
ಕಾರವಾರ: ರಾಜ್ಯ ಬಜೆಟ್‌ನಲ್ಲಿ ಗೌರವಧನ ಹೆಚ್ಚಳ ಹಾಗೂ ವಿವಿಧ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ಜಿಲ್ಲಾ ಸಮಿತಿ ವತಿಯಿಂದ ಶುಕ್ರವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.ನಗರದ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ನಡೆದ ಈ ಮೆರವಣಿಗೆಯಲ್ಲಿ ನೂರಾರು ಆಶಾ ಕಾರ್ಯಕರ್ತೆಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತರ್ಕಬದ್ಧಗೊಳಿಸುವಿಕೆ ಎಂಬ ಹೆಸರಿನಲ್ಲಿ ರಾಜ್ಯದ ಸುಮಾರು 7,000 ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ಕೈಬಿಡಲು ಸರ್ಕಾರ ಮುಂದಾಗಿರುವುದು ಕೇಂದ್ರ ಸರ್ಕಾರದ ಮಾರ್ಗಸೂಚಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇಡೀ ದೇಶದ ಯಾವ ರಾಜ್ಯದಲ್ಲೂ ಇಂತಹ ನೀತಿ ಇಲ್ಲ. ಈಗಾಗಲೇ ಕೆಲಸ ಕಳೆದುಕೊಂಡಿರುವ ಆಶಾ ಸುಗಮಕಾರರನ್ನು ತಕ್ಷಣವೇ ಮರುನೇಮಕ ಮಾಡಿಕೊಳ್ಳಬೇಕು ಮತ್ತು ಬಾಕಿ ಇರುವ ಗೌರವಧನವನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.
ಜಿಲ್ಲಾಧ್ಯಕ್ಷೆ ಪದ್ಮಾವತಿ ಚಲವಾದಿ, ಕೊರೋನಾ ಸಂಕಷ್ಟದ ಕಾಲದಲ್ಲಿ ತಮ್ಮ ಪ್ರಾಣದ ಹಂಗು ತೊರೆದು ಸೇವೆ ಸಲ್ಲಿಸಿದ ಆಶಾ ಕಾರ್ಯಕರ್ತೆಯರನ್ನು ಸರ್ಕಾರ ಈಗ ನಿರ್ಲಕ್ಷಿಸುತ್ತಿದೆ. ಬಜೆಟ್‌ನಲ್ಲಿ ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರಿಗೆ ನೀಡಿದ ಮಾದರಿಯಲ್ಲೇ ಆಶಾಗಳಿಗೂ ವೇತನ ಹೆಚ್ಚಳ ಮಾಡಬೇಕು. ಕೇಂದ್ರದ ಪ್ರೋತ್ಸಾಹಧನ ಹಾಗೂ ರಾಜ್ಯದ ಗೌರವಧನ ಸೇರಿ ಮಾಸಿಕ ₹15 ಸಾವಿರ ವೇತನ ನಿಗದಿಪಡಿಸಬೇಕು. ನಿವೃತ್ತರಾಗುವವರಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು ಎಂದು ಆಗ್ರಹಿಸಿದರು.ಸರ್ಕಾರ ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಹಕ್ಕೊತ್ತಾಯದ ಮನವಿ ಪತ್ರ ಸಲ್ಲಿಸಿದರು.
ಈ ಪ್ರತಿಭಟನೆಯಿಂದಾಗಿ ನಗರದ ಪ್ರಮುಖ ರಸ್ತೆಗಳಲ್ಲಿ ಕೆಲಕಾಲ ಸಂಚಾರ ವ್ಯತ್ಯಯ ಉಂಟಾಗಿತ್ತು.