಿಗಳ ಕೆಳಭಾಗದ ಜಲಮಟ್ಟ ಕುಸಿಯುವ, ಉಪ್ಪುನೀರು ಒಳನುಗ್ಗುವ, ಮೀನುಗಾರಿಕೆ ಕುಂಠಿತವಾಗುವ ಮತ್ತು ಕೃಷಿಗೆ ನೀರಿನ ಲಭ್ಯತೆ ಬದಲಾಗುವ ಅಪಾಯವಿದೆ.
ರೈತರು, ಮೀನುಗಾರರು, ಅರಣ್ಯವಾಸಿಗಳು, ಆದಿವಾಸಿ ಸಮುದಾಯಗಳು ಹಾಗೂ ನದಿ ತೀರದ ಗ್ರಾಮಗಳ ಜನರು ನೇರವಾಗಿ ಪರಿಣಾಮ ಎದುರಿಸಬೇಕಾಗುತ್ತದೆ. ಒಂದು ಪ್ರದೇಶದ ನೀರಿನ ಅಗತ್ಯ ಪೂರೈಸುವ ಹೆಸರಿನಲ್ಲಿ ಮತ್ತೊಂದು ಪ್ರದೇಶದ ಪರಿಸರ ಮತ್ತು ಜನರ ಬದುಕನ್ನು ಅಪಾಯಕ್ಕೆ ತಳ್ಳುವುದು ಯಾವ ರೀತಿಯ ಅಭಿವೃದ್ಧಿ ಎಂಬ ಪ್ರಶ್ನೆಯನ್ನು ಹೋರಾಟಗಾರರು ಮುಂದಿಟ್ಟಿದ್ದಾರೆ.
ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಪ್ರತಿನಿಧಿಗಳು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಬೇಡಿಕೆಗಳ ಕುರಿತು ಸ್ಪಷ್ಟ ಭರವಸೆ ನೀಡುವವರೆಗೆ ಧರಣಿ ಮುಂದುವರಿಸುವ ನಿರ್ಧಾರವನ್ನು ಹೋರಾಟ ಸಮಿತಿ ಪ್ರಕಟಿಸಿದೆ. ವಿವಿಧ ಸಂಘಟನೆಗಳು, ರೈತಪರ ಸಂಘಟನೆಗಳು, ಪರಿಸರ ಹೋರಾಟಗಾರರು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಹೋರಾಟದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.
ಬದುಕು ನಾಶ: ಸುಪಾ ಜಲವಿದ್ಯುತ್ ಯೋಜನೆಯಿಂದ ಸೀಬರ್ಡ್ ನೌಕಾನೆಲೆಯವರೆಗೆ ಲಕ್ಷಾಂತರ ಹೆಕ್ಟೇರ್ ಕೃಷಿಭೂಮಿ, ಅರಣ್ಯ ಮತ್ತು ಲಕ್ಷಾಂತರ ಜನರ ಬದುಕು ನಾಶವಾಗಿದೆ. ಈಗ ಜನರ ತಾಳ್ಮೆಯ ಕಟ್ಟೆ ಒಡೆದಿದೆ. ನ. 3ರಂದು ನಿರ್ಣಾಯಕ ಹೋರಾಟ ನಡೆಯಲಿದೆ ಎಂದು ಹೋರಾಟ ಪ್ರಧಾನ ಸಂಚಾಲಕರಾದ ಹರಿಪ್ರಕಾಶ್ ಕೋಣೆಮನೆ ತಿಳಿಸಿದರು.