ಕನ್ನಡಪ್ರಭ ವಾರ್ತೆ ರಾಯಚೂರು
ಜಿಲ್ಲಾ ಕೇಂದ್ರವಾದ ರಾಯಚೂರಿನಲ್ಲಿ ಸೇರಿದ ಸಮಿತಿ ಪದಾಧಿಕಾರಿಗಳು,ಸದಸ್ಯರು, ನೌಕರರು ಪ್ರತಿಭಟನಾ ಮೆರವಣಿಗೆ ಮುಖಾಂತರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು ಈ ವೇಳೆ ಬಿಗಿ ಭದ್ರತೆ ಕಲ್ಪಿಸಿದ್ದ ಪೊಲೀಸರು ಅದನ್ನು ತಡೆದರು ನಂತರ ಪ್ರತಿಭಟನಾ ನಿರತರು ಗೇಟ್ ಮುಂದೆ ಕುಳಿತು ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ನಂತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಪೂವಿತಾ ಎಸ್. ಅವರ ಮುಖಾಂತರ ಉಭಯ ಸರ್ಕಾರಗಳಿಗೆ ಮನವಿಯನ್ನು ರವಾನಿಸಿದರು.
ಈ ವೇಳೆ ಮಾತನಾಡಿದ ಉಭಯ ಸಮಿತಿಗಳ ಮುಖಂಡರು,ಕೇಂದ್ರ ಸರ್ಕಾರ ಐಸಿಡಿಎಸ್ಎ ನೀಡುತ್ತಿದ್ದ ಅನುದಾನವನ್ನು ಬೆಲೆ ಏರಿಕೆಗೆ ತಕ್ಕಂತೆ ಹೆಚ್ಚಳ ಮಾಡದೆ ನಿರಂತರವಾಗಿ ಕಡಿಮೆ ಮಾಡುತ್ತಿದೆ. ಬಿಸಿಯೂಟ ಯೋಜನೆಗೆ ಅನುದಾನ ಹೆಚ್ಚಳ ಮಾಡದೆ, ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಕೊಡುವ ಮುಖಾಂತರ ಬಲಹೀನಗೊಳಿಸಲಾಗುತ್ತಿದೆ. ಸರ್ಕಾರದ ನೌಕರರ ವಿರೋಧ ನೀತಿಯನ್ನು ಖಂಡಿಸಿ ಉಭಯ ಸಂಘಟನೆಗಳು ತೀವ್ರವಾಗಿ ಖಂಡಿಸಿ ಕೆಲಸ ಸ್ಥಗಿತಗೊಳಿಸಿ ಕರಾಳ ದಿನಾಚರಣೆಯನ್ನು ಆಚರಿಸಲಾಗುತ್ತಿದೆ ಎಂದರು.2017ರಿಂದ ಪೌಷ್ಠಿಕ ಆಹಾರಕ್ಕೆ ನೀಡಬೇಕಾದ ಘಟಕ ವೆಚ್ಚ ಹೆಚ್ಚಳ ಮಾಡದೆ ಅಂಗನವಾಡಿ ವ್ಯವಸ್ಥೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಮತ್ತೊಂದಡೆ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಮಾಡಲಾಗುತ್ತಿದೆ. ಇದರಿಂದ 3 - 6 ವರ್ಷದ ಮಕ್ಕಳನ್ನು ದೂರವಿಟ್ಟು ಸರ್ಕಾರಿ ಶಾಲೆಗಳಲ್ಲಿ ಎಲ್ಕೆಜಿ - ಯುಕೆಜಿ ಪ್ರಾರಂಭಿಸ ಲಾಗುತ್ತಿದೆ. ಇದರಿಂದ ಅಂಗವಾಡಿ ಕೇಂದ್ರಗಳಲ್ಲಿ ಫಲಾನುಭವಿಗಳ ಸಂಖ್ಯೆ ಇಳಿಮುಖವಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯ ಸರ್ಕಾರದ ಚುನಾವಣೆ ಭರವಸೆಯಂತೆ ಅಂಗನವಾಡಿ ಕಾರ್ಯಕರ್ತೆಯರಿಗೆ 15,000 ರು. ಮತ್ತು 10,000 ರು. ಸಹಾಯಕಿಯರಿಗೆ ಜಾರಿ ಮಾಡಬೇಕು. ಬಿಸಿಯೂಟ ನೌಕರರಿಗೆ 7,000 ರು. ಹೆಚ್ಚಿಸಬೇಕು. ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಎಲ್ಕೆಜಿ - ಯುಕೆಜಿ ವಿಸ್ತರಣೆ ಆಗಬೇಕು, ಬಿಸಿಯೂಟ ನೌಕರರಿಗೆ ಸಾದಿಲ್ವಾರು ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್ಡಿಎಂಸಿಗೆ ವರ್ಗಾವಣೆ ಮಾಡಿರುವ ಕ್ರಮ ವಾಪಸ್ಸಾಗಬೇಕು, ಸಾದಿಲ್ವಾರು ಖಾತೆ ಮೊದಲಿನಂತೆ ಬದಲಾಯಿಸಬೇಕು. ಅಂಗನವಾಡಿ ನೌಕರರಿಗೆ ಇಲಾಖೆತರ ಯಾವುದೇ ಕೆಲಸಗಳನ್ನು ನೀಡಬಾರದು ಅಂಗನವಾಡಿ ನೌಕರರನ್ನು ಬಿಎಲ್ಓ ಕೆಲಸದಿಂದ ಸಂಪೂರ್ಣ ಕೈಬಿಡಬೇಕು. ರಾಯಚೂರು ಜಿಲ್ಲೆಯಲ್ಲಿ ಬಿಸಿಯೂಟ ಯೋಜನೆಯಲ್ಲಿ ತರಕಾರಿ ಸರಬರಾಜು ಮಾಡುವುದನ್ನು ಸ್ವ-ಸಹಾಯ ಗುಂಪು ಗಳಿಗೆ ಕೊಟ್ಟಿರುವುದನ್ನು ವಾಪಸ್ ಪಡೆಯಬೇಕು. ಅಂಗನವಾಡಿ ನೌಕರರಿಗೆ ಪೋಷನ್ ಟ್ರ್ಯಾಕರ್ ಹೆಸರಿನಲ್ಲಿ ಕಿರುಕುಳ ನಿಲ್ಲಸಬೇಕು, ಅಂಗನವಾಡಿ ಕೇಂದ್ರ ಗಳಿಗೆ ಸ್ಥಳೀಯ ಆಹಾರ ಪದಾರ್ಥಗಳನ್ನು ಪೂರೈಕೆ ಮಾಡಬೇಕೆಂಬ ಬೇಡಿಕೆಗಳನ್ನು ಒಳಗೊಂಡು ಇನ್ನೀತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದರು.
---