ಸೆ.8 ಕ್ಕೆ ಟಿಬಿ ಡ್ಯಾಮ್‌ ಬಳಿ ರೈತರಿಂದ ಬೃಹತ್‌ ಹೋರಾಟ

KannadaprabhaNewsNetwork |  
Published : Aug 26, 2025, 01:02 AM IST
25ಕೆಪಿಆರ್‌ಸಿಆರ್‌ 03: ಚಾಮರಸ ಮಾಲಿಪಾಟೀಲ್ | Kannada Prabha

ಸಾರಾಂಶ

ತುಂಗಭದ್ರಾ ಜಲಾಶಯದ ಕ್ರಸ್ಟ್‌ ಗೇಟ್‌ಗಳ ಬದಲಾವಣೆ ವಿಚಾರದಲ್ಲಿ ತೋರಿರುವ ನಿರ್ಲಕ್ಷ್ಯ ಧೋರಣೆ, ಹೂಳಿನ ಸಮಸ್ಯೆ, ಅಕ್ರಮ ನೀರಾವರಿ, ಸಮತೋಲನ ಜಲಾಶಯ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವುದರ ಕುರಿತು ಟಿಬಿ ಡ್ಯಾಮ್‌ ಅಧಿಕಾರಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರ ಇದೇ ಆ.31 ರೊಳಗೆ ತುಟಿಬಿಚ್ಚಬೇಕು ಇಲ್ಲವಾದಲ್ಲಿ ಸೆ.8 ರಂದು ಟಿಬಿ ಡ್ಯಾಮ್‌ ಬಳಿ ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ರೈತರು ಬೃಹತ್‌ ಹೋರಾಟವನ್ನು ನಡೆಸಬೇಕಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ್‌ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ರಾಯಚೂರು

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸುಮಾರು ಏಳು ದಶಕಗಳ ಹಳೆಯದಾದ ಟಿಬಿ ಡ್ಯಾಮ್‌ನ ಎಲ್ಲ ಗೇಟ್‌ಗಳನ್ನು ಬದಲಿಸಬೇಕು ಎಂದು ತಜ್ಞರು ಸೂಚಿಸಿದ್ದರೂ ಸಹ, ಡ್ಯಾಮ್‌ ಅಧಿಕಾರಿಗಳು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ತಕ್ಷಣವಾಗಿ ಸ್ಪಂದಿಸದೇ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿವೆ. ಗೇಟ್‌ಗಳ ಬದಲಾವಣೆ ಕಾರ್ಯ ಆರಂಭಗೊಂಡಲ್ಲಿ ಡ್ಯಾಮ್‌ ವ್ಯಾಪ್ತಿಗೆ ಬರುವ 15 ಲಕ್ಷ ಎಕರೆ ಜಮೀನಿನಲ್ಲಿ ಬೇಸಿಗೆ ಬೆಳೆ ಸಿಗುವುದಿಲ್ಲ ಈ ಕಾರ್ಯ ವಿಳಂಬಗೊಂಡಲ್ಲಿ ಮುಂದಿನ ವರ್ಷವು ಬೆಳೆಯಿಲ್ಲದಂತಾಗುತ್ತದೆ ಎನ್ನುವ ಆತಂಕ ರೈತರನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಗೇಟ್‌ಗಳ ಬದಲಾವಣೆ ವಿಚಾರದಲ್ಲಿ ಸಂಪೂರ್ಣ ನಿರ್ಲಕ್ಷ್ಯ ವಹಿಸಿರುವ ಸರ್ಕಾರಗಳು ಜಲಾಶಯದಲ್ಲಿ ಹಲವಾರು ದಶಕಗಳಿಂದ ಜಲಾಶಯದಲ್ಲಿ ಸಂಗ್ರಹಗೊಂಡಿರುವ ಶೇ.33 ರಷ್ಟು ಹೂಳಿನ ಸಮಸ್ಯೆಯನ್ನು ಸಹ ಬಗೆಹರಿಸುವ ವಿಚಾರವಾಗಿ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲ, ಇಷ್ಟೇ ಅಲ್ಲದೇ ಟಿಬಿ ವ್ಯಾಪ್ತಿಯಲ್ಲಿ ಎರಡರಿಂದ ಮೂರು ಲಕ್ಷ ಎಕರೆ ಅಕ್ರಮ ನೀರಾವರಿ ತಡೆಗೂ ಮುಂದಾಗಿಲ್ಲ, ಈ ಎಲ್ಲ ಸಮಸ್ಯೆಗಳನ್ನಿಟ್ಟುಕೊಂಡು ಬೃಹತ್‌ ಹೋರಾಟ ಕೈಗೊಂಡು ಆಡಳಿತ ವರ್ಗಕ್ಕೆ ಬಿಸಿಮುಟ್ಟಿಸಲಾಗುವುದು ಎಂದರು.

ಕಳೆದ ಜುಲೈ ಮತ್ತು ಆಗಸ್ಟ್‌ ಮೊದಲ ವಾರದಲ್ಲಿ ಭಾರಿ ಮಳೆಯಿಂದಾಗಿ ಹಳ್ಳ-ಹೊಳೆ ದಡದಲ್ಲಿನ ಜಮೀನುಗಳಲ್ಲಿ ಬೆಳೆದ ಬೆಳೆಗಳು ಹಾನಿಗೀಡಾಗಿದ್ದು, ಜಿಲ್ಲಾಡಳಿತವು ಜಂಟಿ ಸಮೀಕ್ಷೆ ಕೈಗೊಂಡು ನಷ್ಟ ಪರಿಹಾರ ಒದಗಿಸಬೇಕು, ಜಿಲ್ಲೆಯಲ್ಲಿ ಉಂಟಾಗಿರುವ ರಸಗೊಬ್ಬರ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ಕೃಷಿ ಇಲಾಖೆ ವಿಫಲಗೊಂಡಿದೆ. ಸೊಸೈಟಿಗಳು ಗೊಬ್ಬರ ಪಡೆದು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದು, ಈ ದಂಧೆಯಲ್ಲಿ ಇಡೀ ವ್ಯವಸ್ಥೆಯೇ ತೊಡಗಿದೆ ಎಂದು ಆರೋಪಿಸಿದರು.

ಕೇಂದ್ರ ಸರ್ಕಾರವು ಅನಧಿಕೃತ ಪಂಪ್‌ಸೆಟ್‌ಗಳ ತೆರವಿಗೆ ಮುಂದಾಗಿದ್ದು, ಈ ಕಾರ್ಯವನ್ನು ನಿಲ್ಲಿಸಿ ರೈತರ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸಬೇಕು ಎಂದು ಒತ್ತಾಯಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘಟನೆ ಮುಖಂಡರಾದ ಬೂದೆಪ್ಪ ಗಬ್ಬೂರು, ಪ್ರಭಾಕಾರ ಪಾಟೀಲ್‌ ಇಂಗಳಧಾಳ, ದೇವರಾಜ ನಾಯಕ, ಲಿಂಗಾರೆಡ್ಡಿಗೌಡ, ಶಂಕ್ರಪ್ಪಗೌಡ ದೇವತಗಲ್ ಸೇರಿ ಇತರರು ಇದ್ದರು.

PREV

Recommended Stories

ದಸರಾ ಉದ್ಘಾಟನೆಗೆ ಬಾನು : ಬಿಜೆಪಿ vs ಕಾಂಗ್ರೆಸ್ ಜಟಾಪಟಿ
ಧರ್ಮಸ್ಥಳ ಎಸ್‌ಐಟಿ ಅಧಿಕಾರಿ ಅನುಚೇತ್‌ ಅಮೆರಿಕ ಪ್ರವಾಸಕ್ಕೆ