ಉಡುಪಿ-ಕಾಸರಗೋಡು ವಿದ್ಯುತ್‌ ಸಂಪರ್ಕ ಯೋಜನೆ ವಿರುದ್ಧ ಬೃಹತ್‌ ಪ್ರತಿಭಟನೆ

KannadaprabhaNewsNetwork |  
Published : Oct 10, 2025, 01:01 AM IST
ಪ್ರತಿಭಟನಾಕಾರರ ಜತೆ ಬಂಟ್ವಾಳ ತಹಶೀಲ್ದಾರ್ ಮಾತುಕತೆ ನಡೆಸಿದರು.  | Kannada Prabha

ಸಾರಾಂಶ

ವಿದ್ಯುತ್ ಪ್ರಸರಣ ಯೋಜನೆಯ ವಿರುದ್ಧ ಗುರುವಾರ ಬೆಳಗ್ಗೆ ಹಿಂದು ಸಮಾಜದ ಮತ್ತು ರೈತರ ಬೃಹತ್ ಶಕ್ತಿ ಪ್ರದರ್ಶನ ಮಂಗಳಪದವಿನಲ್ಲಿ ಗುರುವಾರ ನಡೆಯಿತು.

ಬಂಟ್ವಾಳ: ೪೦೦ ಕೆವಿ ವಿದ್ಯುತ್ ಪ್ರಸರಣ ಯೋಜನೆಯ ವಿರುದ್ಧ ಗುರುವಾರ ಬೆಳಗ್ಗೆ ಹಿಂದು ಸಮಾಜದ ಮತ್ತು ರೈತರ ಬೃಹತ್ ಶಕ್ತಿ ಪ್ರದರ್ಶನ ಮಂಗಳಪದವಿನಲ್ಲಿ ಗುರುವಾರ ನಡೆಯಿತು.

ದಿಕ್ಸೂಚಿ ಭಾಷಣ ಮಾಡಿದ ಧಾರ್ಮಿಕ ಚಿಂತಕ ಮಂಜುನಾಥ ಉಡುಪ ಮಾತನಾಡಿ, ಚುನಾವಣೆ ಬಂದಾಗ ಜನರ ಕೈಕಾಲು ಹಿಡಿದು ಮತ ಕೇಳುವ ರಾಜಕಾರಣಿಗಳು ಈಗ ಎಲ್ಲಿದ್ದಾರೆ. ಜನರ ಹೋರಾಟದಿಂದ ನಾಪತ್ತೆಯಾಗಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಯೋಜನೆ ಅನುಷ್ಠಾನಕ್ಕೆ ಬಿಡುವುದಿಲ್ಲ ಎಂದು ಹೇಳಿದರು.

ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಇಲಾಖೆಗಳ ಮೂಲಕ ಹೋರಾಟಗಾರರ ಶಕ್ತಿ ದಮನಿಸುವ ಕಾರ್ಯ ಮಾಡಿದರೆ, ಜನ ವಿರೋಧದ ನಡುವೆಯೂ ಅನುಷ್ಠಾನಕ್ಕೆ ಮುಂದಾದರೆ, ಸಮಸ್ಯೆಗಳು ಉದ್ಬವಿಸಿದರೆ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಧಿಕಾರಿ ನೇರ ಹೊಣೆ ಹೊರಬೇಕು ಎಂದರು.ಹಿಂದೂ ಜಾಗರಣೆ ವೇದಿಕೆಯ ನರಸಿಂಹ ಮಾಣಿ, ಅಕ್ಷಯ ರಜಪೂತ್, ರೈತ ಸಂಘದ ಶೀಧರ ಶೆಟ್ಟಿ ಬೈಲುಗುತ್ತು, ಮಾಣಿ ಗ್ರಾಮ ಪಂಚಾಯತಿ ಅಧ್ಯಕ್ಷ ಸುದೀಪ್ ಕುಮಾರ್ ಶೆಟ್ಟಿ, ರೈತ ಸಂಘಟನೆಯ ಇದಿನಬ್ಬ ನಂದಾವರ, ಅಲ್ಫೊನ್ಸ್ ಡಿಸೋಜಾ ಚಂದ್ರಶೇಖರ ಇನ್ನಾ ಮೊದಲಾದವರು ಮಾತನಾಡಿದರು.

ರೈತರಿಗೆ ಅನ್ಯಾಯ ಆಗುವ ಜತೆಗೆ ತುಳುನಾಡಿನ ದೈವ ದೇವರ ಪವಿತ್ರ ಸಾನಿಧ್ಯಗಳಿಗೆ ಹಾನಿಯಾಗುತ್ತಿದೆ. ದೈವಸ್ಥಾನ, ದೇವಸ್ಥಾನ, ನಾಗ ಬನ, ಮಸೀದಿ, ಚರ್ಚ್, ಶಾಲೆಗಳ ಮೇಲೆಯೇ ವಿದ್ಯುತ್ ಮಾರ್ಗ ಹಾದು ಹೋಗುತ್ತಿದೆ. ಮಿಜಾರು ಗೋಪಾಲಕೃಷ್ಣ ದೇವಸ್ಥಾನದ ಮೇಲೆ, ಕಜಂಬು ಉತ್ಸವ ನಡೆಯುವ ಕೇಪು ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದಲ್ಲಿ ಪ್ರಸರಣ ಮಾರ್ಗ ನಿರ್ಮಾಣವಾಗಲಿದೆ. ಇದರಿಂದ ಜನರ ಧಾರ್ಮಿಕ ಭಾವನೆ ದಕ್ಕೆಯಾಗುವ ಜತೆಗೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಮಸ್ಯೆಯಾಗಲಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.

ಜಿಲ್ಲಾಧಿಕಾರಿ ಆಗಮನಕ್ಕೆ ಪಟ್ಟು:

ಸ್ಥಳಕ್ಕೆ ಜಿಲ್ಲಾಧಿಕಾರಿ ಬರಬೇಕು ಎಂದು ಪ್ರತಿಭಟನೆಕಾರರು ಪಟ್ಟು ಹಿಡಿದು ಕುಳಿತರು. ಜಿಲ್ಲಾಧಿಕಾರಿ ಅವರು ಡೆಪ್ಯುಟಿ ತಹಸೀಲ್ದಾರರನ್ನು ಸ್ಥಳಕ್ಕೆ ಕಳುಹಿಸಿದರೂ ಒಪ್ಪದ ರೈತರು ಜಿಲ್ಲಾಧಿಕಾರಿಯೇ ಬರಬೇಕು ಎಂದು ಹಟ ಹಿಡಿದರು. ವಿಟ್ಲ- ಕಲ್ಲಡ್ಕ ರಸ್ತೆ ಸಂಪರ್ಕ ಬಂದ್ ಮಾಡುವುದಾಗಿಯೂ ಎಚ್ಚರಿಕೆ ನೀಡಿದರು.ತಹಸೀಲ್ದಾರ್‌ ಮಂಜುನಾಥ ಪ್ರತಿಭಟನೆಕಾರರ ಮನವೊಲಿಸುವಲ್ಲಿ ಯಶಸ್ವಿಯಾದರು. ವಿದ್ಯುತ್ ಪ್ರಸರಣ ಯೋಜನೆ ಕಾಮಗಾರಿ ತಕ್ಷಣ ನಿಲ್ಲಿಸುವಂತೆ ಗುತ್ತಿಗೆ ವಹಿಸಿಕೊಂಡವರಿಗೆ ತಿಳಿಸಲಾಗಿದೆ ಮುಂದಿನ ವಾರದೊಳಗೆ ಜಿಲ್ಲಾಧಿಕಾರಿ ಮತ್ತು ಇತರ ಅಧಿಕಾರಿಗಳನ್ನು ಒಳಗೊಂಡು ಸಾರ್ವಜನಿಕ ಸಭೆ ನಡೆಸಿ ಸಮಸ್ಯೆ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಪ್ರತಿಭಟನೆ ಕಾರರು ಸಲ್ಲಿಸಿದ ಮನವಿ ಸ್ವೀಕರಿಸಿದರು.ಚಿತ್ತರಂಜನ್ ಪ್ರಸ್ತಾವನೆಗೈದರು. ರೈತ ಸಂಘದ ಶಿವಾನಂದ ಮತ್ತು ವಿಟ್ಲದ ಸನಾತನ ಹಿಂದೂ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ, ಕಾರ್ಯದರ್ಶಿ ಬಿ. ದೇವಿಪ್ರಸಾದ್ ಶೆಟ್ಟಿ ನಿರೂಪಿಸಿದರು.ಮಂಗಳ ಪದವಿನಲ್ಲಿ ನಡೆದ ಬೃಹತ್ ಸಭೆಯ ಬಳಿಕ ಕೆಲಿಂಜ ಉಳ್ಳಾಲ್ತಿ ಅಮ್ಮನ ಸನ್ನಿಧಿಗೆ ಪಾದಯಾತ್ರೆ ನಡೆಯಿತು ಅಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.ವಿಟ್ಲದ ಸನಾತನ ಹಿಂದೂ ಧರ್ಮ ಮತ್ತು ಧಾರ್ಮಿಕ ನಂಬಿಕೆಗಳ ಸಂರಕ್ಷಣಾ ಹೋರಾಟ ಸಮಿತಿ, ಹಲವು ಹಿಂದೂ ಸಂಘಟನೆಗಳು, ಸಾಮಾಜಿಕ ಮತ್ತು ರೈತ ಸಂಘಟನೆಗಳ ಸಹಯೋಗದೊಂದಿಗೆ ಪ್ರತಿಭಟನೆ ಆಯೋಜಿಸಲಾಗಿತ್ತು.ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ವಿವಿಧ ರೈತ ಸಂಘಟನೆಗಳ ಮುಖಂಡರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!